ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಜೋಗ್ ಫಾಲ್ಸ್ KSRTC ವಿಶೇಷ ಬಸ್ಸಿಗೆ ಹೆಚ್ಚಿದ ಬೇಡಿಕೆ

09:53 AM Jul 13, 2024 IST | Samyukta Karnataka

ಹುಬ್ಬಳ್ಳಿ: ಮಳೆಗಾಲದ ಪ್ರಯುಕ್ತ ವಿಶ್ವವಿಖ್ಯಾತ ಜೋಗ್ ಫಾಲ್ಸ್ ವೀಕ್ಷಣೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಆರಂಭಿಸಲಾದ ವಿಶೇಷ ಬಸ್ಸುಗಳಿಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದ್ದು ಪ್ರಯಾಣಿಕರ ಬೇಡಿಕೆಯ ಮೇರೆಗೆ ಬಸ್ಸುಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಮಲೆನಾಡು ವ್ಯಾಪ್ತಿಯ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ವಿಶ್ವ ವಿಖ್ಯಾತ ಜೋಗ ಜಲಪಾತ ಮೈದುಂಬಿ ಕೊಂಡಿದೆ. ಜೊತೆಗೆ ಸುತ್ತಲಿನ ರುದ್ರ ರಮಣೀಯ ನಿಸರ್ಗ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಮನಸಿಗೆ ಮುದ ನೀಡುವ ದೃಶ್ಯ ವೈಭವ ಸವಿಯಲು ಇದು ಅತ್ಯಂತ ಸೂಕ್ತ ಕಾಲ.

ಕುಟುಂಬ ಸಮೇತ ಹೋಗಿ ಬರಲು ಅನುಕೂಲವಾಗುವಂತೆ ವಾರಂತ್ಯದಲ್ಲಿ ಜುಲೈ 14ರಿಂದ ಪ್ರತಿ ರವಿವಾರ ಒಂದು ಮಲ್ಟಿ ಎಕ್ಸೆಲ್ ವೋಲ್ವೋ ಐರಾವತ ಎಸಿ ಹಾಗೂ ಒಂದು ರಾಜಹಂಸ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ಖಾಸಗಿ, ವೈಯಕ್ತಿಕ ವಾಹನ ಪ್ರಯಾಣಕ್ಕಿಂತ ಹೆಚ್ಚು ಆರಾಮದಾಯಕ ಹಾಗೂ ಮಿತವ್ಯಯಕರವಾಗಿರುವುದರಿಂದ ಮಾಹಿತಿ ಪ್ರಕಟಿಸಿದ 48 ತಾಸುಗಳಲ್ಲಿ ಎರಡೂ ಬಸ್ಸುಗಳು ಭರ್ತಿಯಾಗಿದ್ದು ಹೆಚ್ಚುವರಿ ಬಸ್ಸುಗಳಿಗಾಗಿ ಸಾರ್ವಜನಿಕರಿಂದ ನಿರಂತರ ಬೇಡಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಮಲ್ಟಿ ಆ್ಯಕ್ಸಲ್ ವೋಲ್ವೋ ಎಸಿ ಐರಾವತ ಬಸ್ ಹಾಗೂ ರಾಜಹಂಸ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಸುಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.
www.ksrtc.in ಅಥವ KSRTC Mobile App ಮೂಲಕ ಆನ್ ಲೈನ್ ನಲ್ಲಿ ಹಾಗೂ ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಜೋಗ ಜಲಪಾತದ ದೃಶ್ಯ ವೈಭವ ಕೆಲವೇ ದಿನಗಳ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ವಿವಿಧ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಹಲವಾರು ನೌಕರರಿಗೆ ರವಿವಾರ ಕೆಲಸದ ದಿನವಾಗಿದ್ದು ವಾರದ ಮಧ್ಯದಲ್ಲಿ ರಜೆ ಇರುತ್ತದೆ. ಅಂತಹವರಿಗೆ ಹಾಗೂ ಇತರ ಆಸಕ್ತರಿಗೆ ಅನುಕೂಲವಾಗುವಂತೆ ಶನಿವಾರ ಮತ್ತು ವಾರದ ದಿನಗಳಲ್ಲಿಯೂ ಸಹ ವಿಶೇಷ ಬಸ್ಸಿನ ವ್ಯವಸ್ಥೆ ಮಾಡುವಂತೆ ಹಲವಾರು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಬೇಡಿಕೆ ಬರುತ್ತಿದೆ. ಜುಲೈ 20ರಿಂದ ಶನಿವಾರ ಹಾಗೂ ರವಿವಾರ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ರಾಜಹಂಸ ಬಸ್ಸಿಗೆ ಕನಿಷ್ಠ 35 ಹಾಗೂ ವೋಲ್ವೊ ಬಸ್ಸಿಗೆ ಕನಿಷ್ಟ 45 ಜನ ಪ್ರಯಾಣಿಕರು ಇದ್ದಲ್ಲಿ ಅವರು ಬಯಸಿದ ದಿನ ಹಾಗೂ ಸಮಯಕ್ಕೆ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತದೆ. ಆಸಕ್ತರು ದೂರವಾಣಿ ಸಂಖ್ಯೆ 7760 991682 / 7760 991674 ರಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

Next Article