For the best experience, open
https://m.samyuktakarnataka.in
on your mobile browser.

ಜೋಶಿ ವಿರುದ್ಧ ಮುತ್ತಣ್ಣವರ ಸ್ಪರ್ಧೆ

09:08 PM Mar 20, 2024 IST | Samyukta Karnataka
ಜೋಶಿ ವಿರುದ್ಧ ಮುತ್ತಣ್ಣವರ ಸ್ಪರ್ಧೆ

ಹುಬ್ಬಳ್ಳಿ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕಾಂತೇಶ ಅವರಿಗೆ ಟಿಕೆಟ್ ನೀಡದಿದ್ದರೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ ಎಂದು ಬಿಜೆಪಿ ಮುಖಂಡ ಶಿವಾನಂದ ಮುತ್ತಣ್ಣವರ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಕುರುಬ ಸಮುದಾಯಕ್ಕೆ ಅನ್ಯಾಯವಾಗಿದೆ. ಯಾವೊಬ್ಬ ಕುರುಬರಿಗೂ ಈ ರಾಜ್ಯದಲ್ಲಿ ಪ್ರಾಧಾನ್ಯತೆ ಕೊಡದೆಯಿರುವುದು ಖಂಡನೀಯ. ಆದ್ದರಿಂದ ನಮ್ಮ ಸಮುದಾಯ ಸಿದ್ದರಾಮಯ್ಯ ಅವರನ್ನು ನಾಯಕ ಎಂದು ಗುರುತಿಸಿಕೊಂಡಿದೆ. ಇದನ್ನು ತಪ್ಪಿಸುವ ಪ್ರಾಮಾಣಿಕ ಕೆಲಸ ಬಿಜೆಪಿ ಹೈಕಮಾಂಡ್‌ನಿಂದ ಆಗದೆ ಇರುವುದು ದುರ್ದೈವ ಎಂದು ದೂರಿದರು.
೨೮ ಲೋಕಸಭಾ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಒಬ್ಬರಿಗೆ ಒಂದು ಟಿಕೆಟ್ ಕೊಡಲು ಸಾಧ್ಯವಿಲ್ಲವೆಂದರೆ. ಈ ಸಮುದಾಯವನ್ನು ಕೇಂದ್ರ ಬಿಜೆಪಿ ಹೈಕಮಾಂಡ್ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಈ ನಿಟ್ಟಿನಲ್ಲಿ ಏಪ್ರಿಲ್ ತಿಂಗಳಿನಲ್ಲಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕುರುಬ ಮತದಾರರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ೨ ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಆಗಮಿಸಲಿದ್ದಾರೆ. ನನ್ನ ಪರವಾಗಿ ಈಶ್ವರಪ್ಪನವರು ಪ್ರಚಾರಕ್ಕೆ ಬರಲಿದ್ದು, ಸಮಾವೇಶದ ಉದ್ಘಾಟನೆ ಮಾಡಲಿದ್ದಾರೆ ಎಂದರು.