For the best experience, open
https://m.samyuktakarnataka.in
on your mobile browser.

ಜ್ಞಾನವಾಪಿ ಸಮೀಕ್ಷೆ: ಪ್ರತಿಕ್ರಿಯೆ ಕೇಳಿದ ಸುಪ್ರೀಂ

10:21 PM Nov 22, 2024 IST | Samyukta Karnataka
ಜ್ಞಾನವಾಪಿ ಸಮೀಕ್ಷೆ  ಪ್ರತಿಕ್ರಿಯೆ ಕೇಳಿದ ಸುಪ್ರೀಂ

ನವದೆಹಲಿ: 'ಶಿವಲಿಂಗ' ಪತ್ತೆಯಾದ ಪ್ರದೇಶದಲ್ಲಿ ಎಎಸ್‌ಐ ಸಮೀಕ್ಷೆ ನಡೆಸುವಂತೆ ಹಿಂದೂ ಕಡೆಯಿಂದ ಮಾಡಿದ ಮನವಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಯಿಂದ ಪ್ರತಿಕ್ರಿಯೆ ಕೇಳಿದೆ. ನ್ಯಾಯಾಲಯದ ಆದೇಶದ ಮೇರೆಗೆ ಮೇ ೧೬, ೨೦೨೨ರಂದು ಜ್ಞಾನವಾಪಿ ಮಸೀದಿಯ ಕಾಲು ತೊಳೆದುಕೊಳ್ಳುತ್ತಿದ್ದ ಕೊಳದಲ್ಲಿ ಶಿವಲಿಂಗದ ಆಕೃತಿಯೊಂದು ಇರುವುದು ಪತ್ತೆಯಾಗಿತ್ತು. ಹಾಗಾಗಿ ಆ ಪ್ರದೇಶವನ್ನು ಸೀಲ್ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ಮುಸ್ಲಿಂ ಕಡೆಯವರು ಅದನ್ನು ಕಾರಂಜಿ ಎಂದು ಕರೆದಿದ್ದರು.
ಶುಕ್ರವಾರ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಹಿಂದೂ ಕಡೆಯವರು ಸಲ್ಲಿಸಿದ್ದ ಮನವಿಯ ಮೇಲೆ ನೋಟಿಸ್ ಜಾರಿ ಮಾಡಿದೆ. ಡಿಸೆಂಬರ್ ೧೭ರೊಳಗೆ ಅಂಜುಮನ್ ಇಂತೆಜಾಮಿಯಾ ಮಸೀದಿಯ ನಿರ್ವಹಣಾ ಸಮಿತಿಯಿಂದ ಪ್ರತಿಕ್ರಿಯೆಯನ್ನು ಕೋರಿದೆ. ಶಿವಲಿಂಗ ಪತ್ತೆಯಾದ ಸೀಲ್ಡ್ ಪ್ರದೇಶದ ಹೊರಗಿನ ಪ್ರದೇಶವನ್ನು ಈಗಾಗಲೇ ಸಮೀಕ್ಷೆ ಮಾಡಲಾಗಿದೆ ಎಂದು ಹಿಂದೂ ಕಡೆಯ ಮನವಿ ತಿಳಿಸಿದೆ.