ಝಿಕಾ ವೈರಸ್‌ಗೆ ವೃದ್ಧ ಬಲಿ: ಡಿಹೆಚ್‌ಒ ಸ್ಪಷ್ಟನೆ
ಶಿವಮೊಗ್ಗ : ಜಿಲ್ಲೆಯಲ್ಲಿ ಝೀಕಾ ವೈರಸ್ ಸೋಂಕು ಪತ್ತೆಯಾಗಿದ್ದು, ಶಿವಮೊಗ್ಗದಲ್ಲಿ ಝೀಕಾ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ,
ಶಿವಮೊಗ್ಗದ ಗಾಂಧಿ ನಗರದ ನಿವಾಸಿ 74 ವರ್ಷದ ವೃದ್ಧರೊಬ್ಬರು ಶುಕ್ರವಾರ ಮನೆಯಲ್ಲಿ ಮೃತಪಟ್ಟಿದ್ದಾರೆ. ಜೂನ್ 19ರಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಇವರಲ್ಲಿ ಜೂ.21ರಂದು ಝೀಕಾ ವೈರಸ್ ಪತ್ತೆ ಆಗಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಗುಣಮುಖರಾಗಿ ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದರು. ಆದರೆ ಗುಣಮುಖರಾದವರು ಶುಕ್ರವಾರ ಮನೆಯಲ್ಲಿ ಮೃಪಟ್ಟಿದ್ದಾರೆ. ಅವರು ಜ್ವರ ಮಾತ್ರವಲ್ಲದೇ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಡಿಹೆಚ್ಓ ನಟರಾಜ್ ಸ್ಪಷ್ಟನೆ: ಕೇವಲ ಝಿಕಾ ವೈರಸ್‌ಗೆ ವ್ಯಕ್ತಿ ಸಾಯಲು ಸಾಧ್ಯವಿಲ್ಲ. ಅವರು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು. ಸಾವನ್ನಪ್ಪಿದ ವ್ಯಕ್ತಿ ಹೆಸರು ಹೇಳಲಾಗುವುದಿಲ್ಲ ಎಂದು ಶಿವಮೊಗ್ಗ ಡಿಹೆಚ್ಓ ನಟರಾಜ್ ಸ್ಪಷ್ಟನೆ ನೀಡಿದ್ದಾರೆ.
ಝಿಕಾ ವೈರಸ್ ಬಗ್ಗೆ ಎಚ್ಚರಿಕೆ ಇರಲಿ
ನೀರು ಶೇಖರಣಾ ಪರಿಕರಗಳನ್ನು (ಟ್ಯಾಂಕ್, ಟಬ್ ಇತ್ಯಾದಿ) ಮುಚ್ಚಿಡಬೇಕು. ಅಲ್ಲದೆ, ವಾರಕ್ಕೊಮ್ಮೆ ಅವುಗಳನ್ನು ಸ್ವಚ್ಛಗೊಳಿಸಬೇಕು.
ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಜತೆಗೆ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು.
ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.