ಟಾಸ್ಕ್‌ನಲ್ಲಿ ಫೇಲಾದರೆ ನಮ್ಮನ್ನು ಒದ್ದು ಹೊರಗೆ ಹಾಕಲಿ
ಅಥಣಿ: ಬಿಜೆಪಿ ವರಿಷ್ಠರು ನಮಗೆ ಟಾಸ್ಕ್ ಕೊಡಲಿ, ಕೊಟ್ಟಂತಹ ಟಾಸ್ಕ್‌ನಲ್ಲಿ ಫೇಲಾದರೆ ನಮ್ಮನ್ನು ಒದ್ದು ಹೊರಗೆ ಹಾಕಲಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಅಥಣಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷಕ್ಕೆ ಭ್ರಷ್ಟ ಅಂತ ಲೇಬಲ್ ಕೊಟ್ಟಿದ್ದು ವಿಜಯೇಂದ್ರ. ಅವನು ಅಧ್ಯಕ್ಷ ಆಗಿದ್ದಕ್ಕೆ ನನಗೆ ವಿರೋಧವಿದೆ. ನಾನು ಯಡಿಯೂರಪ್ಪನವರಿಗೆ ಯಾವತ್ತೂ ವಿರೋಧಿ ಅಲ್ಲ, ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ಬಗ್ಗೆ ನಮಗೆ ತುಂಬಾ ಗೌರವವಿದೆ. ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ ಎಂದರು.
ಬಿಜೆಪಿ ಪಕ್ಷದಲ್ಲಿ ಒಬ್ಬರ ಕೈಯಲ್ಲಿ ಆಡಳಿತ ಕೊಡುವುದು ಬೇಡ. ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಡುವಂತೆ ನಾವು ಮೊನ್ನೆ ಸಭೆಯಲ್ಲಿ ಹೇಳಿದ್ದೇವೆ ಎಂದರು. ಯಡಿಯೂರಪ್ಪನವರಿಗೆ ವಯಸ್ಸಾಯ್ತು ಅವರಿಗೆ ವಿಶ್ರಾಂತಿ ಅಗತ್ಯವಿದೆ. ಅವರ ಸಲಹೆ ಬೇಕಾದರೆ ಅವರ ಮನೆಗೆ ಹೋಗುತ್ತೇವೆ. ವರಿಷ್ಠರು ಇಂತ ಇಂತ ಕೆಲಸ ಮಾಡುವಂತೆ ಟಾಸ್ಕ್ ನೀಡಿ, ೧೫ ರಿಂದ ೨೦ ಜನರಿಗೆ ನಾಯಕತ್ವ ಕೊಡಿ, ೧೨೦ ರಿಂದ ೧೩೦ ಸ್ಥಾನಗಳನ್ನು ಗೆಲ್ಲಿಸಿ ಕೊಡುವ ಶಕ್ತಿ ನಮ್ಮಲ್ಲಿದೆ. ವರಿಷ್ಠರು ಕೊಟ್ಟಂತಹ ಟಾಸ್ಕ್‌ನಲ್ಲಿ ಫೇಲಾದರೆ ನಮ್ಮನ್ನು ಒದ್ದು ಹೊರಗೆ ಹಾಕಿ ಎಂದರು.