ಟಿಎಪಿಸಿಎಂಎಸ್ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ
ಶ್ರೀರಂಗಪಟ್ಟಣ: ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಅಧ್ಯಕ್ಷ ಜೆಡಿಎಸ್ ಬೆಂಬಲಿತ ಎಸ್.ಎಲ್.ದಿವಾಕರ್ ವಿರುದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರಿಂದ ಬುಧವಾರ ಅವಿಶ್ವಾಸ ನಿರ್ಣಯ ಮಂಡನೆಯಾಯಿತು.
ಎ ವರ್ಗದಿಂದ 4 ಮತ್ತು ಷೇರುದಾರರಿಂದ ಚುನಾಯಿತರಾದ ಬಿ ವರ್ಗದಿಂದ 08 ಮಂದಿ ಸೇರಿದಂತೆ ಒಟ್ಟು 12 ಸದಸ್ಯರ ಪೈಕಿ, ಎ ವರ್ಗದಿಂದ 4 ಮತ್ತು ಬಿ ವರ್ಗದಿಂದ 4 ಸದಸ್ಯರು ಅವಿಶ್ವಾಸ ನಿರ್ಣಯದಲ್ಲಿ ಪಾಲ್ಗೊಂಡು ಹಾಲಿ ಅಧ್ಯಕ್ಷ ಎಸ್.ಎಲ್.ದಿವಾಕರ್ ರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದರು.
ಚುನಾವಣಾಧಿಕಾರಿ ರವಿ ನೇತೃತ್ವದಲ್ಲಿ ಬುಧವಾರ ನಡೆದ ಅವಿಶ್ವಾಸ ನಿರ್ಣಯ ಮಂಡನೆ ಸಭೆಯಲ್ಲಿ ಎ ವರ್ಗದಿಂದ ಮೋಹನ್ ಕುಮಾರ್, ವಿಜಯ್ ಕುಮಾರ್, ಕೃಷ್ಣ, ರಾಮಲಿಂಗೇಗೌಡ ಹಾಗೂ ಬಿ ವರ್ಗದಿಂದ ಎಂ.ನಂದೀಶ್, ಬಸ್ತಿಪುರ ಕಾಂತರಾಜು, ಎನ್.ವಿ.ಕಾಂತಾಮಣಿ ಹಾಗೂ ಲಕ್ಷ್ಮಿದೇವಮ್ಮ ಹಾಜರಾಗಿ ಅಧ್ಯಕ್ಷರ ವಿರುದ್ದದ ಅವಿಶ್ವಾ ನಿರ್ಣಯಕ್ಕೆ ಬೆಂಬಲ ಸೂಚಿಸಿದರು. ಕಳೆದ ಮೂರು ವರ್ಷಗಳಿಂದ ಅಧ್ಯಕ್ಷರಾಗಿ ಮುಂದುವರೆದಿದ್ದ ಎಸ್.ಎಲ್.ದಿವಾಕರ್ ಸೇರಿದಂತೆ ಜಯರಾಜ್, ಶ್ರೀಕಂಠು ಮತ್ತು ಜಿ.ಪಿ.ಲಕ್ಷ್ಮಣ್ ಗೈರಾಗಿ ಸಭೆಯಿಂದ ಹೊರಗುಳಿದರು. ಈ ವೇಳೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ ರವಿ, ಸಹಕಾರ ಸಂಘ ಸಂಸ್ಥೆಗಳ ನಿಯಮದಡಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು, ಹಾಲಿ ಅಧ್ಯಕ್ಷರು ತಮ್ಮ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದರು. ಅವಿಶ್ವಾಸ ನಿರ್ಣಯದ ಬಳಿಕ ಮನ್ ಮುಲ್ ಅಧ್ಯಕ್ಷ ಬೋರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಸ್ವಾಮಿಗೌಡ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುರೇಶ್, ಮುಪುರಸಭೆ ಸದಸ್ಯ ಎಂ.ಎಲ್.ದಿನೇಶ್, ದಯಾನಂದ್, ಮುಖಂಡರುಗಳಾದ ನೆಲಮನೆ ಅನಿಲ್ ಕುಮಾರ್, ಸೋಮಸುಂದರ್, ದಿವಾಕರ್, ಪ್ರಸನ್ನ, ಸೋಮು ಸೇರಿದಂತೆ ಇತರರು ಉಪಸ್ಥಿತರಿದ್ದು, ಹಾಜರಿದ್ದ ಸದಸ್ಯರಿಗೆ ಅಭಿನಂಧನೆ ಸಲ್ಲಿಸಿದರು