ಟಿಕೆಟ್ ಬೇಕಾದರೆ ಹತ್ತನ್ನು ಒತ್ತಿ
ಸುಮ್ಮನೇ ಮಾಳಿಗೆಯ ಮೇಲೆ ಕುರ್ಚಿ ಹಾಕಿಕೊಂಡು ಕಾಲಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿದ್ದ ತಿಗಡೇಸಿ, ಮೊಬೈಲ್ ತೆಗೆದು ಸುಮ್ಮನೇ ನೋಡುತ್ತಿದ್ದಾಗ….ಜೋರಾಗಿ ರಿಂಗಣಿಸಿತು ಫೋನು. ಯಾರದ್ದು ಇರಬಹುದು ಇದು? ಮೂರೂ ಕ್ಷೇತ್ರಕ್ಕೆ ಟಿಕೆಟ್ ಕೇಳಿದ್ದೆ ಸೋದಿ ಮಾಮಾ ಮಾಡಿರಬಹುದಾ? ಇರಲಿ ಎಂದು ಸೋನಮ್ಮಾರಿಗೂ ಮೆಸೇಜ್ ಹಾಕಿದ್ದೆ ಅವರೇನಾದರೂ ಮಾಡಿದ್ದಾರಾ? ಅಥವಾ ಕೆಮ್ಮಿನ ಕ್ರೇಜಿ ಮಾಡಿದ್ದಾನಾ? ಇರಲಿ ತೆಗೆದುಕೊಳ್ಳುತ್ತೇನೆ ಎಂದು ಹಲೋ ಅನ್ನುತ್ತಿದ್ದಂತೆ….ಆ ಕಡೆಯಿಂದ ಹೆಣ್ಣುಮಗಳು ನಿಮಗೊಂದು ನಮಸ್ಕಾರ…ಅಂದಾಗ..
ತಿಗಡೇಸಿ; ಅಬಾಬ….ನಮಸ್ಕಾರ ಯಾರ್ ಮೇಡಂ ನೀವು?
ಆ ಕಡೆಯಿಂದ ನೀವು ಬೈ ಎಲೆಕ್ಷನ್ ಟಿಕೆಟ್ ಸಲುವಾಗಿ ಯೋಚಿಸುತ್ತಿದ್ದೀರಾ?
ತಿಗಡೇಸಿ; ಹೌದೂರಿ ಮೇಡಂ ನಿಮಗೆ ಹೇಗೆ ಗೊತ್ತಾಯಿತು?
ಆ ಕಡೆಯಿಂದ; ನೀವು ಆಕಾಂಕ್ಷಿಯಾಗಿದ್ದರೆ ಝೀರೋ ಒತ್ತಿ
ತಿಗಡೇಸಿ; ಅದರಲ್ಲೇನು ಅಂದು ಝೀರೋ ಒತ್ತಿದ
ಆ ಕಡೆಯಿಂದ; ನೀವು ಆರಿಸಿ ಬರುತ್ತೀರಿ ಎಂಬ ಗ್ಯಾರಂಟಿ ಇದೆಯೇ
ತಿಗಡೇಸಿ; ಏನ್ ಹಿಂಗ ಕೇಳ್ತೀರಿ…ನಾನೇ ಆರಿಸಿ ಬರೋದು
ಆ ಕಡೆಯಿಂದ; ನಿಮಗೆ ಭರವಸೆ ಇದ್ದರೆ ಎರಡನ್ನು ಒತ್ತಿ
ತಿಗಡೇಸಿ; ಇಷ್ಟೇನಾ ಅಂತ ಎರಡನ್ನು ಒತ್ತಿದ.
ಆ ಕಡೆಯಿಂದ ನಿಮಗೆ ಪಾರ್ಟಿಫಂಡ್ ಬೇಕಾದರೆ ೩ನ್ನು ಒತ್ತಿ
ತಿಗಡೇಸಿ; ಬೇಡ ಅಂತೀನಾ? ತಗೊಳ್ಳಿ ೩
ಆ ಕಡೆಯಿಂದ ಸರಿ…ನಿಮಗೆ ಸದ್ಯ ಟಿಕೆಟ್ ಬೇಕಾದರೆ ೧೦ನ್ನು ಒತ್ತಿ
ತಿಗಡೇಸಿ; ಇಂಥಾ ಚಾನ್ಸ್ ಬಿಟ್ಟೇನಾ? ತಗೊಳ್ಳಿ ಒತ್ತಿದೆ ಹತ್ತು….
ಆ ಕಡೆಯಿಂದ; ನೀವು ಬಸ್‌ಸ್ಟಾö್ಯಂಡಿಗೆ ಹೋಗಿ ಕೆಂಪು ಬಸ್ಸು ಹತ್ತಿ ಕುಳಿತುಕೊಳ್ಳಿ. ಆಗ ಕಂಡಕ್ಟರ್ ಬಂದು ಯಾರಿಲ್ಲಿ ಟಿಕೆಟ್ ಟಿಕೆಟ್ ಎಂದು ಕೇಳುತ್ತಾನೆ. ನೀವು ಹಣಕೊಟ್ಟು ಇಂತಹ ಊರು ಅಂತ ಹೇಳಿ ಆಗ ಟಿಕೆಟ್ ಕೊಡುತ್ತಾನೆ…ತೆಗೆದುಕೊಂಡು ಕಿಸೆಯಲ್ಲಿ ಇಟ್ಟುಕೊಳ್ಳಿ ಎಂದು ಹೇಳಿ ಫೋನ್ ಕಟ್ ಮಾಡಿದಳು.