ಟಿಬಿ ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಫೋಟೋಶೂಟ್
ಕೊಪ್ಪಳ: ತುಂಗಭದ್ರಾ ಡ್ಯಾಂ ಸೇತುವೆ ಮೇಲೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನಡೆದ ಫೋಟೋ ಹೊರಬಿದ್ದಿದ್ದು ಡ್ಯಾಂನ ಭದ್ರತಾ ಲೋಪ ಬಯಲಾಗಿದೆ. ಅಷ್ಟೊಂದು ಭದ್ರತೆ ಇರುವ ಡ್ಯಾಂ ಮೇಲೆ ಕಾರು ಕ್ಯಾಮೆರಾಮನ್ ಸಮೇತ ಜೋಡಿ ಹೋಗಿದ್ಹೇಗೆ? ಇವರಿಗೆ ಅನುಮತಿ ಕೊಟ್ಟವರಾರು? ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ.
ತುಂಗಭದ್ರಾ ಡ್ಯಾಂ ಒಂದು ಸೂಕ್ಷ್ಮ ಭದ್ರತಾ ವಲಯದ ಸ್ಥಳ. ಟಿ.ಬಿ.ಡ್ಯಾಂ ಸರ್ಕಲ್ ಭಾಗದ ಎಂಟ್ರಿ ಗೇಟ್ ಡ್ಯಾಂ ನಿಂದ ಒಂದು ಕಿ.ಮೀ ದೂರದಲ್ಲಿಯೇ ಹೋಗಿ ಪರಿಶೀಲನಾ ವ್ಯವಸ್ಥೆ ಇದೆ. ಇತ್ತ ಮುನಿರಾಬಾದ್ ಕಡೆಯಿಂದ ನದಿ ದಂಡೆಯವರೆಗೆ ಸಾರ್ವಜನಿಕರಿಗೆ ಎಂಟ್ರಿ ಇದ್ದು ಡ್ಯಾಂ ಸೇತುವೆ ಮೇಲೆ ಹೋಗದಂತೆ ಬಿಗಿ ಭದ್ರತೆ ಇದೆ. ಹೀಗಿದ್ದರೂ ಈ ಜೋಡಿ ಕಾರು, ಕ್ಯಾಮೆರಾಮನ್ ಸಮೇತ ಡ್ಯಾಂ ಸೇತುವೆ ಮೇಲೆ ಹೋಗಿದ್ಹೇಗೆ?
ಇತ್ತೀಚಿಗೆ ಡ್ಯಾಂ ನ 19ನೇ ಗೇಟ್ ಮುರಿದು ಅಪಾರ ನೀರು ನದಿಗೆ ಹೋಗಿದ್ದು ಆ ಸಂದರ್ಭದಲ್ಲಿ ಡ್ಯಾಂ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳು ಮೂಡಿದ್ದವು.
ಅದಕ್ಕೂ ಮುನ್ನ ಜುಲೈ 25ರ ಹೊತ್ತಿಗೆ ಡ್ಯಾಂ ತುಂಬಿ ಗೇಟ್‌ಗಳಿಂದ ನೀರು ಹೊರಬಿಟ್ಟ ಫೋಟೋ ವರದಿಗಾಗಿ ತೆಗೆಯಲು ಹೋದರೆ ಇಲ್ಲದೆ ರಗಳೆ ಸೃಷ್ಟಿಸುವ ಪೊಲೀಸರು ಮೇಲಧಿಕಾರಿಗಳಿಂದ ಅನುಮತಿ ಕೊಡಿಸಿದರೂ ಫೋಟೋ ತೆಗೆಯಲು ಕೆಲವರಿಗೆ ಸಹಕರಿಸುತ್ತಿರಲಿಲ್ಲ ಎಂಬ ದೂರು ಕೇಳಿಬಂದವು.
ಗೇಟ್ ಮುರಿದಾಗ ಗೇಟ್ ಕೂರಿಸುವ ಕಾರ್ಯ ಆರಂಭವಾದಾಗ ಸೇತುವೆ ಮೇಲೆ ಮಾಧ್ಯಮಗಳಿಗೆ ಅನುಮತಿ ನೀಡಲಿಲ್ಲ. ಡ್ಯಾಂ ಮುಂಭಾಗದಲ್ಲಿ ದೂರದಲ್ಲಿ ಇದ್ದು ಗೇಟ್ ಕೂರಿಸುವ ಕಾರ್ಯಾಚರಣೆ ವರದಿ ಮಾಡಲು ಹೋದರು. ಏಕೆಂದರೆ ಗೇಟ್ ಕೂರಿಸುವ ಕಾರ್ಯಾಚರಣೆ ಏನಾಗುತ್ತೊ ಎಂದು ಎರಡು ರಾಜ್ಯದ ರೈತರು ಕುತೂಹಲ ಆತಂಕದಿಂದ ಗಮನ ಕೊಟ್ಟಿದ್ದರು. ಆಗ ವರದಿ ಮಾಡಲು ಹೋದ ಮಾಧ್ಯಮಗಳಿಗೆ ಭದ್ರತಾ ನೆಪದಲ್ಲಿ ಸಹಕರಿಸಲಿಲ್ಲ ಕೆಲ ಅಧಿಕಾರಿಗಳು.
ಹೀಗೆ ಡ್ಯಾಂ ಭದ್ರತೆ ಬಗ್ಗೆ ಭಯಂಕರ ಪೋಸು ಕೊಟ್ಟ ಅಧಿಕಾರಿಗಳ ಭದ್ರತಾ ವೈಫಲ್ಯ ಈಗ ಬಯಲಾಗಿದ್ದು ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನಡೆದದ್ದು ಬಯಲಾಗಿದೆ. ಫೋಟೋ ಶೂಟ್ ನಲ್ಲಿ ಇರುವ ಯುವ ಜೋಡಿ ಎಲ್ಲಿಯವರು? ಅವರಿಗೆ ಸೇತುವೆ ಮೇಲೆ ಹೋಗಲು ಅನುಮತಿ ಕೊಟ್ಟ ಅಧಿಕಾರಿ ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಪ್ರಿವೆಡ್ಡಿಂಗ್ ಶೂಟ್‌ಗೆ ಬಳಸಿರುವ ಕಾರು ಬೆಂಗಳೂರು ಕೇಂದ್ರ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿದೆ ಎಂದು ಗೊತ್ತಾಗಿದೆ.