ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ
ಹೊಸದಿಲ್ಲಿ: ಬಿಸಿಸಿಐ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಇತರ ಸಹಾಯಕ ಸಿಬ್ಬಂದಿಗೆ ಒಪ್ಪಂದದ ವಿಸ್ತರಣೆಯನ್ನು ಘೋಷಿಸಿದೆ.
ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು ವಿಶ‍್ವ ಟೆಸ್ಟ್ ಚಾಂಪಿಯನ್ ಶಿಪ್ ಹಾಗೂ ಏಕದಿನ ವಿಶ್ವಕಪ್ ಕ್ರೀಡಾಕೂಟಗಳೆರಡಲ್ಲೂ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದ್ದು, ಕಳೆದ ಎರಡು ವರ್ಷಗಳಲ್ಲಿ ಉತ್ತಮ ದಾಖಲೆಯನ್ನೂ ಹೊಂದಿದೆ. ಹೀಗಾಗಿ ಬಿಸಿಸಿಐನಲ್ಲಿರುವ ಹಲವಾರು ಮಂದಿ ಅವರನ್ನೇ ಮುಖ್ಯ ತರಬೇತುದಾರರನ್ನಾಗಿ ಮುಂದುವರಿಸಿದರೆ ಹಿರಿಯರ ತಂಡವು ನಿರಂತರತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ಹೇಳಲಾಗಿದೆ. ರಾಹುಲ್ ದ್ರಾವಿಡ್ ಭಾರತದ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಸೇರಿದಂತೆ ಸಹಾಯಕ ಸಿಬ್ಬಂದಿಯ ಇತರ ಸದಸ್ಯರ ಒಪ್ಪಂದವನ್ನು ಬಿಸಿಸಿಐ ವಿಸ್ತರಿಸಿದೆ. ರಾಹುಲ್ ದ್ರಾವಿಡ್ ಅವರ ಎರಡನೇ ಅವಧಿಯ ಮುಖ್ಯ ಕೋಚ್ ಆಗಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಆರಂಭವಾಗಲಿದೆ. ಟೀಂ ಇಂಡಿಯಾ ಡಿಸೆಂಬರ್ 10 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3 ಟಿ20, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ.