For the best experience, open
https://m.samyuktakarnataka.in
on your mobile browser.

ಟೀಕೆಯ ಟ್ವೀಟ್‌ಗಳಿಗೆ ಅಭಿವೃದ್ಧಿಯ ಉತ್ತರ .

07:11 PM Aug 23, 2024 IST | Samyukta Karnataka
ಟೀಕೆಯ ಟ್ವೀಟ್‌ಗಳಿಗೆ ಅಭಿವೃದ್ಧಿಯ ಉತ್ತರ

ಬೆಂಗಳೂರು: ಸಾರಿಗೆ ಸಂಸ್ಥೆಗಳನ್ನು ದಿವಾಳಿ ಮಾಡಿ ಹೊರಟ್ಟಿದ್ದ ಬಿ.ಜೆ.ಪಿಯ ಅಂದಿನ ಮುಖ್ಯಮಂತ್ರಿಗಳಾದ ಬಿ ಎಸ್‌ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿರವರ ಅವಧಿಯಲ್ಲಿನ ಕರ್ಮಕಾಂಡಗಳನ್ನು ಪಟ್ಟಿ ಮಾಡಿ ಮತ್ತೊಮೆ ಮಗದೊಮ್ಮೆ ತಿಳಿಸಿ ಹೇಳಿ ಎಂದು ಟ್ಟೀಟ್ ಮೇಲೆ ಟ್ಟೀಟ್ ಮಾಡಿ ಕೋರುತ್ತಿರುವ ಬಿ.ಜೆ.ಪಿ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಗಮನಕ್ಕೆ ಎಂದು ಸಾಲು ಸಾಲು ಹಗರಣಗಳ ಪಟ್ಟಿಯನ್ನ ಸಾಮಾಜಿಕ ಜಾಲತಾಣದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸರಣಿ ಪೋಸ್ಟ್‌ ಮಾಡಿದ್ದಾರೆ.

  • ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಶ್ರೀ ಯಡಿಯೂರಪ್ಪ‌ ಹಾಗೂ ಶ್ರೀ. ಬೊಮ್ಮಾಯಿ ಮಾನ್ಯ ಮುಖ್ಯಮಂತ್ರಿಗಳಾಗಿದ್ದಾಗ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13888 ಹುದ್ದೆಗಳು ಖಾಲಿ ಇದ್ದರೂ ( ನಿವೃತ್ತಿ ಇನ್ನಿತರೆ ಕಾರಣಗಳಿಂದ ) ಒಂದೇ ಒಂದು ನೇಮಕಾತಿ ಆಗಿಲ್ಲ.
  • ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಶ್ರೀ ಯಡಿಯೂರಪ್ಪ‌ ಹಾಗೂ ಶ್ರೀ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ತಿಂಗಳ ವೇತನ ಪೂರ್ಣ ಪಾವತಿಯಾಗದೆ, ಅರ್ಧವೇತನ, ಕೆಲವೊಮ್ಮೆ ಆ ವೇತನವೂ ತಿಂಗಳ ಕೊನೆಯವರೆಗೂ, ಒಮ್ಮೊಮ್ಮೆ ಮುಂದಿನ ತಿಂಗಳವರೆಗೂ ಪಾವತಿಯಾಗುತ್ತಿತ್ತು.
  • ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಶ್ರೀ ಯಡಿಯೂರಪ್ಪ‌ ಹಾಗೂ ಶ್ರೀ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಸಂಸ್ಥೆಗಳಿಗೆ ಡಕೋಟ ಬಸ್ಸುಗಳನ್ನು ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲಬೇಕು‌. ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ‌ ಹೊರತುಪಡಿಸಿ ಬೇರೆಲ್ಲೂ ಬಸ್‌ಗಳ ಸೇರ್ಪಡೆಯೇ ಮಾಡಿಲ್ಲ.
  • ತೈಲದ ಪ್ರತಿ ಲೀಟರ್‌ಗೆ ಸರಾಸರಿ ರೂ 62.44 ರಷ್ಟು ಇದ್ದಾಗ 2020 ರಲ್ಲಿ ಬಸ್ ದರ 12% ಏರಿಕೆ ಮಾಡಿದ್ದು, ಶ್ರೀ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಂಬುದನ್ನು ನಾವು ನೆನಪು ಮಾಡಲಿ ಅಂತ ಬಸ್ ದರದ ವಿಷಯವನ್ನು ಟ್ವೀಟ್ ಮಾಡಿರಬೇಕು ಅನ್ನಿಸುತ್ತಿದೆ.
  • ಹಾಲಿ ಕರಾರಸಾ ನಿಗಮಕ್ಕೆ ₹85.80 ಡೀಸೆಲ್ ದರವಿದೆ. ಡೀಸೆಲ್ ದರ ಏರಿಸಿದ ಕೀರ್ತಿ‌ ಕೂಡ ಬಿ.ಜೆ.ಪಿ ಅವರಿಗೆ ಸಲ್ಲಬೇಕಲ್ಲವೇ?
  • 2023 ರಲ್ಲಿ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡಿದ ಬಿ.ಜೆ.ಪಿ ಸರ್ಕಾರ ವೇತನ ಹೆಚ್ಚಳ ಪಾವತಿಗಾಗಿ ಅಥವಾ ಬಾಕಿ ವೇತನ ಪಾವತಿಸಲು ಯಾವುದೇ ಅನುದಾನವನ್ನು ನೀಡಿಲ್ಲ. ಇಂದಿಗೂ ನೌಕರರು ಬಾಕಿ ವೇತನ ಹೆಚ್ಚಳ ಹಣಕ್ಕಾಗಿ ಕಾಯುತ್ತಿದ್ದಾರೆ.
  • ಸಾರಿಗೆ ಸಂಸ್ಥೆಗಳನ್ನು ₹5900 ಕೋಟಿ ನಷ್ಟದಲ್ಲಿಟ್ಟು ಹೋಗಿರುವ ಯಡಿಯೂರಪ್ಪ, ಬೊಮ್ಮಾಯಿ ಅವರ ಬಿ.ಜೆ.ಪಿ ಸರ್ಕಾರದ ಹೆಗ್ಗಳಿಕೆ ಬಗ್ಗೆ ಎಷ್ಟು ‌ಮಾತನಾಡಿದರೂ ಕಡಿಮೆಯೇ?
  • ಇಂದು ಸಾರಿಗೆ ಸಂಸ್ಥೆಗಳು ಯಾವ ಸ್ಥಿತಿಯಲ್ಲಿವೆ ಎಂದರೆ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ , ಖರೀದಿ ಸಾಮಾಗ್ರಿಗಳ ಹಣ ಎಲ್ಲಾ ಬಾಕಿ ಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ.
  • ಕರ್ನಾಟಕ ಸರ್ಕಾರವು ದಿನಾಂಕ 30.09.2000ರಂದು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ ಹೆಚ್‌ಟಿಡಿ/85/ಟಿಆ‌ರ್ಎ/2000 ರ ಅನ್ವಯ ಕರಾರಸಾ ನಿಗಮ ಹಾಗೂ ಇತರೆ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಡೀಸೆಲ್ ತೈಲದ ಬೆಲೆಯಲ್ಲಿ ಹೆಚ್ಚಳವಾದಾಗ ಮತ್ತು ನೌಕರರಿಗೆ ನೀಡುವ ತುಟ್ಟಿಭತ್ಯೆ ದರಗಳಲ್ಲಿ ಹೆಚ್ಚಳವಾದಾಗ ಪ್ರಯಾಣ ದರಗಳನ್ನು ಸ್ವಯಂಚಾಲಿತ ದರ ಹೊಂದಾಣಿಕೆ ನೀತಿಯಂತೆ ಪರಿಷ್ಕರಿಸಲು ಅನುಮತಿ ನೀಡಿರುತ್ತದೆ ಎಂಬ ಮಾಹಿತಿಯೇ ಗೊತ್ತಿಲ್ಲದೇ ಟ್ವೀಟ್ ಮಾಡುವ ಇವರ ಜ್ಞಾನಕ್ಕೆ ಸರಿಸಾಟಿ ಯಾರದರೂ ಇದ್ದಾರೆಯೇ?
  • ಶ್ರೀ ಬೊಮ್ಮಾಯಿರವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ದಿನಾಂಕ: 15/11/2021 ರಲ್ಲಿ ಶ್ರೀ. ಎಂ.ಆರ್ ಶ್ರೀನಿವಾಸಮೂರ್ತಿ ಭಾಆಸೇ( ನಿವೃತ್ತ) ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಸಮಿತಿಯನ್ನು ರಚಿಸಲಾಗಿತ್ತು. ಅನೇಕ ಶಿಫಾರಸುಗಳೊಂದಿಗೆ ಪ್ರಮುಖವಾಗಿ ಸದರಿ‌ ಸಮಿತಿಯು ಬಸ್ ಪ್ರಯಾಣ ದರವನ್ನು Institutional Arrangement for Revision of Bus Fares ಶೀರ್ಷಿಕೆಯಡಿಯಲ್ಲಿ KERC ಮಾದರಿಯಲ್ಲಿ ಕಾಲಕಾಲಕ್ಕೆ ಬಸ್ ದರವನ್ನು ಹೆಚ್ಚಿಸಬೇಕು, ಆಗಷ್ಟೇ ಸಾರಿಗೆ ಸಂಸ್ಥೆಗಳು ಉಳಿಯಲು ಸಾಧ್ಯವೆಂದು ವರದಿ ನೀಡಿತ್ತು. ಆ ವರದಿಯನ್ನು ಕೂಡ ಬಿ.ಜೆ.ಪಿ ಸರ್ಕಾರವು ಅಂಗೀಕರಿಸಿರುತ್ತದೆ ಎಂಬುದನ್ನು ಸಹ ತಿಳಿದುಕೊಳ್ಳದೆ ಟ್ಟೀಟ್ ಮಾಡುವ ಇವರ ಚಾಳಿಯು ಸಮಾಜಕ್ಕೆ ಹಾನಿಕಾರಕ.

ಸಂಸ್ಥೆಗಳನ್ನು ಅಧೋಗತಿ ತಳ್ಳಿದ ಮೇಲೂ ಬಿ.ಜೆ.ಪಿ ಅವರು ರಾಜಕೀಯ ಮಾಡಲು ಬಯಸುತ್ತಾರೆ ಎಂದರೆ ಎಂತಹ ವಿಕೃತ ಮನಸ್ಥಿತಿ ಇವರದ್ದಾಗಿದೆ. ಇವರ ರಾಜಕೀಯಕ್ಕೆ ಸಂಸ್ಥೆಗಳು ಮುಚ್ಚಬೇಕು ಎಂಬ ಮಹದಾಸೆ ಇರಬೇಕು ಅನ್ನಿಸುತ್ತದೆ ಖಾಸಗೀಕರಣ ಇವರ ರಕ್ತದಲ್ಲಿಯೇ ಇದೆ. ಆದರೆ ನಾವು ಸಾರಿಗೆ ಸಂಸ್ಥೆಗಳನ್ನು ಉಳಿಸುವ ಕೆಲಸ ಮಾಡಿಯೇ ಮಾಡುತ್ತೇವೆ.
ಇವರ ಟ್ವೀಟ್‌ಗಳಿಗೆ ನಮ್ಮ ಉತ್ತರ ಅಭಿವೃದ್ಧಿ ಎಂದಿದ್ದಾರೆ.

Tags :