ಟೆಂಪೋ ಪಲ್ಟಿ: ಮಕ್ಕಳು ಸೇರಿದಂತೆ 30ಕ್ಕೂ ಅಧಿಕ ಜನರಿಗೆ ಗಾಯ
ಸಿಂದಗಿ: ತಾಲೂಕಿನ ಮನ್ನಾಪುರ ಗ್ರಾಮದ ಬಳಿ ವಾಹನ ಚಾಲಕನ ನಿರ್ಲಕ್ಷತನದಿಂದ ಟೆಂಪೋ ಪಲ್ಟಿಯಾದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ 30ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ. ಅದೃಷ್ಟವಶ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.
ತಾಲೂಕಿನ ಹಿಕ್ಕಣಗುತ್ತಿ ಗ್ರಾಮಸ್ಥರು ಗೋಲಗೇರಿ ಗೊಲ್ಲಾಳೇಶ್ವರ ದೇವಸ್ಥಾನಕ್ಕೆ ಜವಳ ಕಾರ್ಯಕ್ರಮಕ್ಕೆ ಹೊರಟಿರುವ ಸಂದರ್ಭದಲ್ಲಿ ಸಿಂದಗಿ ಶಹಾಪೂರ ಹೆದ್ದಾರಿಯ ಮಾರ್ಗದಲ್ಲಿ ಬರುವ ಮನ್ನಾಪುರ ಗ್ರಾಮದ ಹತ್ತಿರ ಈ ಅಪಘಾತ ಸಂಭವಿಸಿದೆ. ತಕ್ಷಣದಲ್ಲಿ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಈ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಶಾಸಕ ಅಶೋಕ ಮನಗೂಳಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿ ಗಂಭೀರ ಸ್ಥಿತಿಯಲ್ಲಿದ್ದವರಿಗೆ ಜಿಲ್ಲಾಸ್ಪತ್ರೆಗೆ ರವಾನಿಸುವಂತೆ ಸೂಚಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪಘಾತದಲ್ಲಿ ಗಾಯವಾದ ಜನರಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡುವಂತೆ ಸ್ಥಳೀಯ ವೈದ್ಯರಿಗೆ ಸೂಚಿಸಿದ್ದೇನೆ. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲು ಹೋಗಲು ಹೇಳಿದ್ದು, ಈಗಾಗಲೇ ಜಿಲ್ಲಾಸ್ಪತ್ರೆಯವರ ಜೊತೆಗೆ ದೂರವಾಣಿ ಮುಖಾಂತರ ಸರಿಯಾದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಕೂಡಾ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯವನ್ನು ವಿಚಾರಿಸಿದರು. ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ವೈದ್ಯರಿಗೆ ತಿಳಿಸಿದ್ದಾರೆ. ಈ ಘಟನೆಯು ಸಿಂದಗಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಸಂಭವಿಸಿದೆ. ಆಸ್ಪತ್ರೆಗೆ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಬಿಜೆಪಿ ಮಂಡಲ ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಕುಮಾರ ದೇಸಾಯಿ ಒಳಗೊಂಡಂತೆ ಅನೇಕರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದರು.