ಟೆನಿಸ್: ರಶ್ಮಿಕಾಗೆ ಚೊಚ್ಚಲ ಕಿರೀಟ
ಬೆಂಗಳೂರು: ರಾಷ್ಟ್ರೀಯ ಚಾಂಪಿಯನ್ ಶ್ರೀವಳ್ಳಿ ರಶ್ಮಿಕಾ ಭಾಮಿದಿಪತಿ ಟೆನಿಸ್ ಜೀವನದ ಚೊಚ್ಚಲ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದುಕೊಂಡಿದ್ದಾರೆ.
ಭಾನುವಾರ ಇಲ್ಲಿಯ ಬೌರಿಂಗ್ ಇನ್‌ಸ್ಟಿಟ್ಯೂಟ್ ಟೆನಿಸ್ ಕೋರ್ಟ್‌ನಲ್ಲಿ ನಡೆದ ಐಟಿಎಫ್ ಮಹಿಳಾ ವಿಶ್ವ ಟೂರ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಫೈನಲ್‌ನಲ್ಲಿ ರಶ್ಮಿಕಾ ಭಾರತದವರೇ ಆದ ಝೀಲ್ ದೇಸಾಯಿ ಎದುರು ಮೂರು ಸೆಟ್‌ಗಳಲ್ಲಿ ೬-೦, ೪-೬, ೬-೩ ಆಟಗಳಿಂದ ಜಯಿಸಿ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತರ ಪಟ್ಟಿಗೆ ಸೇರ್ಪಡೆಯಾದರು.
ಈ ಗೆಲುವಿನೊಂದಿಗೆ ರಶ್ಮಿಕಾ ಬಹುಮಾನದ ರೂಪದಲ್ಲಿ ೩,೯೩೫ ಅಮೇರಿಕನ್ ಡಾಲರ್‌ಗಳ ಚೆಕ್ ಹಾಗೂ ೫೦ ಡಬ್ಲ್ಯೂಟಿಎ ಪಾಯಿಂಟ್‌ಗಳನ್ನು ಗಿಟ್ಟಿಸಿಕೊಂಡರೆ, ಝೀಲ್ ದೇಸಾಯಿ ೨,೧೦೭ ಅಮೇರಿಕನ್ ಡಾಲರ್ ಹಾಗೂ ೩೦ ಡಬ್ಲ್ಯೂಟಿಎ ಪಾಯಿಂಟ್‌ಗಳನ್ನು ಸಂಪಾದಿಸಿಕೊಂಡರು.
ಮೊದಲ ಸೆಟ್ಟನ್ನು ಹೆಚ್ಚಿನ ಪ್ರತಿರೋಧವಿಲ್ಲದೇ ಜಯಿಸಿದ ೨೧ ವರ್ಷ ವಯಸ್ಸಿನ ರಶ್ಮಿಕಾ, ಎರಡನೇ ಸೆಟ್‌ನಲ್ಲಿ ಪ್ರಾರಂಭದಿಂದಲೇ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಝೀಲ್ ಮೊದಲ ಆಟದಲ್ಲಿಯೇ ರಶ್ಮಿಕಾ ಸರ್ವಿಸ್ ಮುರಿದರಾದರೂ, ರಶ್ಮಿಕಾ ತಿರುಗಿ ನಾಲ್ಕನೇ ಆಟದಲ್ಲಿ ಝೀಲ್ ಸರ್ವಿಸ್ ಮುರಿದು ೩-೨ ಲೀಡ್ ಸಾಧಿಸಿದರು. ನಂತರ ಮತ್ತೆ ೫-೩ ಮುನ್ನಡೆ ಪಡೆದ ಝೀಲ್ ೬-೪ ರಿಂದ ಎರಡನೇ ಸೆಟ್ಟನ್ನು ತಮ್ಮದಾಗಿಸಿಕೊಂಡರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಪ್ರಾರಂಭದಲ್ಲಿಯೇ ೩-೦ ಲೀಡ್‌ಗೆ ಮುನ್ನುಗ್ಗಿದ ರಶ್ಮಿಕಾ ತಮ್ಮ ಬಲವಾದ ಮುಂಗೈ ಹೊಡೆತಗಳೊಂದಿಗೆ ಮಿಂಚಿದರಲ್ಲದೇ ಕೆಲವು ಉತ್ಕೃಷ್ಟ ಕ್ರಾಸ್ ಕೋರ್ಟ್ ಹೊಡೆತಗಳೊಂದಿಗೆ ಪ್ರಶಸ್ತಿಗೆ ಲಗ್ಗೆಯಿಟ್ಟರು.
ರಶ್ಮಿಕಾ-ಝೀಲ್ ಫೈನಲ್‌ಗೆ:
ಇದಕ್ಕೂ ಮೊದಲು ಶನಿವಾತರ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಝೀಲ್ ದೇಸಾಯಿ ತೃತೀಯ ಸೀಡ್ ಹೊಂದಿದ್ದ ರುತುಜಾ ಭೋಸಲೆ ಎದುರು ೩-೬, ೬-೪, ೭-೫ ಆಟಗಳಿಂದ ಜಯಿಸಿದರೆ, ಶಿವಳ್ಳಿ ರಶ್ಮಿಕಾ ಭಾಮಿದಿಪತಿ ಎರಡನೇ ಶ್ರೇಯಾಂಕ ಪಡೆದಿದ್ದ ಲಾನ್ಲಾನಾ ತಾರಾರುಡೆ ಅವರಿಗೆ ೬-೨, ೬-೧ ನೇರ ಆಟಗಳ ಸೋಲುಣಿಸಿದರು.
ಚೆರುಬಿನಿ-ಶ್ಮಿಟ್‌ಗೆ ಪ್ರಶಸ್ತಿ:
ಇಟಲಿಯ ಡಿಲೆಟ್ಟಾ ಚೆರುಬಿನಿ ಹಾಗೂ ಜರ್ಮನಿಯ ಅಂಟೋನಿಯಾ ಶ್ಮಿಟ್ ಡಬಲ್ಸ್ ಪ್ರಶಸ್ತಿ ಬಾಚಿಕೊಂಡರು. ಶನಿವಾರ ನಡೆದ ಅಂತಿಮ ಪಂದ್ಯದಲ್ಲಿ ಚೆರುಬಿನಿ-ಶ್ಮಿಟ್ ಜೋಡಿ ಥೈಲ್ಯಾಂಡಿನ ಪುನ್ನಿನ್ ಕೋವಾಪಿತುಕ್ತೆಡ್ ಹಾಗೂ ಅನ್ನಾ ಉರೆಕೆ ಜೋಡಿಯನ್ನು ೪-೬, ೭-೫, ೧೦-೪ ಆಟಗಳಿಂದ ಸೋಲಿಸಿತು.
ವಿಜಯಿಗಳು ಬಹುಮಾನದ ರೂಪದಲ್ಲಿ ೧,೪೩೭ ಅಮೇರಿಕನ್ ಡಾಲರ್ ಹಾಗೂ ೫೦ ಡಬ್ಲ್ಯೂಟಿಎ ಪಾಯಿಂಟ್‌ಗಳನ್ನು ಪಡೆದರೆ, ರನ್ನರ್-ಅಪ್ ತಂಡ ೭೧೯ ಅಮೇರಿಕನ್ ಡಾಲರ ಹಾಗೂ ೩೦ ಡಬ್ಲ್ಯೂಯಟಿಎ ಪಾಯಿಂಟ್‌ಗಳನ್ನು ಜೇಬಿಗಿಳಿಸಿಕೊಂಡಿತು.