ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಟ್ಯಾಂಕರ‍್ರು ಬಂದಿದೆ, ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ..

12:32 PM Mar 18, 2024 IST | Samyukta Karnataka

ಪಂಚಭೂತಗಳ ಪೈಕಿ ಎಲ್ಲವೂ ಬದುಕಿಗೆ ನಿರ್ಣಾಯಕಗಳೇ: ಆದರೆ, ನೀರಿನ ಮಹತ್ವಕ್ಕೆ ಮಾತ್ರ ಒಂದು ಗುಲಗಂಜಿ ತೂಕ ಹೆಚ್ಚು. ನೀರಿಲ್ಲದೆ ಯಾರೂ ಇಲ್ಲ ಎಂಬುದೇ ಚಿರನೂತನ ಸತ್ಯ. ನೀರೆಂಬುದು ನಿಸರ್ಗ ಸತ್ಯ. ಏಕೆಂದರೆ, ನೀರಿನ ಮೂಲ ನಿಸರ್ಗವೇ. ಉಳಿದ ಪಂಚಭೂತಗಳಾದ ಭೂಮಿ, ವಾಯು, ಅಗ್ನಿ, ಗಗನಗಳ ಸ್ವರೂಪವೇ ಬೇರೆ. ಈ ನೀರೆಂಬುದು ಇಡೀ ಲೋಕಕ್ಕೆ ಬೇಕೆ ಬೇಕು. ಕಾಲ ಯಾವುದೇ ಇರಲಿ ಮಂಜು ಸುರಿಯುತಲಿರಲಿ-ಬಿಸಿಲು ಉರಿಯುತಲಿರಲಿ-ಮಳೆಯು ಸುರಿಯುತಿರಲಿ-ಭೂಮಿ ಗಡಗಡ ನಡುಗುತ್ತಿರಲಿ-ಅಗ್ನಿಯ ಜ್ವಾಲೆಗಳು ಪರ್ವತೋಪಾದಿಯಲ್ಲಿ ಸರ್ವನಾಶ ಮಾಡುತಿರಲಿ ಹೀಗೆ ಏನೇ ವಿನಾಶವಾಗುತ್ತಿದ್ದರೂ ಸಕಲ ಜೀವರಾಶಿಗಳಿಗೆ ಬೇಕಾದದ್ದು ಮೊದಲು ನೀರು. ನಂತರ ಊಟ ಇತ್ಯಾದಿ.
ಈಗ ನೀರಿಗೆ ಬರಗಾಲ. ನಿಸರ್ಗದ ಮೂಲಗಳೇ ಬತ್ತಿಹೋಗುತ್ತಿರುವಾಗ ನೀರನ್ನು ಹುಡುಕಿ ತರುವುದಾದರೂ ಹೇಗೆ ಎಂಬುದೇ ಪ್ರಶ್ನೆ. ಈ ಜಲಮೂಲಗಳು ತಾನಾಗಿಯೇ ಬತ್ತಿಹೋಗಿದ್ದರೆ ನಿಸರ್ಗವನ್ನು ದೂಷಿಸಬಹುದು. ಆದರೆ, ಈ ಮನುಷ್ಯ ಆಧುನಿಕತೆಯ ಹೆಸರಿನಲ್ಲಿ ನಿಸರ್ಗವನ್ನು ನಾಶ ಮಾಡಲು ಹೊರಟಾಗ ನೀರಿನ ಒರತೆಗಳು ಮಾಯ. ಆಗ ಶುರುವಾದದ್ದು ಪಾತಾಳವನ್ನು ಬೇಧಿಸಿ ಕೊಳವೆ ಬಾವಿಗಳ ಮೂಲಕ ನೀರು ಭೇದಿಸಿ ಕಾರ್ಯ. ಅದೂ ಕೂಡಾ ಎಷ್ಟು ದಿನ ಕಾಪಾಡೀತು. ಇದೆಲ್ಲ ಮುಗಿಯುವ ಹೊತ್ತಿಗೆ ಮಳೆರಾಯನೂ ಮುನಿಸಿಕೊಂಡ ಮೇಲೆ ಕುಡಿಯುವ ನೀರಿಗೂ ತತ್ವಾರದ ಸ್ಥಿತಿ. ಕನ್ನಡ ಪರಂಪರೆಯಲ್ಲಿ ಊರು ಕೇರಿಗಳಲ್ಲಿ ಹೆಣ್ಣು ಮಕ್ಕಳು `ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೇ ಬಿಂದಿಗೆಯಾ-ಬಿಂದಿಗೆ ಒಡೆದರೆ ಒಂದೇ ಕಾಸು' ಎಂದು ಸುಶ್ರಾವ್ಯವಾಗಿ ಹಾಡಿಕೊಂಡು ನೀರು ತರುವ ಪದ್ಧತಿ ಇತ್ತು. ಆದರೆ, ಈಗ ಅದರ ಬದಲಿಗೆ ಟ್ಯಾಂಕರ್‌ಗಳನ್ನೇ ಬಾವಿಗಳೆಂದು ಭಾವಿಸಿ ನೀರು ತರುವ ಪದ್ಧತಿ ಬೆಂಗಳೂರಿನಿಂದ ಹಿಡಿದು ಬಹುತೇಕ ಎಲ್ಲಾ ಊರುಗಳಲ್ಲಿಯೂ ದಿನನಿತ್ಯ ಕಂಡುಬರುವ ದೃಶ್ಯ. ರಾಜಕೀಯ ಭಿನ್ನಮತವನ್ನು ದೂರ ಸರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀರಾವರಿ ಯೋಜನೆಗಳಿಗೆ, ಅದರಲ್ಲೂ ಕುಡಿಯುವ ನೀರಿನ ಪೂರೈಕೆಗೆ ರೂಪಿಸಲಾದ ಯೋಜನೆಗಳಿಗೆ ಯಾವುದೇ ರೀತಿಯ ತಕರಾರು ಇಲ್ಲದಂತೆ ಶರವೇಗದಲ್ಲಿ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳುವುದು ನಿಜವಾದ ರಾಜಧರ್ಮ. ಜಲಮೂಲ, ಅದು ನದಿಯ ನೀರೇ ಆಗಿರಲಿ ಅಥವಾ ನಿಸರ್ಗದ ನೀರೇ ಆಗಿರಲಿ ಅದು ರಾಷ್ಟ್ರೀಯ ಸಂಪತ್ತು ಎಂದು ಎಲ್ಲಾ ರಾಜ್ಯಗಳು ಪರಿಗಣಿಸಿ ಇಡೀ ದೇಶಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಕೇಂದ್ರ ಸರ್ಕಾರದ ಜವಾಬ್ದಾರಿ ಈ ವಿಚಾರದಲ್ಲಿ ನಿರ್ಣಾಯಕ. ಯಾವುದೇ ರೀತಿಯ ತಕರಾರು ಎತ್ತದೆ ನಿಯಮಾವಳಿ ಅನುಸಾರ ಹಣಕಾಸು ಪೂರೈಕೆ ಮಾಡಿ ನೀರು ಪೂರೈಕೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಪರಿವರ್ತಿಸಿ ನೀರಿನ ದಾಹಕ್ಕೆ ಪರಿಹಾರ ಮಾರ್ಗ ರೂಪಿಸುವುದು ದೇಶದ ರಕ್ಷಣೆಯಷ್ಟೇ ದೊಡ್ಡದು.
ದುಡ್ಡು ಕೊಟ್ಟರೆ ನೀರು ಸಿಗಬಹುದು. ಆದರೆ, ಇದು ದುಡ್ಡಿದ್ದವರಿಗೆ ಮಾತ್ರ. ಮನುಷ್ಯನ ಅಗತ್ಯಗಳಿಗೆಲ್ಲಾ ನೀರನ್ನು ಎಲ್ಲಿಂದ ಹೊಂದಿಸಿ ತರುವುದು ಎಂಬ ಪ್ರಶ್ನೆ ಜನರಿಗಾದರೆ, ಕೃಷ್ಣರಾಜಸಾಗರದ ಜಲಾಶಯದ ನೀರಿನ ಬಹುಭಾಗವನ್ನು ತಮಿಳುನಾಡಿಗೆ ಹರಿಯಲು ಬಿಡಬೇಕಾದ ರಾಜ್ಯ ಸರ್ಕಾರಕ್ಕಾದರೋ ಹೇಗಾದರೂ ಮಾಡಿ ಜನರ ದಾಹ ಇಂಗಿಸಬೇಕೆಂಬ ಅಪೇಕ್ಷೆ. ಇದಕ್ಕಾಗಿ ಭಗೀರಥ ಯತ್ನ.
ಯುದ್ಧದೋಪಾದಿಯಲ್ಲಿ ಟ್ಯಾಂಕರ್‌ಗಳನ್ನು ನಿಯಮಾವಳಿ ಚೌಕಟ್ಟಿಗೆ ತಂದು ಕಾಳ ಸಂತೆಯಲ್ಲಿ ನೀರು ಮಾರಾಟವಾಗದಂತೆ ನೋಡಿಕೊಂಡಿರುವ ಕ್ರಮ ಮೆಚ್ಚತಕ್ಕದ್ದೇ. ಆದರೆ, ಹೀಗೆ ಬಿಗಿ ಯತ್ನದ ಮೂಲಕ ಪೂರೈಸುತ್ತಿರುವ ನೀರನ್ನು ನ್ಯಾಯೋಚಿತವಾಗಿ ಬಳಸುವ ನಾಜೂಕುತನ ಜನರಿಗೂ ಬರಬೇಕು. ಅಪಾರ್ಟ್ಮೆಂಟ್‌ಗಳ ಸಂಸ್ಕೃತಿ ಹೆಚ್ಚಾಗಿರುವ ಸಂದರ್ಭದಲ್ಲಿ ಟ್ಯಾಂಕರ್ ನೀರಿನ ಮೂಲಕ ಬೇಡಿಕೆಯನ್ನು ಪೂರೈಸುವ ಮಾರ್ಗ ಅನಿವಾರ್ಯವೇ. ಇಲ್ಲಿ ವಾಸಿಸುವ ಜನರೂ ಕೂಡಾ ಕೊಂಚ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
ದೊಡ್ಡ ಮನುಷ್ಯರೆನಿಸಿಕೊಂಡ ಕೆಲವರು ಕಾರುಗಳನ್ನು ತೊಳೆಯಲು, ಮನೆಯ ಕೈತೋಟವನ್ನು ಹಸಿರಾಗಿರಿಸಲು, ಕಟ್ಟಡವನ್ನು ಚೊಕ್ಕಟಗೊಳಿಸಲು ಪೈಪುಗಳ ಮೂಲಕ ನೀರನ್ನು ಮನಸ್ಸಿಗೆ ಬಂದಂತೆ ಬಳಸುತ್ತಿರುವುದನ್ನು ನೋಡಿದಾಗ ಇವರೇನು ಮನುಷ್ಯರೋ ಇಲ್ಲಾ ರಾಕ್ಷಸರೋ ಎನ್ನುವ ಅನುಮಾನ ಕಾಡುತ್ತದೆ.
ಮಹಾನಗರ ಪಾಲಿಕೆಗಳು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳು ಕೂಡಾ ಮಾರ್ಷಲ್‌ಗಳನ್ನು ಬಳಸಿಕೊಂಡು ನೀರು ವ್ಯರ್ಥವಾಗಿ ಬಳಕೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ದಂಡೋಪಾಯದ ಮಾರ್ಗವನ್ನು ಕಂಡುಕೊಳ್ಳುವುದು ಈಗಿನ ಅಗತ್ಯ.
ಪಟ್ಟಣಗಳ ಜನರ ಸ್ಥಿತಿ ಸರ್ಕಾರದ ಕಣ್ಣಿಗೆ ಥಟ್ಟನೆ ಬೀಳುತ್ತದೆ. ಆದರೆ, ಗ್ರಾಮೀಣ ಜನರ ಸ್ಥಿತಿ ಕಣ್ಣಿಗೆ ಬೀಳಲು ಸಾಕಷ್ಟು ಸಮಯ ಬೇಕು. ಪಟ್ಟಣಗಳಲ್ಲಿ ದುಡ್ಡು ಕೊಟ್ಟರೆ ನೀರು ಸಿಗಬಹುದೇನೋ. ಹಳ್ಳಿಗಳಲ್ಲಿ ಅದೂ ಕೂಡಾ ಅಸಾಧ್ಯ. ಹೀಗಾಗಿ ಜಿಲ್ಲಾಧಿಕಾರಿಗಳ ಮೂಲಕ ನೀರು ಪೂರೈಕೆಯ ಕಡೆ ಸರ್ಕಾರ ಕಾರ್ಯಕ್ರಮವನ್ನು ರೂಪಿಸಿ ಜಾರಿಗೊಳಿಸಿರುವುದು ಸ್ವಾಗತಾರ್ಹ ಕ್ರಮ.
ನಿಜ. ಇದು ಹೇಳಿ ಕೇಳಿ ಲೋಕಸಭಾ ಚುನಾವಣೆಯ ಕಾಲ. ಉರಿಬಿಸಿಲಿನ ಕಾಲ ಬೇರೆ. ಕುಡಿದಷ್ಟು ನೀರನ್ನು ಕೇಳುವ ಕಾಲವಿದು. ಹೀಗಾಗಿ ಈ ನೀರನ್ನು ಎಷ್ಟೇ ಪ್ರಮಾಣದಲ್ಲಿ ಪೂರೈಕೆ ಮಾಡಿದರೂ ಜನರನ್ನು ಸಮಾಧಾನ ಮಾಡುವುದು ಕಷ್ಟ. ಆದರೆ, ಎಲ್ಲಾ ಸವಾಲುಗಳನ್ನು ನಿವಾರಿಸಿಕೊಂಡು ಭಗೀರಥ ಯತ್ನದ ರೀತಿಯಲ್ಲಿ ನೀರನ್ನು ಪೂರೈಸಲೇಬೇಕಾದ ಅನಿವಾರ್ಯತೆ ಸರ್ಕಾರದ ಮೇಲೆ ಇದೆ ಎಂದು ಜನ ತೆಪ್ಪಗಿರಬಾರದು. ಸಾರ್ವಜನಿಕರೂ ಕೂಡಾ ಸಮಸ್ಯೆಯನ್ನು ಅರಿತು ಸರ್ಕಾರದ ಜೊತೆ ಕೈಜೋಡಿಸುವುದು ಈಗಿನ ಅನಿವಾರ್ಯ ಅಗತ್ಯ.

Next Article