ಟ್ರಂಪ್ ಇರೋದೇ ಅಮೆರಿಕಕ್ಕೆ
ಟ್ರಂಪ್ ಮತ್ತೆ ಅಮೆರಿಕದ ಅಧ್ಯಕ್ಷರಾಗಿದ್ದಾರೆ. ಅದರಿಂದ ಭಾರತಕ್ಕೆ ಆಗುವ ಲಾಭ-ನಷ್ಟದ ಲೆಕ್ಕಾಚಾರ ಎಲ್ಲ ಕಡೆ ನಡೆದಿದೆ. ಟ್ರಂಪ್ ಮಾತ್ರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅವರಿಗೆ ಬೇಕಿರುವುದು ಅಮೆರಿಕದ ಅಭಿವೃದ್ಧಿ, ಅಮೆರಿಕನ್ನರ ಆದಾಯ ಅಧಿಕಗೊಳ್ಳಬೇಕು ಅಷ್ಟೆ. ಅವರೇನೂ ಮನುಕುಲಕ್ಕೆ ದುಡಿಯುತ್ತೇನೆ ಎಂದೂ ಹೇಳಿಲ್ಲ. ಟ್ರಂಪ್-ಮೋದಿ ಉತ್ತಮ ಗೆಳೆಯರು. ಅದರಿಂದ ನಮ್ಮ ಮೇಲೆ ಹೆಚ್ಚು ಗದಾಪ್ರಹಾರ ಆಗದಿರಬಹುದು ಎಂಬ ನಿರೀಕ್ಷೆ ಇದೆ. ಷೇರುಮಾರುಕಟ್ಟೆ ತೇಜಿ ಕಂಡಿದೆ. ಡಾಲರ್ ದರ ೮೪.೧೧ ರೂ. ಆಗಿದೆ.
ಟ್ರಂಪ್ ಹಳೆಯ ಕಾಲದ ಆರ್ಥಿಕ ಚಿಂತಕರ ಗುಂಪಿಗೆ ಸೇರಿದವರು. ಅವರಿಗೆ ದೇಶದ ಸಂಪತ್ತು ಎಂದರೆ ಚಿನ್ನ ಮತ್ತು ಬೆಳ್ಳಿ. ಆಮದು ಕಡಿಮೆಯಾಗಬೇಕು. ರಫ್ತು ಅಧಿಕಗೊಳ್ಳಬೇಕು. ಅದರಿಂದ ಹೊರದೇಶದಿಂದ ಬರುವ ವಸ್ತುಗಳ ಮೇಲೆ ತೆರಿಗೆ ಅಧಿಕ ಅನಿವಾರ್ಯ. ಬೆಲೆಏರಿಕೆಯಾದರೂ ಹೊರ ವಸ್ತುಗಳ ಬೆಲೆ ಹೆಚ್ಚಿನ ತೆರಿಗೆ ಮತ್ತು ಸ್ಥಳೀಯರಿಗೆ ಹೆಚ್ಚಿನ ಸಹಾಯಧನದ ಮೂಲಕ ಸಮತೋಲನಗೊಳಿಸುವುದು ಅವರ ಚಿಂತನೆ.
ಚೀನಾದಿಂದ ಅಮೆರಿಕಕ್ಕೆ ಹೆಚ್ಚು ವಸ್ತುಗಳು ಆಮದಾಗುತ್ತಿದೆ. ಅಮೆರಿಕದ ಜನ ಕೂಡ ಚೀನಾ ವಸ್ತುಗಳನ್ನು ಖರೀದಿಸಲು ಉತ್ಸಾಹ ತೋರುತ್ತಿದ್ದಾರೆ. ಆದರೆ ಟ್ರಂಪ್ ಇದನ್ನು ಸಹಿಸುವುದಿಲ್ಲ. ಚೀನಾ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಅದು ಅಮೆರಿಕಕ್ಕೆ ಬರುವುದನ್ನು ಕಡಿಮೆ ಮಾಡಿಯೇ ಮಾಡುತ್ತಾರೆ. ಬೈಡನ್ ಸರ್ಕಾರ ಇದ್ದಾಗ ಚೀನಾದಿಂದ ೩೮೨ ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳು ಆಮದಾಗುತ್ತಿದ್ದವು. ಈಗ ಇದು ಇಳಿಮುಖಗೊಳ್ಳಲಿದೆ. ಆದರೆ ಚೀನಾದಲ್ಲಿ ಉದ್ಯೋಗ ಸಮಸ್ಯೆ ತೀವ್ರವಾಗಿರುವುದರಿಂದ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಮಾಡಲು ಬರುವುದಿಲ್ಲ. ಹೀಗಾಗಿ ಅಮೆರಿಕಕ್ಕೆ ಹೋಗುತ್ತಿದ್ದ ವಸ್ತುಗಳನ್ನು ಭಾರತ ಮತ್ತಿತರ ದೇಶಗಳಿಗೆನೀಡುವುದು ಅನಿವಾರ್ಯ. ಇತ್ತೀಚೆಗೆ ಭಾರತ- ಚೀನಾ ಹೊಸ ಒಪ್ಪಂದ ಮಾಡಿಕೊಳ್ಳುವುದಕ್ಕೆ ಇದೇ ಕಾರಣ. ಅಮೆರಿಕದಲ್ಲಿ ಬೆಲೆಏರಿಕೆಯಿಂದ ಹಣದುಬ್ಬರ ಅಧಿಕಗೊಳ್ಳುವುದು ಸಹಜ. ಆಗ ಸರ್ಕಾರ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಈ ಬಾಂಡ್‌ಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ಚೀನಾ ದೇಶವೇ ಈ ಬಾಂಡ್‌ಗಳನ್ನು ಖರೀದಿ ಮಾಡಲು ಮುಂದಾಗುತ್ತದೆ. ಹಿಂದೆ ಅಮೆರಿಕ ಬಾಂಡ್ ಬಿಡುಗಡೆ ಮಾಡಿದಾಗ ಚೀನಾ ೧೧೭೦ ಬಿಲಿಯನ್ ಡಾಲರ್ ಮೌಲ್ಯದ ಬಾಂಡ್‌ಗಳನ್ನು ಖರೀದಿ ಮಾಡಿತ್ತು. ಡಾಲರ್ ಬೆಲೆ ಅಧಿಕಗೊಂಡಂತೆ ರೂಪಾಯಿ ಮೌಲ್ಯ ಕುಸಿಯುವುದು ಸಹಜ.
ಅಮೆರಿಕದಿಂದ ಹೊರದೇಶಗಳಿಗೆ ಹೋದ ಅಮೆರಿಕದ ಕಂಪನಿಗಳು ವಾಪಸ್ ಬರುವಂತೆ ಮಾಡುವುದು ಟ್ರಂಪ್ ಸರ್ಕಾರದ ಮೂಲ ಉದ್ದೇಶ.ಈ ಕಂಪನಿಗಳು ಹಿಂತಿರುಗಿ ಬಂದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಕಡಿಮೆಯಾಗುತ್ತದೆ. ಒಂದುವೇಳೆ ಅಮೆರಿಕದ ಕಂಪನಿಗಳು ಹೊರದೇಶಗಳಲ್ಲೇ ಇರಲು ಬಯಸಿದಲ್ಲಿ ಟ್ರಂಪ್ ಅವುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಬಹುದು. ಹಿಂದೆ ಅಧಿಕಾರದಲ್ಲಿದ್ದಾಗ ಟ್ರಂಪ್ ಅಮೆರಿಕದ ವಸ್ತುಗಳ ಮೇಲೆ ಭಾರತ ಹೆಚ್ಚಿನ ತೆರಿಗೆ ವಿಧಿಸಿದಾಗ ಗರಂ ಆಗಿದ್ದರು. ಈಗ ಆ ಪರಿಸ್ಥಿತಿ ಮತ್ತೆ ಬರಬಹುದು. ಟ್ರಂಪ್ ಮುಂದೆ ಇರುವ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ವಲಸೆ. ಅಮೆರಿಕಕ್ಕೆ ಪ್ರತಿದಿನ ಬೇರೆ ದೇಶಗಳ ಜನ ಅಕ್ರಮವಾಗಿ ನುಸುಳಲು ಯತ್ನಿಸುವುದು ನಿರಂತರ ನಡೆಯುತ್ತ ಬಂದಿದೆ. ಅಮೆರಿಕದಲ್ಲಿ ಉತ್ತಮ ವೇತನ ಸಿಗುವುದರಿಂದ ಬೇರೆ ದೇಶದವರು ಅಕ್ರಮವಾಗಿ ಅಮೆರಿಕ ಪ್ರವೇಶ ಪಡೆಯಲು ಎಲ್ಲ ತಂತ್ರಗಳನ್ನು ಅನುಸರಿಸುತ್ತಾರೆ. ಈ ವಲಸೆಯನ್ನು ಸಂಪೂರ್ಣವಾಗಿ ತಡೆಗಟ್ಟುವುದು ಟ್ರಂಪ್ ಪರಮಗುರಿ. ಸ್ಥಳೀಯ ಅಮೆರಿಕನ್ನರ ಅನ್ನ ಕಸಿಯುತ್ತಿರುವವರು ಈ ವಲಸೆಗಾರರು ಎಂಬುದು ಟ್ರಂಪ್ ವಾದ. ಇದನ್ನು ತಡೆಗಟ್ಟಲು ಟ್ರಂಪ್ ಹೊಸ ಅಧಿಕಾರಿಯನ್ನು ನೇಮಿಸಿದ್ದಾರೆ. ವಲಸೆ ಬರುವವರಲ್ಲಿ ಭಾರತೀಯರೂ ಇದ್ದಾರೆ. ಅವರ ವಿಷಯದಲ್ಲಿ ಟ್ರಂಪ್ ಯಾವ ನಿಲುವು ತಳೆಯುತ್ತಾರೆ ಎಂಬುದು ತೀರ್ಮಾನವಾಗಬೇಕು. ವಲಸೆಕೋರರಿಂದ ಕ್ರಿಮಿನಲ್ ಅಪರಾಧಗಳಿಂದ ಹಿಡಿದು ಮಾದಕ ವಸ್ತುಗಳ ಬಳಕೆವರೆಗೆ ಹಲವು ಅಕ್ರಮಗಳು ಬೇರೂರಿವೆ. ವಲಸೆ ಸಮಸ್ಯೆ ಹೋಯಿತು ಎಂದರೆ ಇವುಗಳು ಹಿಡಿತಕ್ಕೆ ಬರುತ್ತವೆ. ಅಧಿಕಾರಕ್ಕೆ ಬಂದ ೧೦೦ ದಿನಗಳಲ್ಲಿ ೧೦ ಲಕ್ಷ ವಲಸೆಗಾರರನ್ನು ದೇಶದಿಂದ ಹೊರಹಾಕುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದರಲ್ಲಿ ಭಾರತೀಯರು ಎಷ್ಟು ಜನ ಎಂಬುದು ತಿಳಿದಿಲ್ಲ. ಇವರ ಬಗ್ಗೆ ಟ್ರಂಪ್ ಮೆದು ಧೋರಣೆ ತೋರುತ್ತಾರೆಯೇ ಇಲ್ಲವೆ ಎಂಬುದನ್ನು ಕಾದು ನೋಡಬೇಕು. ಎಚ್೧ಎನ್೧ ವೀಸಾ ವಿಷಯದಲ್ಲೂ ಟ್ರಂಪ್ ಬಿಗಿ ನಿಲುವು ತಳೆದರೆ ಅನಿವಾಸಿ ಭಾರತೀಯರಿಗೆ ಸಮಸ್ಯೆ ಆಗಲಿದೆ. ಅಲ್ಲಿಯ ಕಂಪನಿಗಳು ಟ್ರಂಪ್ ನಿಲುವನ್ನು ಒಪ್ಪಿಕೊಳ್ಳಬೇಕು. ಆಗ ಕಂಪನಿಗಳು ಭಾರತೀಯ ಪೌರತ್ವ ಪಡೆಯುವಂತೆ ಮಾಡಬಹುದು. ಟ್ರಂಪ್ ಅಧಿಕಾರಕ್ಕೆ ಬಂದ ಕೂಡಲೇ ತೈಲ ಮತ್ತು ಔಷಧಿಕಗಳ ಬೆಲೆ ಅಧಿಕಗೊಳ್ಳಲಿದೆ. ಟ್ರಂಪ್ ಬಂದ ಮೇಲೆ ಔಷಧಗಳ ವ್ಯಾಪಾರ ತೀವ್ರಗೊಳ್ಳಲಿದೆ ಎಂದು ಅಲ್ಲಿಯ ಉದ್ಯಮಿಗಳು ಔಷಧಿಗಳನ್ನು ಹೆಚ್ಚು ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ. ಟ್ರಂಪ್ ಅಧಿಕಾರಕ್ಕೆ ಬಂದ ಕೂಡಲೇ ಔಷಧಿಗಳ ಬೆಲೆ ಅಧಿಕಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಟ್ರಂಪ್ ಉದಾರನಿಲುವು ತಳೆಯಬಹುದು ಎಂದು ಭಾವನೆ ಇದೆ. ಯುದ್ಧಗಳ ಬಗ್ಗೆ ಟ್ರಂಪ್ ಯಾವ ಭಾವನೆ ತಳೆಯುತ್ತಾರೆ ಎಂಬುದು ಪ್ರಮುಖವಾಗಲಿದೆ. ಅಮಾಯಕರ ಸಾವು, ಶಾಲೆ-ಆಸ್ಪತ್ರೆಗಳ ನಾಶವಾಗಿರುವ ಬಗ್ಗೆ ಯಾವ ನಿಲುವು ತಳೆಯುತ್ತಾರೆ ಎಂಬುದು ಪ್ರಮುಖವಾಗಲಿದೆ. ಯುದ್ಧ ನಿಲ್ಲಿಸುವುದಾಗಿ ಹೇಳಿದ್ದಾರೆ. ಯಾವ ರೀತಿ ನಿಲ್ಲಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ರಷ್ಯಾ ಜತೆ ಮಾತುಕತೆ ನಡೆಸಿ ಝೆಲನ್‌ಸ್ಕಿ ಮೇಲೆ ಒತ್ತಡ ಹೇರಿ ಯುದ್ಧದಿಂದ ಹಿಂದೆ ಸರಿಯುವಂತೆ ಮಾಡಬಹುದು. ಆದರೆ ಅದರಿಂದ ಯುದ್ಧ ನಿಲ್ಲುತ್ತದೆ ಎಂದು ಹೇಳಲು ಬರುವುದಿಲ್ಲ. ಒಂದುವೇಳೆ ಯುದ್ಧ ತೀವ್ರಗೊಂಡಲ್ಲಿ ಅಗತ್ಯವಸ್ತುಗಳ ಪೂರೈಕೆ ಸರಪಳಿಗೆ ಧಕ್ಕೆ ಒದಗಲಿದೆ. ಟ್ರಂಪ್ ಮೂಲ ಉದ್ದೇಶ ಅಮೆರಿಕದ ಹಿತ ಕಾಯುವುದಷ್ಟೇ.