ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಟ್ರಂಪ್ ಗೆಲುವು ಭಾರತದತ್ತ ಒಲವು

02:30 AM Nov 07, 2024 IST | Samyukta Karnataka

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮತ್ತೆ ಆಯ್ಕೆಗೊಂಡಿರುವುದು ಭಾರತದಲ್ಲಿ ಸಂತಸ ಮೂಡಿದೆ. ಟ್ರಂಪ್ ಮೂಲತಃ ಉದ್ಯಮಿ. ವ್ಯಾಪಾರದಲ್ಲಿ ನಿಪುಣ. ಹೀಗಾಗಿ ಭಾರತದ ಉದ್ಯಮಿಗಳಿಗೆ ಉತ್ತಮ ಅವಕಾಶಗಳು ಅಮೆರಿಕದಲ್ಲಿ ಲಭಿಸಲಿದೆ. ಚೀನಾದಿಂದ ಅಮೆರಿಕಕ್ಕೆ ಬರುತ್ತಿದ್ದ ವಸ್ತುಗಳ ಪ್ರಮಾಣ ಇಳಿಮುಖಗೊಳ್ಳಲಿದ್ದು. ಭಾರತದ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಅದಕ್ಕೆ ತಕ್ಕಂತೆ ಟ್ರಂಪ್ ಭಾರತ ಸರ್ಕಾರದಿಂದ ಕಡಿಮೆ ರಫ್ತು ತೆರಿಗೆಯನ್ನು ನಿರೀಕ್ಷಿಸುತ್ತಾರೆ. ಐಟಿ, ಔಷಧ ಮತ್ತು ರಕ್ಷಣಾ ವಲಯದಲ್ಲಿ ಭಾರತಕ್ಕೆ ಹೆಚ್ಚಿನ ಮಾರುಕಟ್ಟೆ ಲಭಿಸುವ ಸಾಧ್ಯತೆಗಳಿವೆ. ಐಟಿ ಕಂಪನಿಗಳಿಗೆ ಎಚ್-೧ಬಿ ವೀಸಾ ಬಹಳ ಮುಖ್ಯ. ಇದರ ಮೇಲೆ ಟ್ರಂಪ್ ಹಿಂದೆ ನಿರ್ಬಂಧ ಹೇರಿದ್ದರು. ಈ ಬಾರಿ ಆ ಕೆಲಸ ಮಾಡದೇ ಇರಬಹುದು. ಆದರೂ ನಮ್ಮ ಕಂಪನಿಗಳು ಸ್ಥಳೀಯರನ್ನು ನೇಮಿಸಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಟ್ರಂಪ್-ಮೋದಿ ಉತ್ತಮ ಸ್ನೇಹಿತರಾಗಿರುವುದರಿಂದ ಎರಡೂ ದೇಶಗಳ ನಡುವೆ ಇರುವ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಮೋದಿಯಿಂದ ಟ್ರಂಪ್ ಹೆಚ್ಚು ಪ್ರಭಾವಿತರಾಗಿರುವುದಂತೂ ನಿಜ. ಮೋದಿ ಚುನಾವಣೆ ಕಾಲದಲ್ಲಿ ಚಾಯ್‌ವಾಲಾ ಎಂಬುದನ್ನೇ ಪ್ರಚಾರ ಬಳಸಿಕೊಂಡಂತೆ ಟ್ರಂಪ್ ಕಸದ ವಾಹನವನ್ನೇರಿ ಪ್ರಚಾರ ಪಡೆದರು. ಹೀಗಾಗಿ ಟ್ರಂಪ್‌ಗೆ ಇತರ ದೇಶಗಳಿಗಿಂತ ಭಾರತ ಮಾನಸಿಕವಾಗಿ ಹತ್ತಿರ.
ಕಮಲಾ ಹ್ಯಾರಿಸ್ ಉತ್ತಮ ಸ್ಪರ್ಧೆ ನೀಡಿದರೂ ಟ್ರಂಪ್ ರಾಜಕೀಯ ವರಸೆಗಳಿಗೆ ಉತ್ತರ ನೀಡುವುದು ಕಷ್ಟವಾಯಿತು. ಭಾರತೀಯ ಸಂಜಾತೆ ಎಂಬ ಅಭಿಮಾನವಿದ್ದರೂ ವಿದೇಶಾಂಗ ವ್ಯವಹಾರದ ದೃಷ್ಟಿಯಿಂದ ಟ್ರಂಪ್ ನಮಗೆ ಸಮೀಪವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.
ಭಾರತದಲ್ಲಿ ಕೆಲಸ ಮಾಡುತ್ತಿರುವ ಎಬಿಬಿ, ಸೀಮನ್ಸ್, ಹನಿವೆಲ್, ಜಿಇ, ಹಿಟಾಚಿ ಕಂಪನಿಗಳಿಗೆ ಹೆಚ್ಚಿನ ಬಲ ಬರಲಿದೆ. ಅದರೊಂದಿಗೆ ಟ್ರಂಪ್ ಬಂದರೆ ಅಮೆರಿಕದಲ್ಲಿ ಹಣದುಬ್ಬರ ಕೂಡ ಅಧಿಕಗೊಳ್ಳಲಿದೆ ಎಂಬ ಆತಂಕವೂ ಕಾಡುತ್ತಿದೆ. ಇದರ ದುಷ್ಪರಿಣಾಮ ಭಾರತದ ಮೇಲೂ ಆಗಬಹುದು. ಈಗ ಸದ್ಯಕ್ಕೆ ಭಾರತದ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಇದು ಉಳಿಯಲಿದೆ ಎಂಬ ವಿಶ್ವಾಸವೇನೂ ಇಲ್ಲ. ಆದರೂ ವ್ಯಾಪಾರ-ವಹಿವಾಟು ಅಧಿಕಗೊಳ್ಳುವುದರಲ್ಲಿ ಸಂದೇಹವಿಲ್ಲ. ನಮ್ಮ ದೇಶದ ಉದ್ಯಮಿಗಳು ಟ್ರಂಪ್ ಗೆಲುವನ್ನು ನಿರೀಕ್ಷಿಸಿದ್ದರು. ಅವರಿಗೆ ಕಮಲಾ ಹ್ಯಾರಿಸ್‌ನಿಂದ ಉಪಯೋಗವಾಗಬಹುದು ಎಂಬ ನಿರೀಕ್ಷೆ ಏನೂ ಇರಲಿಲ್ಲ. ಟ್ರಂಪ್ ತನ್ನ ಚುನಾವಣೆ ಪ್ರಚಾರದಲ್ಲಿ ಮೋದಿಯ ಹಲವು ರೀತಿ ನೀತಿಗಳನ್ನು ಬಳಸಿಕೊಂಡಿರುವುದು ಸ್ಪಷ್ಟ. ಅದರಲ್ಲೂ ಭಾರತೀಯ ಸಂಜಾತರಿಗೆ ಮೋದಿ ಬಗ್ಗೆ ಅಭಿಮಾನ ತನ್ನತ್ತ ತಿರುಗುವಂತೆ ಮಾಡುವುದರಲ್ಲಿ ಯಶಗಳಿಸಿದರು ಎಂಬುದಂತೂ ನಿಜ. ಯುದ್ಧಗಳಿಗೆ ಪೂರ್ಣ ವಿರಾಮ ಕೊಡುವುದಾಗಿ ಹೇಳಿದ್ದಾರೆ. ಇದನ್ನು ಸಾಧಿಸಿದರೆ ಜಾಗತಿಕ ಮಟ್ಟದಲ್ಲಿ ಟ್ರಂಪ್ ನಾಯಕನಾಗುವುದರಲ್ಲಿ ಸಂದೇಹವಿಲ್ಲ. ಟ್ರಂಪ್ ಯಾರ ಅಂಕೆಗೂ ನಿಲುಕದ ವ್ಯಕ್ತಿ. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಬಹುತೇಕ ತಿಳಿಯುವುದಿಲ್ಲ. ಒಮ್ಮೆ ತೀರ್ಮಾನಿಸಿದರೆ ಅದರಲ್ಲಿ ಅತ್ತಇತ್ತ ಸರಿಯುವುದಿಲ್ಲ. ಹೀಗಾಗಿ ಅವರಿಂದ ಬದಲಾವಣೆ ನಿರೀಕ್ಷಿಸಬಹುದು. ಯಥಾಸ್ಥಿತಿವಾದಿಯಂತೂ ಅಲ್ಲ. ಏನಾದರೂ ಮಾಡಲೇಬೇಕು ಎಂಬ ಚಿಂತನಶೀಲತೆಯನ್ನು ಉಳಿಸಿಕೊಂಡವರು. ಹೀಗಾಗಿ ಆರ್ಥಿಕ ರಂಗದಲ್ಲಿ ಟ್ರಂಪ್ ಪ್ರಭಾವ ಮುಂದಿನ ದಿನಗಳಲ್ಲಿ ಕಾಣುವುದು ಖಚಿತ.
ಈಗ ಅಮೆರಿಕದ ನಾಯಕತ್ವ ಬದಲಾಗಿರುವುದರಿಂದ ರಷ್ಯಾ-ಉಕ್ರೇನ್ ಯುದ್ಧ, ಇಸ್ರೇಲ್-ಇರಾನ್ ಸಂಘರ್ಷ ಯಾವ ಸ್ವರೂಪ ಪಡೆಯುತ್ತದೊ ತಿಳಿಯದು. ಯುದ್ಧಗಳಿಗೆ ನನ್ನಬೆಂಬಲ ಎಂದು ಮಾತ್ರ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಇವರು ಯಾವ ರೀತಿ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದು ಮುಖ್ಯ. ಅಮೆರಿಕ ಆರ್ಥಿಕವಾಗಿ ಕುಸಿಯಲು ಟ್ರಂಪ್ ಅವಕಾಶ ನೀಡುವುದಿಲ್ಲ. ಅದಕ್ಕಾಗಿ ಅವರು ವ್ಯಾಪಾರ-ವ್ಯವಹಾರವನ್ನು ಚುರುಕುಗೊಳಿಸುತ್ತಾರೆ. ಅದರಿಂದ ಯುದ್ಧದ ಕಾರ್ಮೋಡಗಳು ಹಿಂದೆ ಸರಿಯುವುದಂತೂ ಖಂಡಿತ. ಟ್ರಂಪ್‌ಗೆ ಯಾವುದೇ ರೀತಿಯ ಭಯ ಇಲ್ಲ. ತಮ್ಮ ನಿರ್ಧಾರಕ್ಕೆ ಒಮ್ಮೆ ಬದ್ಧರಾದರೆ ಸ್ವಲ್ಪವೂ ಹಿಂದಕ್ಕೆ ಸರಿಯುವುದಿಲ್ಲ. ಈ ಮನೋಭಾವವನ್ನು ಉದ್ಯಮಿಗಳು ಬಹಳ ಇಷ್ಟಪಡುತ್ತಾರೆ. ಅವರಿಗೆ ತಮ್ಮ ಬಂಡವಾಳ ಹೂಡಿಕೆ ಉತ್ತಮ ಲಾಭ ಬಂದರೆ ಸಾಕು. ಅದು ಟ್ರಂಪ್‌ನಿಂದ ಸಿಗುತ್ತದೆ ಎಂಬ ವಿಶ್ವಾಸ ಜನರಲ್ಲಿ ಮೂಡಿದೆ. ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮಹತ್ವ ಲಭಿಸುವುದಕ್ಕೆ ಟ್ರಂಪ್ ಬೆಂಬಲ ಸಿಗುತ್ತದೆ ಎಂಬ ಆಶಾಭಾವನೆ ಮೂಡಿದೆ. ಭಾರತವನ್ನು ವಿರೋಧಿಸುವವರಿಗೆ ಟ್ರಂಪ್ ಗೆಲುವು ನಿರುತ್ಸಾಹ ಮೂಡಿಸಿದ್ದರೆ ಅಚ್ಚರಿ ಏನೂ ಇಲ್ಲ. ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರಂಪ್ ಪ್ರಭಾವ ಕಂಡುಬರುವುದಂತೂ ನಿಜ. ಆರ್ಥಿಕವಾಗಿ ಅಮೆರಿಕ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಟ್ರಂಪ್ ಪರಿಹಾರ ಕಂಡು ಹಿಡಿಯಲು ಸ್ಪಷ್ಟ ಹೆಜ್ಜೆಗಳನ್ನಿಡುವುದಂತೂ ನಿಜ. ಅಮೆರಿಕದ ವಲಸೆ ಸಮಸ್ಯೆಗೆ ಮೊದಲು ಗಮನಹರಿಸುವುದಂತೂ ನಿಶ್ಚಿತ. ಅಮೆರಿಕದಲ್ಲಿರುವ ಭಾರತೀಯ ಸಂಜಾತರಿಗೆ ರಕ್ಷಣೆ ಲಭಿಸಲಿದೆ.

Next Article