ಟ್ರೊಲ್ ಮಿನಿಸ್ಟರ್ ಎನ್ನುವುದು ನಿಮ್ಮ ಪಕ್ಷದ ಸಿದ್ಧಸೂತ್ರ
ಟೀಕಿಸಲು ವಿಷಯಗಳಿಲ್ಲದಾಗ ವೈಯಕ್ತಿಕ ನಿಂದನೆಗಿಳಿಯುತ್ತೀರಿ, ಟ್ರೊಲ್ ಮಿನಿಸ್ಟರ್ ಎನ್ನುತ್ತೀರಿ, ಇದು ನಿಮ್ಮ ಪಕ್ಷದ ಸಿದ್ಧಸೂತ್ರ ಮತ್ತು ಕಾರ್ಯತಂತ್ರ! ಕಾನ್ವೆಂಟ್ ದಲಿತ್ ಎಂದಾದರೂ ಹೇಳಿ, ಟ್ರೊಲ್ ಮಿನಿಸ್ಟರ್ ಎಂದಾದರೂ ಹೇಳಿ, ಗೋಲ್ಡನ್ ಸ್ಪೂನ್ ಎಂದಾದರೂ ಹೇಳಿ ನನ್ನನ್ನು ಕುಗ್ಗಿಸಲು, ಬೆದರಿಸಲು ಸಾಧ್ಯವಿಲ್ಲ
ಬೆಂಗಳೂರು: ಈಗಾಗಲೇ ನಿಮ್ಮ ಪ್ರಶ್ನೆಗೆ ಉತ್ತರ ನೀಡಿದ್ದೇನೆ, ಆದರೂ ಸಹ ಮತ್ತೆ ಅದೇ ಪ್ರಶ್ನೆ ಎತ್ತಿದ್ದೀರಿ ಎಂದರೆ, ನಿಮಗೆ ಅರಿವಿನ ಕೊರತೆ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು “ಅಮಾನತ್ತುಗೊಂಡ ಆರು ತಿಂಗಳ ಅವಧಿಯೊಳಗೆ ಆಪಾದಿತ ನೌಕರನ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸದಿದ್ದಲ್ಲಿ ಅಥವಾ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸದಿದ್ದಲ್ಲಿ ಅಂತಹ ನೌಕರನ ಅಮಾನತ್ತನ್ನು ರದ್ದುಗೊಳಿಸುವ ಅಥವಾ ಮುಂದುವರೆಸುವ ಬಗ್ಗೆ ಸಕ್ಷಮ ಪ್ರಾಧಿಕಾರವು ವಿಳಂಬವಿಲ್ಲದೇ ತೀರ್ಮಾನಿಸತಕ್ಕದ್ದು ಹಾಗೂ ಈ ಅವಧಿಯೊಳಗೆ ತೀರ್ಮಾನಿಸಿ ಮುಂದುವರೆಸಲು ಆದೇಶಿಸದಿದ್ದಲ್ಲಿ ಅಮಾನತ್ತು ಭಾವಿತ (Deemed) ಆಧಾರದಮೇಲೆ ಅಂದರೆ ಅಮಾನತ್ತಿನ ದಿನಾಂಕದಿಂದ 6 ತಿಂಗಳು ಪೂರ್ಣಗೊಂಡ ದಿನಾಂಕದಿಂದ ರದ್ದಾಗುವುದು. ನಿಮ್ಮ ಸರ್ಕಾರದ ಅವಧಿಯಲ್ಲಿ ಅಕ್ರಮ ನಡೆದಿದ್ದರೂ ಕ್ರಮ ಜರುಗಿಸದೆ ಕುಳಿತಿದ್ದನ್ನು ವೈಫಲ್ಯವೆಂದು ಒಪ್ಪಿಕೊಳ್ಳುವಿರಾ ಅಥವಾ ಭ್ರಷ್ಟಾಚಾರಕ್ಕೆ ಬೆಂಬಲ ಎಂದು ಒಪ್ಪಿಕೊಳ್ಳುವಿರಾ? 6 ತಿಂಗಳಲ್ಲಿ ತನಿಖೆ ಮುಗಿಸುವುದಕ್ಕೆ ಅದು ಕಾಟಾಚಾರದ ತನಿಖೆಯಲ್ಲ, ಸಮಗ್ರ ತನಿಖೆ. ಪರಿಣಾಮಕಾರಿ ತನಿಖೆಗಾಗಿ ವಿಶೇಷ ADHOC ಸಮಿತಿ ರಚಿಸಲಾಗಿದೆ, ವರದಿ ಬಂದಾಕ್ಷಣ ಮುಂದಿನ ಕ್ರಮ ಜರುಗಿಸುತ್ತೇವೆ, ಯಾದಗಿರಿ ಜಿಲ್ಲೆಯಲ್ಲಿ ಹುದ್ದೆಗಳು ಖಾಲಿ ಇದ್ದ ಕಾರಣ, ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಅಧಿಕಾರಿಗಳ ಕೊರತೆ ನೀಗಿಸುವ ದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ. ನಾರಾಯಣಸ್ವಾಮಿಯವರೇ, ಪ್ರಶ್ನೆಗಳಿಗೆ ಉತ್ತರವಿಲ್ಲದಾಗ, ಉತ್ತರಗಳಿಗೆ ಪ್ರಶ್ನೆಗಳಿಲ್ಲದಾಗ, ಟೀಕಿಸಲು ವಿಷಯಗಳಿಲ್ಲದಾಗ ವೈಯಕ್ತಿಕ ನಿಂದನೆಗಿಳಿಯುತ್ತೀರಿ, ಟ್ರೊಲ್ ಮಿನಿಸ್ಟರ್ ಎನ್ನುತ್ತೀರಿ, ಇದು ನಿಮ್ಮ ಪಕ್ಷದ ಸಿದ್ಧಸೂತ್ರ ಮತ್ತು ಕಾರ್ಯತಂತ್ರ! ಕಾನ್ವೆಂಟ್ ದಲಿತ್ ಎಂದಾದರೂ ಹೇಳಿ, ಟ್ರೊಲ್ ಮಿನಿಸ್ಟರ್ ಎಂದಾದರೂ ಹೇಳಿ, ಗೋಲ್ಡನ್ ಸ್ಪೂನ್ ಎಂದಾದರೂ ಹೇಳಿ ನನ್ನನ್ನು ಕುಗ್ಗಿಸಲು, ಬೆದರಿಸಲು ಸಾಧ್ಯವಿಲ್ಲ. ನಾರಾಯಣಸ್ವಾಮಿಯವರಿಗೆ ನನ್ನ ಸಲಹೆ, ನಿಮ್ಮ ಟ್ವೀಟರ್(X) ಖಾತೆ ನಿರ್ವಾಹಕರು ಅಪ್ರಬುದ್ಧ ಹಾಗೂ ಬಾಲಿಶ ಪೋಸ್ಟ್ ಗಳನ್ನು ಬರೆದು ನಿಮ್ಮನ್ನು ಅಜ್ಞಾನಿಗಳು ಎಂಬಂತೆ ಬಿಂಬಿಸುತ್ತಿದ್ದಾರೆ, ಸಾಮಾಜಿಕ ಜಾಲತಾಣದ ನಿರ್ವಾಹಕರ ವೇತನ ಕನಿಷ್ಠ ವೇತನ ಮಾಡಿ ಅವರನ್ನು ಸಮಾಧಾನಪಡಿಸಿ, ಆ ಮೂಲಕ ನಿಮ್ಮ ಮರ್ಯಾದೆ ಉಳಿಸಿಕೊಳ್ಳಿ! ಎಂದಿದ್ದಾರೆ.