ಟ್ರೋಲ್‌ಗೆ ಅಂಜುವ ವ್ಯಕ್ತಿ ನಾನಲ್ಲ
ಬೆಂಗಳೂರು: ವಿದ್ಯಾರ್ಥಿ ಅಸಭ್ಯವಾಗಿ ಮಾತನಾಡಲು ಬಿಡಬಾರದಿತ್ತು. ಇದಕ್ಕೆ ಕಾರಣರಾದ ಪ್ರಾಂಶುಪಾಲರು ಹಾಗೂ ಬಿಇಒ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಚಿವರಿಗೆ ವಿದ್ಯಾರ್ಥಿಯೊಬ್ಬ ಕನ್ನಡ ಭಾಷೆ ಬರುವುದಿಲ್ಲ ಎಂದು ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ನನ್ನ ಬಗ್ಗೆ ಬಂದಿರುವ ಟ್ರೋಲ್‌ಗಳನ್ನು ನೋಡಿದ್ದೇನೆ. ನಾನು ವಿದ್ಯಾರ್ಥಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿಲ್ಲ. ಪ್ರಾಂಶುಪಾಲರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಹೇಳಿದ್ದೇನೆ. ಟ್ರೋಲ್‌ಗಳಿಗೆ ಅಂಜುವ ವ್ಯಕ್ತಿ ನಾನಲ್ಲ. ಟ್ರೋಲ್ ಮಾಡುವವರಿಗೆ ಉದ್ಯೋಗ ಇರುವುದಿಲ್ಲ ಹೀಗಾಗಿ ಅವರಿಗೆ ಟ್ರೋಲ್ ಮಾಡುವುದೇ ಕೆಲಸ. ವಿದ್ಯಾರ್ಥಿ ಮೇಲೆ ಕ್ರಮ ಕೈಗೊಳ್ಳಲು ನನಗೆ ಯಾವ ಅಧಿಕಾರ ಇದೆ. ಪ್ರಾಂಶುಪಾಲರು, ಉಪನ್ಯಾಸಕರು ಮಕ್ಕಳನ್ನು ಹತೋಟಿಯಲ್ಲಿಡಬೇಕು, ಅಂದು ೬೪೦ ಶಾಲೆಗಳ ವಿದ್ಯಾರ್ಥಿಗಳು ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ೫೦ ಸಾವಿರ ಮಕ್ಕಳು ಲೈವ್‌ನಲ್ಲಿ ನೋಡುತ್ತಿದ್ದರು. ಸರ್ಕಾರದಿಂದ ಮಕ್ಕಳ ಭವಿಷ್ಯಕ್ಕೆ ಮಾಡುತ್ತಿರುವ ಒಂದು ದೊಡ್ಡ ಯೋಜನೆಯದು. ಆ ಯೋಜನೆ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುವ ಬದಲು ಯಾರೋ ಒಬ್ಬ ವಿದ್ಯಾರ್ಥಿ ವಿದ್ಯಾ ಮಂತ್ರಿಗೆ ಕನ್ನಡ ಮಾತನಾಡಲು ಬರೋದಿಲ್ಲ ಎಂದು ಹೇಳಿದ್ದನ್ನೇ ಹೈಲೈಟ್ ಮಾಡುತ್ತಿದ್ದೀರಾ. ನಿಮ್ಮ ಮಕ್ಕಳು ಈ ರೀತಿ ಮಾಡಿದ್ದರೆ ಮನೆಯಲ್ಲಿ ಬುದ್ಧಿ ಹೇಳುತ್ತಿರಲಿಲ್ಲವೇ, ನಾನಾಗಿದ್ದರೆ ನನ್ನ ಮಗಿನಿಗೆ ಬುದ್ಧಿ ಹೇಳುತ್ತಿದ್ದೆ ಎಂದರು.
ಪದೇ ಪದೇ ನನಗೆ ಕನ್ನಡ ಬರೋದಿಲ್ಲ ಎಂದು ಹೇಳೋದನ್ನು ನಿಲ್ಲಿಸಬೇಕು. ಸರ್ಕಾರದಲ್ಲಿ ಜವಾಬ್ದಾರಿಯುತ ಶಿಕ್ಷಣ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ನೀವು ಪುಗಸಟ್ಟೆ ಟ್ರೋಲ್ ಮಾಡಿದರೆ ನನಗೆ ಏನು ಆಗುವುದಿಲ್ಲ. ಮಧು ಬಂಗಾರಪ್ಪ ಮಧು ಬಂಗಾರಪ್ಪನೇ ಆಗಿರುತ್ತಾನೆ. ವಿಪಕ್ಷದವರು ಯಾರು ಏನೇ ಟೀಕೆ ಮಾಡಿದರೂ ನಾನು ನನ್ನ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಸಭಾಪತಿ ಬಸವರಾಜ ಹೊರಟ್ಟಿಯವರು ನನಗೆ ಫೋನ್ ಮಾಡಿ ಸರಿಯಾಗಿ ಮಾತನಾಡಿದ್ದೀಯ ಎಂದು ಹೇಳಿದ್ದಾರೆ ಎಂದರು.
ನಾನು ನನ್ನ ಮಗನನ್ನು ಎಷ್ಟು ಜವಾಬ್ದಾರಿ, ಪ್ರೀತಿಯಿಂದ ನೋಡಿಕೊಳ್ಳುತ್ತೇನೆಯೋ ಅಷ್ಟೇ ಪ್ರೀತಿ, ಕಾಳಜಿಯನ್ನು ಈ ರಾಜ್ಯದ ಮಕ್ಕಳ ಮೇಲೂ ಸಹ ತೋರಿಸುತ್ತೇನೆ. ಅವರನ್ನು ದೇವರ ಸ್ಥಾನದಲ್ಲಿ ನೋಡುತ್ತೇನೆ. ಟ್ರೋಲ್ ಮಾಡಿ ನನ್ನನ್ನು ಬಗ್ಗಿಸಲು ಯಾರಿಗೂ ಸಾಧ್ಯವಿಲ್ಲ ಎಂದರು.