For the best experience, open
https://m.samyuktakarnataka.in
on your mobile browser.

ಡಾರ್ವಿನ್ಸ್ ಸಿದ್ಧಾಂತ, ಮದುವೆ ಎಲ್ಲಿಯ ಸಂಬಂಧ…

01:15 AM Feb 03, 2024 IST | Samyukta Karnataka
ಡಾರ್ವಿನ್ಸ್ ಸಿದ್ಧಾಂತ  ಮದುವೆ ಎಲ್ಲಿಯ ಸಂಬಂಧ…

ಸರ್, ಯು ಆರ್ ಗ್ರೇಟ್. ನಿಮ್ಮ ಪುಸ್ತಕ ಓದಿದ್ದೇನೆ. ಒಳ್ಳೆಯ ಸಾಲುಗಳು, ಸಂದೇಶಗಳು ಇವೆ. ನಿಮ್ಮ ವ್ಯಕ್ತಿತ್ವ ಪರಿಚಯ ಹೇಳಿ ಎಂದು ಕೋರ್ಟಿನ ಸಾಕ್ಷಿದಾರರ ಕಟೆಕಟೆಯಲ್ಲಿ ನಿಂತ ಅವರನ್ನು ಮನಸಾರೆ ಹೊಗಳಿ, ಕ್ರಾಸ್ ಎಕ್ಸಾಮಿನೇಷನ್ ಪ್ರಾರಂಭಿಸಿದೆ. "ನಾನು ಸರಕಾರಿ ಪದವಿ ಕಾಲೇಜಲ್ಲಿ ಭೌತಶಾಸ್ತ್ರದ ಲೆಕ್ಚರರ್. ಜೀವಶಾಸ್ತ್ರದ ಡಾರ್ವಿನ್ಸ್ ವಿಕಾಸವಾದ ಸಿದ್ಧಾಂತ, ಆಲ್ಬರ್ಟ್ ಐನ್‌ಸ್ಟಿನ್‌ರ ಸಾಪೇಕ್ಷ ಸಾಂದ್ರತೆ ಸಿದ್ಧಾಂತ ನನ್ನ ಅಚ್ಚು ಮೆಚ್ಚಿನ ವಿಷಯವಾಗಿವೆ. ನನಗೆ ಕನ್ನಡ, ಹಿಂದಿ, ಇಂಗ್ಲಿಷ್ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿ. ಕಥಾ ಸಂಕಲನ, ಕವನ ಸಂಕಲನ ಬಿಡುಗಡೆ ಆಗಿವೆ. ನೂರಾರು ಕವನಗಳು ನನ್ನ ಸ್ಮೃತಿಯಲ್ಲಿ ಇವೆ. ನನಗೆ ಪತ್ರ ಬರೆಯುವ ಹವ್ಯಾಸ ಇದೆ. ಸಂದರ್ಭಕ್ಕೆ ತಕ್ಕ ಹಾಗೆ ಕವನ, ಉಕ್ತಿ, ಗಜಲ್ ಸಾಲು, ಡಾರ್ವಿನ್‌ನ ಸಿದ್ಧಾಂತ ಉದಾಹರಿಸಿ ಪತ್ರ ಬರೆಯುತ್ತೇನೆ. ಕೋರ್ಟಿನಲ್ಲಿ ಹಾಜರುಪಡಿಸಿದ್ದ ಅವರು ಬರೆದ ಪತ್ರಗಳನ್ನು ತೋರಿಸಿ ಪ್ರಶ್ನಿಸಿದೆ ಬೇರೆ ದಾರಿ ಕಾಣದೆ ಪತ್ರ, ಕೈ ಬರಹ ತಮ್ಮದೆಂದು ಒಪ್ಪಿಕೊಂಡರು. ನಾನು ಋಜುವಾತುಪಡಿಸುವ ವಿವಾದದ ಭಾರ ಅರ್ಧ ಇಳಿಯಿತು.
ಇಷ್ಟೆಲ್ಲ ಉತ್ಕೃಷ್ಟವಾದ ಪರಿಚಯ ಮಂಡಿಸಿದವರು ಸೂರ್ಯ, ತನ್ನ ಹೆಂಡತಿ ರಮ್ಯಾ (ಇಬ್ಬರ ಹೆಸರು ಬದಲಿಸಲಾಗಿದೆ) ದಾಖಲಿಸಿದ ಜೀವನಾಂಶ ದಾವೆಯಲ್ಲಿ ಹೆಂಡತಿ ಅಲ್ಲವೆಂದು ಸಂಬಂಧ ನಿರಾಕರಿಸಿದ್ದಾರೆ. ಸೂರ್ಯ ಅವರಿಗೆ, ಪರಿಚಯದವರಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಇನ್‌ಲ್ಯಾಂಡ್ ಪತ್ರ, ಪೋಸ್ಟ್ ಕಾರ್ಡ್ ಬರೆಯುವ ಹವ್ಯಾಸ. ಪತ್ರಗಳಲ್ಲಿ ನೆಚ್ಚಿನ ಕವಿಯ ಕವನ, ಗಜಲ್, ನೆಚ್ಚಿನ ಕಥೆಯ ಸಾರಾಂಶ, ವಿಜ್ಞಾನಿಯ ಆವಿಷ್ಕಾರ, ಐನ್‌ಸ್ಟಿನ್, ಡಾರ್ವಿನ್ಸ್ ಸಿದ್ಧಾಂತ ಹೀಗೆ ಏನೆಲ್ಲಾ ಬರೆಯುತ್ತಿದ್ದರು. ಆಗೆಲ್ಲ ಪೋಸ್ಟ್ ಕಾರ್ಡ್, ಇನ್‌ಲ್ಯಾಂಡ್ ಪತ್ರ, ಟೆಲಿಗ್ರಾಮ್ ಹೀಗೆಲ್ಲ ಮೂಲಗಳಿಂದ ಒಬ್ಬರಿಂದ ಇನ್ನೊಬ್ಬರಿಗೆ ಸಂವಹನ ನಡೆಯುತ್ತಿತ್ತು. ಇವರನ್ನು ಪತ್ರಸಾಹಿತಿ ಅಂತ ಗೆಳೆಯರ ಬಳಗದಲ್ಲಿ ಗುರುತಿಸಿ ಕರೆಯುತ್ತಾರೆ.
ಸೂರ್ಯ ಮತ್ತು ರಮ್ಯಾ ಇವರ ವಿವಾಹ ಅವರ ಜಾತಿಯ ಪದ್ಧತಿ, ಸಂಪ್ರದಾಯದಂತೆ ನಡೆಯಿತು. ಕೆಲವೊಂದು ವರ್ಷ ಚೆನ್ನಾಗಿ ಬಾಳಿದರು. ಸೂರ್ಯಗೆ ವಾಸ್ತವಕ್ಕಿಂತ ಕಾಲ್ಪನಿಕ ಆಸೆಗಳು ಬಹಳ. ಇದ್ದದ್ದು ಸರಿ ಇಲ್ಲ, ಇಲ್ಲದ್ದು ಸುಂದರವಾಗಿರುತ್ತದೆ ಅನ್ನುವ ಭಾವ. ಗಂಡ ಹೆಂಡತಿ ನಡುವೆ ಸಾಮರಸ್ಯ ಉಳಿಯಲಿಲ್ಲ. ಇಲ್ಲದ ತಪ್ಪು ಹುಡುಕಿ ಮನೆಯಿಂದ ಹೆಂಡತಿಯನ್ನು ಹೊರಗೆ ದೂಡಿದರು. ರಮ್ಯಾ ತವರುಮನೆ ಸೇರಿದಳು. ತವರು ಮನೆಯಲ್ಲಿ ನೂರೆಂಟು ತಾಪತ್ರಯಗಳು. ಅವಳಿಗೆ ಜೀವನ ನಡೆಸುವುದು ಕಷ್ಟವಾಯಿತು.
ರಮ್ಯಾ ತಂದೆಯೊಂದಿಗೆ ಬಂದು ತನ್ನ ಜೀವನಗಾಥೆಯನ್ನು ತೆರೆದಿಟ್ಟಳು. ಗಂಡ ಎಂಥವನೇ ಇದ್ದರೂ ಹೊಂದಿಕೊಂಡು ಬದುಕುವ ಆಸೆ. ಅವನಿಗೆ ಒತ್ತಡ ತಂದರೆ ಸರಿಯಾಗುತ್ತಾನೆ, ತನ್ನನ್ನು ಕರೆದುಕೊಂಡು ಬಾಳುವೆ ಮಾಡುವನು ಅನ್ನುವ ಭರವಸೆ. ಸೂರ್ಯಗೆ ಕೈ ತುಂಬ ಸಂಬಳ, ಊರಲ್ಲಿ ಮನೆತನಕ್ಕೆ ಬೆಲೆ ಬಾಳುವ ಜಮೀನು, ಮನೆ ಇವೆ. ಮಕ್ಕಳು ಇಲ್ಲದ್ದರಿಂದ ಹೆಂಡತಿ ತಾನಾಗಿ ಗಂಡನ ಆಸ್ತಿಯಲ್ಲಿ ಪಾಲು ಕೇಳಲಾಗದು. ಆದರೆ ಗಂಡನ ಸಂಬಳದಲ್ಲಿ, ಆಸ್ತಿಗಳಲ್ಲಿ ಜೀವನಾಂಶದ ಹಕ್ಕು ಚಲಾಯಿಸಬಹುದು. ರಮ್ಯಾಳಿಂದ, ಗಂಡನ ಸಂಬಳ, ಆಸ್ತಿಗಳಲ್ಲಿ ಜೀವನಾಂಶದ ಹಕ್ಕು ಸಾಧಿಸಿ ಜೀವನಾಂಶ ಕೋರಿ ಸಿವಿಲ್ ದಾವೆ ಸಲ್ಲಿಸಿದೆ.
ಪ್ರತಿವಾದಿ ಸೂರ್ಯ, ವಕೀಲರ ಮುಖಾಂತರ ಹಾಜರಾದರು. ಕೈಫಿಯತ್ತು ತಕರಾರು ಸಲ್ಲಿಸಿ, ವಾದಿ ರಮ್ಯಾ ತನ್ನ ಹೆಂಡತಿ ಅಲ್ಲ, ಅವಳ ಜೊತೆ ಲಗ್ನ ಆಗಿಲ್ಲ. ತನಗೆ ಶಶಿ (ಹೆಸರು ಬದಲಿಸಲಾಗಿದೆ) ಅನ್ನುವಳ ಜೊತೆ ಮದುವೆಯಾಗಿ, ಹಿಂದೂ ವಿವಾಹ ನೋಂದಣಿ ಕಾನೂನಿನ ಅನ್ವಯ ರಿಜಿಸ್ಟ್ರೇಷನ್ ಆಗಿದೆ. ನಮಗೆ ಐದು ವರ್ಷದ ಹೆಣ್ಣು ಮಗು ಇದೆ. ಅವರ ಜೊತೆ ತಾನು ವಾಸಿಸುತ್ತಿದ್ದೇನೆಂದು ವಾದಿಸಿದರು. ಇದೆಲ್ಲ ಸಂಗತಿ ನನಗೆ ಆಶ್ಚರ್ಯ, ವಾದಿಗೆ ದಿಗ್ಭçಮೆ ಆಯಿತು. ರಮ್ಯಾಳ ತಂದೆ ಚಾಣಾಕ್ಷ. ಪ್ರತಿವಾದಿ ಹೇಳಿದ ಸಂಗತಿ ಬಗ್ಗೆ ಪತ್ತೇದಾರಿ ಮಾಡಲು ತಿಳಿಸಿದೆ.
ಪ್ರತಿವಾದಿಯ ಹೆಂಡತಿ ಎಂದು ಋಜುವಾತು ಪಡಿಸುವ ಜವಾಬ್ದಾರಿ ವಾದಿಯ ಹೆಗಲೇರಿತು. ಮದುವೆ ಸಂಪ್ರದಾಯ ಪ್ರಕಾರ ಆಗಿದೆ ಎಂದು ಪೂರಕ ದಾಖಲೆಯೊಂದಿಗೆ ಋಜುವಾತುಪಡಿಸಬೇಕಿತ್ತು. ವಾದಿಯ ತಂದೆ ಮದುವೆಯ ಯಾದಿ, ವಿವಾಹ ಆಮಂತ್ರಣ ಪತ್ರಿಕೆ, ಫೋಟೋಗಳು, ವಾದಿಗೆ, ತನಗೆ, ವಾದಿ ಸಹೋದರರಿಗೆ, ಸಂಬಂಧಿಕರಿಗೆ, ಊರ ಹಿರಿಯರಿಗೆ ಪ್ರತಿವಾದಿ ಬರೆದ ನೂರಾರು ಪತ್ರಗಳ ರಾಶಿಯನ್ನು ನನ್ನ ಮುಂದೆ ಸುರಿದುಬಿಟ್ಟರು. ಪ್ರತಿವಾದಿ ಹೇಳಿದಂತೆ ಹೆಂಡತಿ ಮಗಳು ಇಲ್ಲ. ಅವರು ಕಾಲ್ಪನಿಕ ವ್ಯಕ್ತಿಗಳು. ಇತ್ತೀಚೆಗೆ ಸೂರ್ಯ, ಅನಿತಾ (ಹೆಸರು ಬದಲಿಸಲಾಗಿದೆ) ಅನ್ನುವಳ ಜೊತೆ ಮತ್ತೊಂದು ಮದುವೆ ಮಾಡಿಕೊಂಡು ಬಾಳುತ್ತಿರುವನೆಂದು ಸಮಗ್ರ ಪತ್ತೇದಾರಿ ವರದಿ ಒಪ್ಪಿಸಿದನು.
ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗಿ ಅವು ವಾದಿ ಪ್ರತಿವಾದಿಯ ಹೆಂಡತಿ ಅನ್ನುವುದನ್ನು ಹೇಳುತ್ತಿದ್ದವು. ಶಶಿ ಜೊತೆ ಆಗಿದೆ ಎಂದು ಸಾಧಿಸಲು ಹಾಜರುಪಡಿಸಿದ ಮದುವೆ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‌ನಲ್ಲಿ ಸಾಂಪ್ರದಾಯಿಕ ವಿವಾಹವನ್ನು ರಿಜಿಸ್ಟ್ರೇಷನ್ ಮಾಡಿದ್ದು ಕಂಡುಬಂದಿತು, ಗಂಡ ಹೆಂಡತಿಯ ಪಾಲಕರೆಂದು ಗೆಳೆಯನ ಸಹಿ ಇತ್ತು. ಸಾಕ್ಷಿದಾರ ಪುರೋಹಿತ ಇವರ ಸಮಾಜದಲ್ಲಿ ಮದುವೆ ಮಾಡಿಸುವುದಿಲ್ಲ. ನಡೆಯದ ಕೃತಕ ಮದುವೆಯನ್ನು ನೋಂದಣಿ ಮಾಡಿಸಿದ್ದರು. ಮ್ಯಾರೇಜ್ ರಿಜಿಸ್ಟ್ರೇಷನ್‌ಗಿಂತ ಒಂದು ವರ್ಷ ಮುಂಚೆ ಸರ್ವಿಸ್ ರಿಜಿಸ್ಟರ್‌ನಲ್ಲಿ ಶಶಿ ಹೆಂಡತಿಯೆಂದು ಹೆಸರು ದಾಖಲಿಸಿದ್ದರು, ಅದು ಹೇಗೆ ಸಾಧ್ಯ? ಮಗಳು ಇದ್ದ ಬಗ್ಗೆ ಯಾವುದೇ ದಾಖಲಾತಿ ಇಲ್ಲ.
ಪ್ರತಿವಾದಿ, ಅನಿತಾ ಅನ್ನುವಳ ಜೊತೆ ಎರಡನೆ ಲಗ್ನವಾದ ಬಗ್ಗೆ ವಾದಿ ಕ್ರಿಮಿನಲ್ ಕೇಸ್ ಕೋರ್ಟ್ನಲ್ಲಿ ದಾಖಲಿಸಿದಳು. ಈ ದಾವೆ ವಿಚಾರಣೆ ವೇಳೆಯಲ್ಲಿ ಪ್ರತಿವಾದಿ ಮತ್ತು ಸಂಬಂಧಿಕರು, ವಾದಿಯ ತವರುಮನೆಗೆ ಬಂದು ಅಶ್ಲೀಲವಾಗಿ ಬೈದು ಹಲ್ಲೆ ಮಾಡಿ, ದಾವೆ ಹಿಂದಕ್ಕೆ ಪಡೆಯಲು ಧಮಕಿ ಹಾಕಿದರು. ವಾದಿ ಕ್ರಿಮಿನಲ್ ಕೇಸ್ ದಾಖಲಿಸಿದಳು. ದಾಖಲೆಗಳ ಗುಡ್ಡವೇ ಎದ್ದು ನಿಂತಿತು.
ನ್ಯಾಯಾಧೀಶರು ವಾದಿ ಪ್ರತಿವಾದಿಗೆ ಸಂಧಾನ ಮುಖಾಂತರ ವ್ಯಾಜ್ಯ ರಾಜಿಗೆ ಸೂಚಿಸಿದರು. ಪ್ರತಿವಾದಿ ನಿರಾಕರಿಸಿ ವಾದಿ ತನ್ನ ಹೆಂಡತಿ ಅಲ್ಲ ಎಂದು ವಾದಿಸಿದ. ಕೇಸಿನ ವಿಚಾರಣೆ ಪ್ರಾರಂಭವಾಯಿತು.
ವಾದಿಯ ಪರವಾಗಿ ಅವಳ ಮುಖ್ಯ ವಿಚಾರಣಾ ಪ್ರಮಾಣ ಪತ್ರ ಸಲ್ಲಿಸಿ ವಾದಿಯ ಲಗ್ನ ಪ್ರತಿವಾದಿ ಜೊತೆ ಯಾವಾಗ, ಹೇಗೆ, ಎಲ್ಲಿ, ಯಾವ ಸಂಪ್ರದಾಯ, ಯಾರು ಪೌರೋಹಿತ್ಯ ವಹಿಸಿದ್ದರು ಅನ್ನುವ ಸಂಗತಿಗಳನ್ನು ವಿವರವಾಗಿ ಹೇಳಿಸಿ ನೂರಾರು ದಾಖಲೆಗಳನ್ನು ಗುರುತಿಸಲಾಯಿತು. ವಾದಿಯ ಪರವಾಗಿ ಮದುವೆಯ ಕಾರ್ಯಕ್ರಮದಲ್ಲಿ ಭಾಗಿಯಾದವರು, ಸಾಂಪ್ರದಾಯಕವಾಗಿ ನೆರವೇರಿಸಿದ ಸ್ವಾಮೀಜಿ, ಫೋಟೋಗ್ರಾಫರ್ ಎಲ್ಲರನ್ನು ಸಾಕ್ಷಿ ಪರೀಕ್ಷೆ ಮಾಡಿಸಿದೆ. ಎಲ್ಲರೂ ಪ್ರತಿವಾದಿಯ ಪರ ವಕೀಲರ ಪಾಟಿ ಸವಾಲಿನಲ್ಲಿ, ವಾದಿ ಕೇಸಿನ ಪೂರಕವಾಗಿ ಸಾಕ್ಷೀಕರಿಸಿದರು.
ಸೂರ್ಯ, ಮೊದಲಿಗೆ ಮುಖ್ಯ ವಿಚಾರಣೆ ಪ್ರಮಾಣಪತ್ರದ ಮೂಲಕ ತಮ್ಮ ಹೇಳಿಕೆ ಸಲ್ಲಿಸಿದರು. ಅವರನ್ನು ಕ್ರಾಸ್ ಎಕ್ಸಾಮಿನೇಷನ್ ಮಾಡಿದೆ. ತನ್ನ ಸಂಪೂರ್ಣ ಪರಿಚಯ, ವಿಶೇಷತೆ, ಆಸಕ್ತಿ, ಸಿದ್ಧಾಂತಗಳನ್ನು, ಪತ್ರ ಬರೆಯುವ ಶೈಲಿ ಎಲ್ಲ ಒಪ್ಪಿಕೊಂಡರು. ವಾದಿ ರಮ್ಯಾ ಜೊತೆ ಮದುವೆಯ ಫೋಟೋ, ಪತ್ರ ಎಲ್ಲವನ್ನು ಎದುರಿಟ್ಟು, ಪತ್ರದಲ್ಲಿಯ ಕೈ ಬರಹ ಮುಂದಿಟ್ಟಾಗ ಗಲಿಬಿಲಿಗೊಂಡು ತಡಬಡಾಯಿಸಿದರು. ತನಗೆ ಶಶಿ ಅನ್ನುವ ಹೆಂಡತಿ ಇರುವಳೆಂದು ತೋರಿಸುವ, ಆಗದ ಮದುವೆಯ ಮ್ಯಾರೇಜ್ ಸರ್ಟಿಫಿಕೇಟ್ ಸತ್ಯಾಸತ್ಯತೆ ಒರೆಗೆ ಹಚ್ಚಿದಾಗ ಏನೂ ತೋಚದೆ ಗರ ಬಡಿದ ಹಾಗೆ ನಿಂತರು. ಸುಳ್ಳಿನ ಪರದೆ ಸರಿದು ಹೋಗಿ, ಸುಳ್ಳುಗಳ ಗೊಂಚಲು ಹೊರಬಿದ್ದಿತು.
ನ್ಯಾಯಾಧೀಶರು ಉಭಯ ವಕೀಲರ ವಾದವನ್ನು ಆಲಿಸಿದರು. ವಾದಿ ತನ್ನ ಮದುವೆಯಾಗಿದ್ದನ್ನು ಋಜುವಾತು ಪಡಿಸಿರುತ್ತಾಳೆ. ಅವಳಿಗೆ ಜೀವನಾಂಶದ ಅವಶ್ಯಕತೆ ಇದೆ. ವಾದಿ ತನ್ನ ಹೆಂಡತಿ ಅಲ್ಲವೆಂದು ನಿರಾಕರಿಸಿ, ಹೆಂಡತಿ ಮಗಳು ಇರುವುದಾಗಿ ವಾದಿಸಿ, ಆಗದ ಮದುವೆಯ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನಂಬಲು ಅರ್ಹವಲ್ಲ, ಪ್ರತಿವಾದಿ ಹೆಂಡತಿ ಮಗಳ ಜೊತೆ ವಾಸ ಇರುವನೆಂದು ವಾದಿಸಿದ್ದು, ಅವಳನ್ನು ನಿರ್ಭಯವಾಗಿ ಸಾಕ್ಷಿ ಹೇಳಿಸಬಹುದಿತ್ತೆಂದು ಅಭಿಪ್ರಾಯಪಟ್ಟು, ಪ್ರತಿವಾದಿ, ವಾದಿಗೆ ಪ್ರತಿ ತಿಂಗಳು ಇಂತಿಷ್ಟು ಹಣವೆಂದು ನಿರ್ಧರಿಸಿ ಜೀವನಾಂಶ ಪ್ರತಿ ತಿಂಗಳು ಕೊಡಲು ನಿರ್ದೇಶಿಸಿ ಜಡ್ಜ್ಮೆಂಟ್ ಡಿಕ್ರೀ ಆದೇಶ ಮಾಡಿದರು.
ಈ ವೃತ್ತಿಯಲ್ಲಿ, ನಾವು ಅಭ್ಯಸಿಸಿದ ವಿಜ್ಞಾನ, ಮನಃಶಾಸ್ತ್ರ, ಕಲೆ, ಸಾಹಿತ್ಯ, ಸಂಸ್ಕೃತಿ, ಧರ್ಮ, ಸಂಪ್ರದಾಯಗಳು ಒಂದಲ್ಲ ಒಂದು ಪ್ರಕರಣದಲ್ಲಿ ಸುಸಂಬದ್ಧವಾಗುತ್ತವೆ. ಅದನ್ನು ತೆರೆದಿಡುವುದು ವೃತ್ತಿ ಕೌಶಲ್ಯ.