For the best experience, open
https://m.samyuktakarnataka.in
on your mobile browser.

ಡಿಮ್ಹಾನ್ಸ್ ನೂತನ ನಿರ್ದೇಶಕರಾಗಿ ಡಾ. ಅರುಣಕುಮಾರ ನೇಮಕ

09:39 PM Jan 29, 2024 IST | Samyukta Karnataka
ಡಿಮ್ಹಾನ್ಸ್ ನೂತನ ನಿರ್ದೇಶಕರಾಗಿ ಡಾ  ಅರುಣಕುಮಾರ ನೇಮಕ

ಹುಬ್ಬಳ್ಳಿ: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ಡಿಮ್ಹಾನ್ಸ್) ನೂತನ ನಿರ್ದೇಶಕರನ್ನಾಗಿ ಇಲ್ಲಿನ ಕಿಮ್ಸ್‌ನ ಅಧೀಕ್ಷಕರಾದ ಡಾ.ಅರುಣಕುಮಾರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತುತ ಹುಬ್ಬಳ್ಳಿಯವರೇ ಆದರ ಡಾ. ಮಹೇಶ ದೇಸಾಯಿ ಅವರು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಸರ್ಕಾರ ಡಾ.ಅರುಣಕುಮಾರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಡಾ. ಅರುಣಕುಮಾರ ಅವರು ಜ. ೩೧ರಂದು ಬುಧವಾರ ಅಧಿಕಾರವಹಿಸಿಕೊಳ್ಳಲಿದ್ದಾರೆ.
ಡಾ.ಅರುಣಕುಮಾರ ಅವರು ಮನೋರೋಗ ತಜ್ಞರಾಗಿ ಬಳಿಕ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಶೇಷವಾಗಿ ಕೋವಿಡ್ ಸನ್ನಿವೇಶದಲ್ಲಿ ಹಿಂದಿನ ನಿರ್ದೇಶಕ ಡಾ. ರಾಮಲಿಂಗಪ್ಪ ಅಂತರತಾನಿ ಅವರೊಂದಿಗೆ ಸಾಥಿಯಾಗಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಲಭಿಸುವಂತೆ ಮಾಡಿದ್ದರು. ರೋಗಿಗಳ ಬಗೆಗಿನ ಇವರ ಅಪರಿಮಿತ ಕಾಳಜಿ ಎಷ್ಟು ಎಂಬುದಕ್ಕೆ ಕೋವಿಡ್ ಸನ್ನಿವೇಶದಲ್ಲಿ ಮಾಡಿದ ಕಾರ್ಯಗಳು ಕಿಮ್ಸ್‌ಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿತು. ಸ್ವತಃ ಮೂರು ಬಾರಿ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಡಾ.ಅರುಣಕುಮಾರ ಅವರು ಎದೆಗುಂದದೇ ಆಸ್ಪತ್ರೆಯ ಇತರ ವೈದ್ಯರು, ಸಿಬ್ಬಂದಿಯೊಂದಿಗೆ ಹಗಲಿರುಳು ಶ್ರಮಿಸಿದ್ದರು.
ಈಚೆಗೆ ಕಿಮ್ಸ್ ನಿರ್ದೇಶಕ ಸ್ಥಾನಕ್ಕೆ ಡಾ.ಅರುಣಕುಮಾರ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಈಗ ರಾಜ್ಯ ಸರ್ಕಾರವು ಡಿಮ್ಹಾನ್ಸ್ ನಿರ್ದೇಶಕರನ್ನಾಗಿ ನೇಮಕ ಮಾಡುವ ಮೂಲಕ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಟ್ಟಿದೆ.

ನಿಮ್ಹಾನ್ಸ್ ಸರಿಸಮ ಡಿಮ್ಹಾನ್ಸ್ ರೂಪಿಸಲು ಪ್ರಯತ್ನ
ರಾಜ್ಯ ಸರ್ಕಾರ ಡಿಮ್ಹಾನ್ ನಿರ್ದೇಶಕರನ್ನಾಗಿ ನೇಮಕ ಮಾಡುವ ಮೂಲಕ ಅವಕಾಶ ಮಾಡಿಕೊಟ್ಟಿದ್ದು, ಕೃತಜ್ಞತೆ ಸಲ್ಲಿಸುತ್ತೇನೆ. ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವ ಪ್ರಯತ್ನ ಮಾಡುವೆ. ನಿಮ್ಹಾನ್ಸ್ ಮಾದರಿಯಲ್ಲಿ ಡಿಮ್ಹಾನ್ಸ್‌ನ್ನು ರೂಪಿಸುವ ಪ್ರಯತ್ನ ಮಾಡುತ್ತೇನೆ. ರೋಗಿಗಳಿಗೆ ಚಿಕಿತ್ಸೆ, ಸೌಕರ್ಯ, ಸಿಬ್ಬಂದಿ, ಆಹಾರ, ಸಮರ್ಪಕ ಚಿಕಿತ್ಸೆ, ಮೂಲಸೌಕರ್ಯ, ಆಪ್ತ ಸಮಾಲೋಚನೆ, ಆತ್ಮಹತ್ಯೆ ತಡೆಗೆ ಕ್ರಮಗಳು ಹೀಗೆ ಹತ್ತಾರು ಯೋಜನೆಗಳಿವೆ. ಅಧಿಕಾರವಹಿಸಿಕೊಂಡ ಬಳಿಕ ಹಂತ ಹಂತವಾಗಿ ಕ್ರಮವಹಿಸಲಾಗುವುದು ಎಂದು ಡಾ. ಅರುಣಕುಮಾರ `ಸಂಯುಕ್ತ ಕರ್ನಾಟ'ಕ್ಕೆ ತಿಳಿಸಿದರು.