ಡಿ.ಆರ್. ಪಾಟೀಲರಿಗೆ ದತ್ತಿನಿಧಿ ಪ್ರಶಸ್ತಿ
ಗದಗ: ಮಾಜಿ ಶಾಸಕ, ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿಗಳಾದ ಡಿ.ಆರ್. ಪಾಟೀಲ ಅವರಿಗೆ ಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೋಮಾರಿಗೌಡ ಹಾರೋಕೊಪ್ಪ ದತ್ತಿನಿಧಿ ಪ್ರಶಸ್ತಿ ಲಭಿಸಿದ್ದು ಇಂದು (ಮಾ. ೩) ಮಧ್ಯಾಹ್ನ ೧೨ಕ್ಕೆ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಮಂದಿರದಲ್ಲಿ ಪ್ರದಾನ ಸಮಾರಂಭ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಾರ್ಯಕ್ರಮ ನಡೆಯಲಿದ್ದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶಕುಮಾರ ಪ್ರಶಸ್ತಿ ಪ್ರದಾನ ಮಾಡುವರು. ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ, ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಕರ್ನಾಟಕ ಪಂಚಾಯತ್ ರಾಜ್ ಪರಿಷತ್‌ನ ಕೋಶಾಧ್ಯಕ್ಷ ಹಾಗೂ ದತ್ತಿ ದಾನಿ ಡಾ. ಚಿಕ್ಕಕೋಮಾರಿಗೌಡ ಉಪಸ್ಥಿತರಿರುವರು ಎಂದು ಕಸಾಪ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗಶೆಟ್ಟಿ, ಡಾ. ಪದ್ಮಿನಿ ನಾಗರಾಜ, ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲಪಾಂಡು ತಿಳಿಸಿದ್ದಾರೆ.