ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಡಿ.೨೩, ೨೪ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ೨೪ನೇ ಮಹಾ ಅಧಿವೇಶನ

06:08 PM Oct 06, 2023 IST | Samyukta Karnataka

ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ೨೪ನೇ ಮಹಾ ಅಧಿವೇಶನವು ಮುಂಬರುವ ಡಿಸೆಂಬರ್ ೨೩ ಮತ್ತು ೨೪ರಂದು ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮಹಾಸಭಾದ ಕಾರ್ಯಾಧ್ಯಕ್ಷ, ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಎಂಬಿಎ ಕಾಲೇಜು ಆವರಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈಗ ನಡೆಯಬೇಕಿರುವ ೨೪ನೇ ಮಹಾ ಅಧಿವೇಶನ ಕಳೆದ ವರ್ಷವೇ ನಡೆಯಬೇಕಿತ್ತು. ಆದರೆ, ಕೋವಿಡ್ ಮತ್ತು ಸಾರ್ವತ್ರಿಕ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ನಡೆಯಲಿಲ್ಲ. ಈಗ ಡಿಸೆಂಬರ್ ೨೩ ಮತ್ತು ೨೪ಕ್ಕೆ ಹಮ್ಮಿಕೊಳ್ಳಲು ಇಂದು ಶನಿವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಹಾಸಭಾದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು, ಪದಾಧಿಕಾರಿಗಳು, ಮುಖಂಡರೆಲ್ಲರೂ ಸೇರಿ ಚರ್ಚೆ ನಡೆಸಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ೫ ವರ್ಷಕ್ಕೊಮ್ಮೆ ಮಹಾಸಭಾದ ಮಹಾ ಅಧಿವೇಶನ ನಡೆಸಲಾಗುತ್ತದೆ. ಪ್ರಪಂಚಾದಾದ್ಯAತ ಇರುವ ಎಲ್ಲಾ ವೀರಶೈವ ಲಿಂಗಾಯತ ಸಮಾಜದವರು ಒಂದು ಕಡೆ ಸೇರಿಸಿ ಒಂದುಗೂಡಿಸಿ, ಮಹಾಸ್ವಾಮೀಜಿಗಳಿಗೂ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೂ ಮಹಾ ಅಧಿವೇಶನಕ್ಕೆ ಆಹ್ವಾನ ಮಾಡಲಾಗುತ್ತದೆ. ಪ್ರತಿ ಬಾರಿಯೂ ೩ ದಿವಸ ಅಧಿವೇಶನ ನಡೆಯುತ್ತಿತ್ತು. ಈ ಬಾರಿ ಎರಡು ದಿನಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಹೇಳಿದರು.
ಮಹಾ ಅಧಿವೇಶನ ಯಶಸ್ವಿಗೊಳಿಸಲು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲು ತೀರ್ಮಾನಿಸಿದ್ದೇವೆ. ಮಹಿಳಾ ಗೋಷ್ಠಿ, ಯುವ ಅಧಿವೇಶನ, ರೈತರ ಅಧಿವೇಶನ, ಸೇರಿದಂತೆ ಇತರೆ ವಿಚಾರಗಳು ಅಧಿವೇಶನದಲ್ಲಿ ಚರ್ಚೆಗೊಳಪಡುತ್ತವೆ. ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಕೆಲವು ನಿರ್ಣಯಗಳನ್ನು ಅಂಗೀಕಾರ ಮಾಡಲು ನಿರ್ಧರಿಸಲಾಗುವುದು. ವೀರಶೈವ ಲಿಂಗಾಯತರು ಅಧಿವೇಶನದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರಕ್ಕೂ ಸಲ್ಲಿಸಲಾಗುವುದು. ಹಿಂದೆ ಆಗಿರುವ ನಿರ್ಣಯಗಳಲ್ಲಿ ಬಹುತೇಕ ಜಾರಿಗೆ ಬಂದಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ, ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಸೇರಿದಂತೆ ಸಮಾಜದ ಮುಖಂಡರು, ಪಾಲ್ಗೊಂಡಿದ್ದರು.

Next Article