ಡಿ. 31ರಿಂದ ಸರ್ಕಾರಿ ಬಸ್ ಬಂದ್
ಬೆಂಗಳೂರು: ಡಿಸೆಂಬರ್ ೩೧ರಿಂದ ರಾಜ್ಯದಲ್ಲಿ ಸರ್ಕಾರಿ ಬಸ್‌ಗಳ ಸೇವೆ ಬಂದ್ ಆಗುವ ಲಕ್ಷಣಗಳು ಕಂಡುಬಂದಿವೆ. ಅಂದಿನಿಂದ ಅನಿರ್ದಿಷ್ಟಾವಧಿ ಸಾರಿಗೆ ನೌಕರರು ಮುಷ್ಕರ ನಡೆಸಲು ಸಜ್ಜಾಗಿದ್ದಾರೆ.
ಸಾರಿಗೆ ನೌಕರರ ಸಂಘಟನೆಯ ಹಿರಿಯ ಮುಖಂಡ ಅನಂತ ಸುಬ್ಬರಾವ್ ಮುಷ್ಕರಕ್ಕೆ ಕರೆ ನೀಡಿದ್ದು, ಡಿಸೆಂಬರ್ ೯ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ `ಬೆಳಗಾವಿ ಚಲೋ' ಮಾಡಿ ಅಂದು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್ ನೀಡಲಾಗುತ್ತದೆ.
ಕೈಗಾರಿಕಾ ವಿವಾದ ಕಾಯಿದೆ ಪ್ರಕಾರ ಮುಷ್ಕರಕ್ಕೂ ಮುನ್ನ ೨೧ ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಈ ಹಿನ್ನೆಲೆಯಲ್ಲಿ ಡಿಸೆಂಬರ್ ೯ರಂದು ಸಿಎಂಗೆ ನೋಟಿಸ್ ಕೊಟ್ಟು ಡಿಸೆಂಬರ್ ೩೧ರಿಂದ ಸಾರಿಗೆ ನೌಕರರ ಮುಷ್ಕರ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದ ಆರು ಸಾರಿಗೆ ನೌಕರರ ಸಂಘಟನೆಗಳ ಒಕ್ಕೂಟ ಸೇರಿ ಜಂಟಿ ಕ್ರಿಯಾ ಸಮಿತಿ ಮಾಡಿಕೊಂಡಿದ್ದು, ಆ ಆರು ಸಂಘಟನೆಗಳೂ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ತಮ್ಮ ಮನವಿಗೆ ಸ್ಪಂದಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಡಾಫೆ ಮಾಡಿದರೆ ಇಡೀ ರಾಜ್ಯದಲ್ಲಿ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳ್ಳಲಿವೆ. ಈ ಹಿಂದೆಯೂ ಮೂರು ದಿನ ಮುಷ್ಕರ ಮಾಡಿದ ಮೇಲೆ ಸಿದ್ದರಾಮಯ್ಯ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದ್ದರು. ಈ ಬಾರಿ ಮುಷ್ಕರಕ್ಕೂ ಮುನ್ನವೇ ನಮ್ಮ ಬೇಡಿಕೆಗಳು ಈಡೇರಬೇಕು ಎಂದು ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ಹೇಳಿದ್ದಾರೆ.