ಡೋಲಾಯಮಾನ ಸ್ಥಿತಿಗೆ ಕಾಂಗ್ರೆಸ್
ಲಕ್ಷ್ಮೇಶ್ವರ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಡೋಲಾಯಮಾನ ಸ್ಥಿತಿಯಲ್ಲಿದ್ದು, ದಿನದಿಂದ ದಿನಕ್ಕೆ ಕಾಂಗ್ರೆಸ್ ಪಕ್ಷ ಶೋಚನೀಯ ಪರಿಸ್ಥಿಯಲ್ಲಿ ಒದ್ದಾಡುತ್ತಿದೆ, ಅದಕ್ಕೆ ಸೂಕ್ತ ನಾಯಕತ್ವದ ಕೊರತೆ ಇದೆ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯನವರು ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಂಡಿದ್ದರೆ, ಅವರನ್ನು ಕೆಳಗಿಳಿಸಲು ಅವರ ಪಕ್ಷದವರೆ ಸನ್ನದ್ಧರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ ಹೇಳಿದರು.
ಅವರು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕದಲ್ಲಿ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಇವೆಲ್ಲವೂಗಳು ಆದರೂ ಸಹ ಸಿದ್ದರಾಮಯ್ಯನವರು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಹಗರಣಗಳ ಬಗ್ಗೆ ಲೋಕಾಯುಕ್ತ, ಇಡಿ ತನಿಖೆ ನಡೆಯುತ್ತಿದೆ, ಆದರೆ ಲೋಕಾಯುಕ್ತ ಸರಕಾರದ ಅಧೀನದಲ್ಲಿರುವುದರಿಂದ ಸಿಎಂ ಅವರು ಅಧಿಕಾರದಲ್ಲಿದ್ದರೆ ಸರಿಯಾದ ತನಿಖೆ ಆಗುವುದಿಲ್ಲ, ಅದಕ್ಕಾಗಿ ಅವರು ರಾಜೀನಾಮ ನೀಡಿ ತನಿಖೆ ಎದುರಿಸಿ ನಿರಪರಾಧಿ ಎಂದು ಸಾಭೀತಾದ ಮೇಲೆ ಮತ್ತೆ ಅವರೇ ಮುಖ್ಯಮಂತ್ರಿಗಳಾಗಲಿ ಎಂದ ಅವರು ಹಗರಣಗಳ ಸರಮಾಲೆ ಹೊರಬೀಳುತ್ತಲೆ ಬಿಜೆಪಿ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್‌ನವರು ಸಿದ್ದರಾಮಯ್ಯನವರಿಗೆ ಬೆಂಬಲ ಸೂಚಿಸುವುದಾಗಿ ಹೇಳಿಕೆ ನೀಡುತ್ತಾ ಒಳಗೊಳಗೆ ಮುಖ್ಯಮಂತ್ರಿಯಾಗಲು ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.