For the best experience, open
https://m.samyuktakarnataka.in
on your mobile browser.

ಡೋಲೋತ್ಸವದಲ್ಲಿ ಸಂಭ್ರಮಿಸಿದ ಕೃಷ್ಣ

05:13 PM Aug 26, 2024 IST | Samyukta Karnataka
ಡೋಲೋತ್ಸವದಲ್ಲಿ ಸಂಭ್ರಮಿಸಿದ ಕೃಷ್ಣ

ಉಡುಪಿ: ಪರ‍್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ‍್ಯಾಯದ ಮೊದಲ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸೋಮವಾರ ವೈಭವದಿಂದ ಆಚರಿಸಲಾಯಿತು. ಶ್ರೀಕೃಷ್ಣ ಮಠದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾರ್ವಜನಿಕರೂ ಬಾಲಕೃಷ್ಣನನ್ನು ತೂಗಿ ಸಂಭ್ರಮಿಸುವ ಡೋಲೋತ್ಸವ ಸಂಭ್ರಮದಿಂದ ನಡೆಯಿತು. ಪರ‍್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ‘ತೊಟ್ಟಿಲೊಳು ಕೊಳಲನೂದುವ ಕೃಷ್ಣ’ನ ಅಲಂಕಾರ ಮಾಡಿ ಅರ್ಚಿಸಿದರು. ಪರ‍್ಯಾಯ ಪುತ್ತಿಗೆ ಪೀಠಾಧಿಪತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನಡೆಸಿದರು.
ಜನ್ಮಾಷ್ಟಮಿ ಅಂಗವಾಗಿ ಶ್ರೀಕೃಷ್ಣ ಮಠವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಪಂಚಾಮೃತ ಅಭಿಷೇಕ ಸಹಿತ ವಿವಿಧ ಪೂಜೆ ನಡೆಸಲಾಗಿದ್ದು, ವಿಷ್ಣು ಸಹಸ್ರನಾಮಪೂರ್ವಕ ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ನಡೆಸಲಾಯಿತು. ಮಧ್ವಮಂಟಪ, ಕನಕ ಮಂಟಪಗಳಲ್ಲಿ ಭಜನೆ, ಸಂಕೀರ್ತನೆ ಏರ್ಪಾಡಾಗಿದ್ದರೆ, ರಾಜಾಂಗಣದಲ್ಲಿ ಕೃಷ್ಣವೇಷ ಸ್ಪರ್ಧೆ ನಡೆಯಿತು. ಭಕ್ತರು ಸರದಿಯ ಸಾಲಿನಲ್ಲಿ ಆಗಮಿಸಿ ಕೃಷ್ಣ ದರ್ಶನ ಪಡೆದರು. ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಮಳೆ ಬಿಡುವು ನೀಡಿದ ಪರಿಣಾಮ ಭಕ್ತರಿಗೆ ಅನುಕೂಲವಾಗಿತ್ತು.
ಕೃಷ್ಣಾಷ್ಟಮಿ ಹಿನ್ನೆಲೆಯಲ್ಲಿ ಉಪವಾಸದ ಕಾರಣ ಮಠದಲ್ಲಿ ಅನ್ನಸಂತರ್ಪಣೆ ಇರಲಿಲ್ಲ. ರಾತ್ರಿ ಪೂಜೆಗೆ ಸಾಂಪ್ರದಾಯಿಕ ಉಂಡೆ ತಯಾರಿಗೆ ಪುತ್ತಿಗೆ ಉಭಯ ಶ್ರೀಪಾದರು ಚಾಲನೆ ನೀಡಿದರು. ೩ ಲಕ್ಷ ಉಂಡೆ ಹಾಗೂ ೧.೨೫ ಲಕ್ಷ ಚಕ್ಕುಲಿ ಸಿದ್ಧಗೊಂಡಿದ್ದು ರಾತ್ರಿ ಕೃಷ್ಣನಿಗೆ ಸಮರ್ಪಣೆ ಬಳಿಕ ಮಂಗಳವಾರ ಭಕ್ತರಿಗೆ ಹಾಗೂ ೬೨ ಶಾಲೆಗಳ ೧೦ ಸಾವಿರ ಮಕ್ಕಳಿಗೆ ಪ್ರಸಾದ ರೂಪವಾಗಿ ಹಂಚಲಾಗುವುದು.
ನಾಳೆ ವಿಟ್ಲ ಪಿಂಡಿ: ಶ್ರೀಕೃಷ್ಣಲೀಲೋತ್ಸವನ್ನು ಸ್ಮರಿಸುವ ವಿಟ್ಲಪಿಂಡಿ ಮಹೋತ್ಸವ ಮಂಗಳವಾರ ನಡೆಯಲಿದೆ. ಶ್ರೀಕೃಷ್ಣನ ಮೃಣ್ಮಯ ಮೂರ್ತಿಯ ಚಿನ್ನದ ರಥೋತ್ಸವ ನಡೆಯಲಿದೆ. ಗೋವಳರು ಮೊಸರು ಕುಡಿಕೆಗಳನ್ನು ಒಡೆಯಲಿದ್ದಾರೆ. ಮೊಸರು ಕುಡಿಕೆಗಳನ್ನಿಡಲು ರಥಬೀದಿಯ ಸುತ್ತಲೂ ಗುರ್ಜಿಗಳನ್ನು ನಿರ್ಮಿಸಲಾಗಿದೆ. ರಥೋತ್ಸವದಲ್ಲಿ ಹುಲಿವೇಷ, ವಿವಿಧ ಜಾನಪದ ವೇಷಗಳು ಭಾಗವಹಿಸಲಿವೆ.

Tags :