ತನಗಾಗಿ ಬಯಸುವುದು ಜೀವಗುಣ ಎಲ್ಲರಿಗಾಗಿ ಬಯಸುವುದು ದೇವಗುಣ
ಗದಗ(ನರೇಗಲ್): ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶ ಚಿಂತನೆಗಳ ಅವಶ್ಯಕತೆಯಿದೆ. ಧರ್ಮ ಸಂಸ್ಕೃತಿ ಮತ್ತು ಆಧ್ಯಾತ್ಮ ಚಿಂತನೆಗಳ ಅರಿವು ಅಗತ್ಯ. ತನಗಾಗಿ ಬಯಸುವುದು ಮನುಷ್ಯನ ಗುಣವಾದರೆ ಎಲ್ಲರಿಗಾಗಿ ಬಯಸುವುದು ದೇವಗುಣ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಭಾನುವಾರ ಜರುಗಿದ ಪುರಾಣ ಪ್ರವಚನ ಮಂಗಲ ಹಾಗೂ ಸದ್ಧರ್ಮಧಾಮ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬಹು ಜನ್ಮದ ಪುಣ್ಯ ಫಲದಿಂದಾಗಿ ಮಾನವರಾಗಿ ಸಂಜನಿಸಿ ಬಂದಿದ್ದೇವೆ. ಅರಿವುಳ್ಳ ಜನ್ಮದಲ್ಲಿ ಬಂದ ಬಳಿಕ ಸ್ವಲ್ಪಾದರೂ ಶಿವಜ್ಞಾನ ಪ್ರಾಪ್ತಿಗಾಗಿ ಮತ್ತು ಗುರು ಕಾರುಣ್ಯಕ್ಕಾಗಿ ಶ್ರಮಿಸಬೇಕಾಗುತ್ತದೆ. ಅಧಿಕಾರದ ಅಂತಸ್ತು ಮೇಲೇರಿದಂತೆ ನೀತಿಯ ಅಂತಸ್ತು ಮೇಲೇರಬೇಕು. ಮನುಷ್ಯನ ಬುದ್ಧಿ ಶಕ್ತಿ ಬೆಳೆದಷ್ಟು ಭಾವನೆಗಳು ಇಂದು ಬೆಳೆಯುತ್ತಿಲ್ಲ. ಮಾತು ಮನ ಕೃತಿ ಒಂದಾದಾಗ ಬದುಕು ಸದೃಢಗೊಳ್ಳುತ್ತದೆ. ಬೆಳೆಯುವ ಯುವ ಜನಾಂಗದಲ್ಲಿ ಸಂಸ್ಕಾರ ಸದ್ವಿಚಾರಗಳನ್ನು ಬೆಳೆಸುವ ಕೆಲಸವಾಗಬೇಕಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಜೀವನ ಶ್ರೇಯಸ್ಸಿಗೆ ಅವಶ್ಯಕವಾಗಿವೆ. ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಸಮಾಜಮುಖಿಯಾಗಿ ಧರ್ಮಮುಖಿಯಾಗಿ ಸದಾ ಶ್ರಮಿಸುತ್ತಿರುವ ಕಾರಣ ಶ್ರೀಮಠದ ಅಭಿವೃದ್ಧಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿ ಶ್ರೀ ಪೀಠದಿಂದ ರೇಶ್ಮೆ ಮಡಿ ಫಲ ಪುಷ್ಪವಿತ್ತು ಶುಭ ಹಾರೈಸಿದರು.
ನೇತೃತ್ವ ವಹಿಸಿದ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ. ಜಾತಿ ಧರ್ಮಗಳ ಸಂಘರ್ಷದಲ್ಲಿ ಆದರ್ಶ ಮೌಲ್ಯಗಳು ನಾಶಗೊಳ್ಳಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಆದರ್ಶ ಮೌಲ್ಯಗಳನ್ನು ಉಳಿಸಿ ಬೆಳೆಸುವ ಸಂಕಲ್ಪ ಎಲ್ಲರದು ಆಗಲೆಂದರು. ಸಮ್ಮುಖ ವಹಿಸಿದ ಅಬ್ಬಿಗೇರಿ-ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಮಾತನಾಡಿ ಸಂಪತ್ತು ಬೆಳೆದಂತೆ ಸಭ್ಯತೆ ಸಂಸ್ಕೃತಿ ಮರೆಯಬಾರದು. ದೇವರು ಧರ್ಮ ಗುರುವನ್ನು ಆಶ್ರಯಿಸಿ ಆದರ್ಶ ಬದುಕು ಕಟ್ಟಿಕೊಳ್ಳಬೇಕೆಂದರು. ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಸಕ ಜಿ.ಎಸ್.ಪಾಟೀಲರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸನ್ಮಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಜಿ.ಎಸ್.ಪಾಟೀಲರು ಇಂದು ನನ್ನ ಜೀವನದ ಅಮೂಲ್ಯ ದಿನ. ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮಲ್ಲಿಕಾರ್ಜುನ ಶ್ರೀಗಳು ಆಶೀರ್ವಾದ ಅವಕಾಶ ಕಲ್ಪಿಸಿಕೊಟ್ಟಿದ್ದು ನನ್ನ ಸೌಭಾಗ್ಯವೆಂದರು. ಇಳಕಲ್ಲ ಹಿರೇಮಠದ ಅನ್ನದಾನ ಶಾಸ್ತ್ರಿಗಳು ಪುರಾಣ ಮಂಗಲಗೊಳಿಸಿದರು. ಕೆ.ಬಿ.ಧನ್ನೂರ, ಎಂ.ಎಸ್.ಧಡೇಸೂರಮಠ. ಬಸವರಾಜ ಕೊಳಕಣ್ಣವರ, ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಸ್ವೀಕರಿಸಿದರು. ಹಿರೇಮಠದ ಸದ್ಭಕ್ತ ಮಂಡಳಿ, ಜಾತ್ರಾ ಮಹೋತ್ಸವ ಸಮಿತಿ, ಅನ್ನಪೂರ್ಣೇಶ್ವರಿ ಮಹಿಳಾ ಸಂಘ, ಹಿರೇಮಠದ ಶಿಕ್ಷಣ ಸಂಸ್ಥೆಯವರು ಕಾರ್ಯಕ್ರಮವನ್ನು ಸಂಘಟಿಸಿದ್ದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.