ತನ್ನ ಬಂದೂಕಿಗೆ ತಾನೆ ಬಲಿಯಾದ ವ್ಯಕ್ತಿ
ಕುಮಟಾ: ಕೋಳಿಗೂಡಿಗೆ ಬಂದ ಹಾವು ಹೊಡೆಯಲು ಬಂದೂಕು ಬಳಸಿದ ಪ್ರಥಮ ಸುಬ್ಬು ನಾಯ್ಕ(೩೨) ಎಂಬಾತ ಅದೇ ಬಂದೂಕಿನ ಗುಂಡಿಗೆ ಬಲಿಯಾಗಿದ್ದಾನೆ. ಸಾವನಪ್ಪಿದ ಪ್ರಥಮ್ ಸೇರಿ ಸಾಕ್ಷಿನಾಶ ಮಾಡಿದ ಆರೋಪದ ಅಡಿ ಇಬ್ಬರ ವಿರುದ್ಧ ಇಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಕತಗಾಲಿನ ಮಡಗೊಳ್ಳಿಯಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದ ಪ್ರಥಮ ಸುಬ್ಬು ನಾಯ್ಕ ಒಂದಷ್ಟು ಕೋಳಿಗಳನ್ನು ಸಾಕಿಕೊಂಡಿದ್ದ. ಕೋಳಿ ಗೂಡಿಗೆ ಪದೇ ಪದೆ ಹೆಬ್ಬಾವು ಬರುತ್ತಿದ್ದ ಕಾರಣ ಅಕ್ರಮವಾಗಿ ನಾಡ ಬಂದೂಕು ತಯಾರಿಸಿಕೊಂಡಿದ್ದ. ಅದನ್ನು ಆತ ಮನೆಯಲ್ಲಿರಿಸಿಕೊಂಡಿದ್ದು, ಆ. ೩೧ರಂದು ನಸುಕಿನಲ್ಲಿ ಬಂದೂಕು ಹಿಡಿದು ಹೋದವ ಮನೆಗೆ ಮರಳಿಲ್ಲ.
ಬೆಳಗ್ಗೆ ಶವ ನೋಡಿದ ಆತನ ಅತ್ತಿಗೆ ರಂಜನಾ ಆನಂದ ಗೋಖಲೆ ಬಂದೂಕನ್ನು ತೋಟದಲ್ಲಿ ಎಸೆದಿದ್ದಾಳೆ. ನಂತರ ತಮ್ಮ ಪರಿಚಯಸ್ಥರಾದ ರಾಮ ಮಾಸ್ತ ದೇಶಭಂಡಾರಿ, ಉಲ್ಲಾಸ ದೇಶಭಂಡಾರಿ ಹಾಗೂ ಅರುಣ ದೇಶಭಂಡಾರಿ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಘಟನೆ ಬಗ್ಗೆ ವಿವರಿಸಿದ್ದಾಳೆ. ಬಂದುಕಿಗೆ ಬಳಸಿದ್ದ ಶೇಲ್‌ನ್ನು ಸಮೀಪದಲ್ಲಿದ್ದ ಹೊಳೆಗೆ ಎಸೆಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅದರಂತೆ ರಾಮ ದೇಶಭಂಡಾರಿ ಶೇಲ್‌ನ್ನು ಹೊಳೆಗೆ ಎಸೆದು ಸಾಕ್ಷಿ ನಾಶ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಈ ಎಲ್ಲಾ ಘಟನಾವಳಿಗಳ ಬಗ್ಗೆ ಪ್ರಥಮ ನಾಯ್ಕರ ಪತ್ನಿ ರೇಷ್ಮಾ ಪ್ರಥಮ ನಾಯ್ಕ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪಿಎಸ್‌ಐ ರವಿ ಗುಡ್ಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಕ್ಷಿ ನಾಶಪಡಿಸಿದ ಆರೋಪದ ಮೇಲೆ ಇಬ್ಬರನ್ನು (ರಂಜನಾ ಹಾಗೂ ರಾಮ ತಂದೆ ನಾಸ್ತಿ ದೇಶಭಂಡಾರಿ) ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.