ತನ್ನ ಸೋಲಿಸಿಕೊಳ್ಳುವ ನಡತೆಗಳು
ನನಗೆ ಅರ್ಥವಾಗದಿರುವ ವರ್ತನೆಯ ವಿಚಾರಗಳಲ್ಲಿ ಮೊಬೈಲ್ ಉಪಯೋಗಿಸುವವರ, ಅದರಿಂದ ಅವರಿಗೆ, ಅವರ ನಂಬಿದವರಿಗೆ ಮತ್ತು ಯಾವ ಪಾಪವನ್ನೂ ಮಾಡಿರದ, ಸಾಮಾನ್ಯ ನಾಗರಿಕರಿಗೆ, ಅಮಾಯಕರಿಗೆ ಆಗುವ ತೊಂದರೆಗಳು, ಉಪದ್ರವಗಳು. ರಸ್ತೆ ದಾಟುವಾಗ, ದ್ವಿಚಕ್ರ ವಾಹನ ಸವಾರರ, ಎಲ್ಲೆಂದರಲ್ಲಿ ಮೊಬೈಲ್ ಫೋನ್ ಉಪಯೋಗಿಸುವ ಅಭ್ಯಾಸವಿದೆಯಲ್ಲ, ಇದನ್ನು ಅರ್ಥ ಮಾಡಿಕೊಳ್ಳಲಾಗುವುದಿಲ್ಲ. ಇದನ್ನು ಗೀಳು ಅಂತಲೋ, ಚಟ ಅಂತ ಕರೆಯಬೇಕೋ ಅಥವಾ `ನನ್ನ ಬದುಕು ನನ್ನ ಹಕ್ಕು, ನೀವ್ಯಾರು ಕೇಳಲಿಕ್ಕೆ' ಎಂಬ ದುರಹಂಕಾರದ ನಡತೆಯೋ ಗೊತ್ತಾಗುತ್ತಿಲ್ಲ. ಆದರೆ ಹಾಗೆ ಮೊಬೈಲ್ ಉಪಯೋಗಿಸುವವರ ನೋಡಿದರೆ ನನಗೆ ಕಿರಿಕಿರಿ, ಕೋಪ ಮತ್ತು ಅಸಹ್ಯ ಉಂಟಾಗುವುದಂತೂ ನಿಜ.
ಮೊದಲು ಈ ವರ್ತನೆಯನ್ನು ವಿವರಿಸುವ, ನಂತರ ಅದರ ಪರಿಣಾಮಗಳ ಬಗ್ಗೆ ಯೋಚಿಸುವ.
ಕೆಲವರು, ಅದರಲ್ಲೂ ಜನಜಂಗುಳಿಯಿಂದ ಕಿಕ್ಕಿರಿದ ರಸ್ತೆಯಲ್ಲೂ, ಇವರು ತಮ್ಮ ಫೋನಿನಲ್ಲಿ ಮುಳುಗಿರುತ್ತಾರೆ. ರಸ್ತೆ ದಾಟುವಾಗಲೇ ಯಾವುದೋ ಅತ್ಯಂತ ಗಹನವಾದ ವಿಚಾರವನ್ನು ಫೋನಿನಲ್ಲಿ ಸಂಭಾಷಿಸುತ್ತಿರುತ್ತಾರೆ! ಅವರ ಗಮನ ರಸ್ತೆಯ ಮೇಲೆ ಇರುವುದಿಲ್ಲ, ಬದಲಾಗಿ ಮಾತಿನ ಮೇಲೆ ಇರುತ್ತದೆ. ಕೆಲವು ವರ್ಷಗಳ ಹಿಂದೆ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಫೋನಿನಲ್ಲಿ ಮಾತನಾಡುತ್ತಾ ರಸ್ತೆ ದಾಟುವಾಗ ಎದುರಿಗೆ ಬರುತ್ತಿದ್ದ ಕಾರು ಅವಳನ್ನು ಸ್ವಲ್ಪವೇ ತಾಗಿಸಿಕೊಂಡು ಹೋಗಿತ್ತು. ಏನೂ ಆಗಿಲ್ಲವೆಂದುಕೊಂಡು ಹೊರಟಿದ್ದ ಆ ಹುಡುಗಿ ನಂತರ ಕುಸಿದು ಸತ್ತಳು, ಆಂತರಿಕ ರಕ್ತಸ್ರಾವದಿಂದ. ಯಾವ ವಯಸ್ಸಿನವರೂ ಇದಕ್ಕೆ ಹೊರತಲ್ಲ. ಆದರೆ ದ್ವಿಚಕ್ರ ವಾಹನದ ಮೇಲೆ ಕುಳಿತಿರುವವರ ಪರಿಸ್ಥಿತಿಯಂತೂ ಹೇಳಿಕೊಳ್ಳಲಾಗದ್ದು. ದಾಟುವವರು ಸತ್ತರೆ ಸಾಯಲಿ, ಆದರೆ ವಾಹನ ಸವಾರರ ಕೈ ಕಾಲನ್ನು ಮುರಿಸುತ್ತಾರಲ್ಲ, ಅದು ನಿಜಕ್ಕೂ ವಿಷಾದಿಸುವ ವಿಚಾರ.
ಮೊನ್ನೆ ಬೆಂಗಳೂರಿನ ಕನಕಪುರ ರಸ್ತೆಯಿಂದ ಉತ್ತರಹಳ್ಳಿ ರಸ್ತೆಯ ಕಡೆಗೆ ಹೋಗುತ್ತಿದ್ದೆ. ನನ್ನ ಮುಂದೆ ಒಬ್ಬ ಬೈಕ್‌ನಲ್ಲಿ ಹೋಗುತ್ತಿದ್ದ. ಅವನ ಬೈಕ್‌ನಲ್ಲಿ ಮುಂದೆ ಒಬ್ಬ ಚಿಕ್ಕ ಹುಡುಗಿ ಕುಳಿತುಕೊಂಡಿದ್ದಳು, ನಾಲ್ಕರಿಂದ ಐದು ವರ್ಷ ವಯಸ್ಸಿನವಳು, ಯಾವುದೊ ಶಾಲೆಯ ಬ್ಯಾಗ್ ಇಟ್ಟುಕೊಂಡು, ಬಹುಶಃ ಆತನ ಮಗಳಿರಬೇಕು. ಅವನ ಹಿಂದೆ ಒಬ್ಬ ಹತ್ತು ವರ್ಷ ವಯಸ್ಸಿನ ಹುಡುಗ ಕುಳಿತಿದ್ದ. ಸವಾರನ ತಲೆಯ ಮೇಲೆ ಹೆಲ್ಮೆಟ್ ಇರಲಿಲ್ಲ, ತಲೆ ವಾರೆಯಾಗಿಸಿಕೊಂಡು ಭುಜದ ಮೇಲೆ ಇಟ್ಟುಕೊಂಡಿದ್ದ, ತಲೆ ಮತ್ತು ಭುಜದ ಮಧ್ಯೆ ಮೊಬೈಲ್ ಸಿಕ್ಕಿಸಿಕೊಂಡು, ಮೊಬೈಲ್‌ನಲ್ಲಿ ಯಾರೊಂದಿಗೋ ಜೋರಾಗಿ ಮಾತನಾಡುತ್ತಿದ್ದ. ಅವನ ಮಾತು ಕೇಳುತ್ತಿದ್ದರೆ ತುಂಬಾ ಕೋಪಗೊಂಡವನಂತೆ ಕಾಣುತ್ತಿತ್ತು.
ಅವನ ಧಾಷ್ಟ್ರ್ಯತನ ನೋಡಿ ನನಗೆ ಏನೂ ಹೇಳಲಾಗಲಿಲ್ಲ, ಅತಿರೇಕದ ರಿಸ್ಕ್ ಅದು, ಸರ್ಕಸ್‌ನಲ್ಲಿ ಮಾಡುವಂತಹದ್ದು. ಸರ್ಕಸ್‌ನಲ್ಲಿ ಮಾಡುವವರಿಗೆ ತಮ್ಮ ಮೇಲೆ ಪೂರ್ತಿ ಗಮನ ಮತ್ತು ಅಲ್ಲಿನ ಆಗುಹೋಗುಗಳ ಮೇಲೆ ನಿಯಂತ್ರಣ ಇರುತ್ತದೆ, ಜೊತೆಗೆ ಸಾಕಷ್ಟು ಸುರಕ್ಷಾ ಕ್ರಮಗಳನ್ನೂ ಮಾಡಿಕೊಂಡಿರುತ್ತಾರೆ. ಆದರೆ ಇಲ್ಲಿ, ಸಾರ್ವಜನಿಕ ರಸ್ತೆಯಲ್ಲಿ ಅದ್ಯಾವುದೂ ಇರುವುದಿಲ್ಲ. ಮೊದಲನೆಯದಾಗಿ ದೇಹ ಸಮತೋಲನದಲ್ಲಿರುವುದಿಲ್ಲ, ಸವಾರರ ಗಮನ ರಸ್ತೆಯ ಮೇಲಿರುವುದಕ್ಕಿಂತಲೂ ಮಾತಿನ ಮೇಲೆ ಇರುತ್ತದೆ. ಜೊತೆಗೆ ಅವರ ಕೋಪಗೊಂಡ ಅವಸ್ಥೆಯಲ್ಲಿ ಭಾವನೆಗಳು ಏರುಪೇರಾಗಿರುವುದರಿಂದ ತಾವು ಮಾಡುವ ಕೆಲಸದ ಮೇಲೆ ಗಮನ, ನಿಯಂತ್ರಣ ಅಸಾಧ್ಯವೆಂದೇ ಹೇಳಬಹುದು. ಈ ಬೈಕ್ ಸವಾರನಿಗೆ ಅದೆಲ್ಲದರ ಅರಿವಿದ್ದ ಹಾಗೆ ಕಾಣುವುದಿಲ್ಲ, ಯಾವುದೋ ವಶೀಕರಣಕ್ಕೆ ಒಳಗಾದವನಂತೆ ಮಾತನಾಡುತ್ತಾ ತನ್ನ ಮೇಲೆಯೇ ನಿಯಂತ್ರಣ ಕಳೆದುಕೊಂಡಿದ್ದ.
ಈ ತರಹದ ವರ್ತನೆಯ ಪರಿಣಾಮ ಏನಾದರೂ ಆಗಬಹುದು, ಅಪಘಾತ, ಸಾವು, ಬೀದಿಗೆ ಬರಬಹುದಾದ ಆತನ ಕುಟುಂಬ ವ್ಯವಸ್ಥೆ, ಹಾಗೆಯೆ ರಸ್ತೆಯ ಮೇಲೆ ಹೋಗುವವರಿಗೆ, ಅಮಾಯಕರಿಗೆ, ಅನಿರೀಕ್ಷಿತವಾಗಿ ಆಗಬಹುದಾದ ಅಪಘಾತ, ದುರಂತ; ಎಲ್ಲದರ ಮೂಲವೂ ಒಂದೇ, ಅವಶ್ಯಕತೆಯೇ ಇಲ್ಲದ ಮೊಬೈಲ್‌ನ ಉಪಯೋಗ.
ಇನ್ನೊಂದು ಮಗ್ಗುಲಿಗೆ ಬರೋಣ. ಮೊಬೈಲ್‌ನ ಉಪಯೋಗ ಅವಶ್ಯಕತೆಯದ್ದೇ ಅಂದುಕೊಳ್ಳೋಣ, ಆದರೆ ಇವರ್ಯಾರೂ ಅಗ್ನಿಶಾಮಕ ದಳದಲ್ಲಿ, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ, ಪೊಲೀಸ್ ವಿಭಾಗದಲ್ಲಿ ಅಥವಾ ವಿಪತ್ತು ನಿರ್ವಹಣಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವುದಿಲ್ಲ. ಈ ಕೆಲವು ವೃತ್ತಿಗಳಲ್ಲಿ ಒಂದೊಂದು ಕ್ಷಣವೂ ಅಮೂಲ್ಯವಾಗಿರುತ್ತದೆ, ಒಬ್ಬರ, ನೂರಾರು ಜನರ ಪ್ರಾಣ, ಅವರು ಮಾಡುವ ಕೆಲಸದ, ಪಾತ್ರದ ಮೇಲೆ ಇರುತ್ತದೆ; ಇತರ ಯಾವ ವೃತ್ತಿಯ ಪಾತ್ರವೂ, ಜವಾಬ್ದಾರಿಯೂ ಈ ಮಟ್ಟದಲ್ಲಿರುವುದಿಲ್ಲ, ತ್ವರಿತವಾಗಿ ಮಾತನಾಡುವ ಅವಶ್ಯಕತೆಯನ್ನು ಮುಂದೂಡಬಹುದು ಅಥವಾ ಒಂದು ನಿಮಿಷ ವಾಹನವನ್ನು ನಿಲ್ಲಿಸಿಕೊಂಡು, ನಿಂತು ಮಾತನಾಡಬಹುದು. ತಾಳಿದರೆ ಬಾಳಿ ಬದುಕು ಹಸನಾಗಿಸಿಕೊಳ್ಳಬಹುದು. ಇದಕ್ಕೆಲ್ಲ ಬೇಕಾಗಿರುವುದು ನಮ್ಮ ವರ್ತನೆಯ ಮೇಲೆ, ನಾವು ಮಾಡುವ, ನಮ್ಮ ಪಾತ್ರದ ಜವಾಬ್ದಾರಿ, ಇದನ್ನೇ ನಾಗರಿಕ ಪ್ರಜ್ಞೆ ಎನ್ನಬಹುದು. ಹಾಗಾಗಿ ನಾಗರಿಕ ಪ್ರಜ್ಞೆಯೆನ್ನುವುದು ಕೇವಲ ಭಾಷಣದ ಸೊಗಡಾಗದೆ, ಶಾಲಾ ಮಕ್ಕಳಿಗೆ ಬೋಧಿಸುವ ಮೌಲ್ಯಗಳ ಪಾಠವಾಗದೆ, ಈ ಸಮಯದಲ್ಲಿ ನಮ್ಮ ಬದುಕಿಸುವ ಕೌಶಲ್ಯವಾಗಿರುತ್ತದೆ.
ಮನೋವೈಜ್ಞಾನಿಕವಾಗಿ ನೋಡುವುದಾದರೆ ಈ ತರಹದ ಹೆಚ್ಚಿನ ವರ್ತನೆಗಳು ತನ್ನನ್ನೇ ಸೋಲಿಸಿಕೊಳ್ಳುವ ನಡತೆಗಳ ಸಾಲಿನಲ್ಲಿ ಬರುತ್ತವೆ. ನಮಗೆ ನಾವೇ, ನಮ್ಮ ನಂಬಿಕೆಗಳೇ ಶತ್ರುವಾಗಿ ಬಿಡುತ್ತವೆ. ಇದೆಲ್ಲದರ ಅರಿವಾಗುವಷ್ಟರ ಹೊತ್ತಿಗೆ ನಮ್ಮ ಬದುಕು, ಬಾಳಿ ಬದುಕಲಾಗದ ಹಂತಕ್ಕೆ ಹೋಗಿಬಿಟ್ಟಿರುತ್ತದೆ, ನಮ್ಮ ಆಯುಷ್ಯದ ಮುಕ್ಕಾಲು ಭಾಗ ಮುಗಿದಿರುತ್ತದೆ; ಕೆಲವೊಬ್ಬರಿಗೆ ಯಾವತ್ತೂ ಅರಿವಾಗುವುದಿಲ್ಲವೇನೋ!
ಅದಕ್ಕೆ ಏನೋ ನಮ್ಮ ಋಷಿ-ಮುನಿಗಳು ಹೇಳಿರುವುದು, ನಿನ್ನನ್ನು ನೀನು ಅರಿತಿಕೊ, ನಿನ್ನೊಳಗಿನ ಶತ್ರುವನ್ನು ಗೆದ್ದು ಬಿಡು ಸಾಕು, ಬೇರೆಯದೆಲ್ಲ ಗೌಣ, ನಗಣ್ಯ, ಯಾವ ಬೆಲೆಯೂ ಇಲ್ಲದ ತೃಣ ಸಮಾನ ಎಂದು. ಇದನ್ನೆಲ್ಲಾ ಅಧ್ಯಾತ್ಮ ಎಂದು ಕರೆದು, ಅದು ಕೆಲವೇ ಕೆಲವು ಜನರಿಗೆ ಅಗತ್ಯವಿರುವ ನಡತೆ ಎಂದೆಲ್ಲ ಅಂದುಕೊಂಡು ನಮ್ಮನ್ನೇ ನಾವು ಸೋಲಿಸಿಕೊಳ್ಳುವುದಕ್ಕೆ ಅಣಿಯಾಗಿಬಿಡುತ್ತೇವೆ. ಬಹುಶಃ ಬೇರಾವ ಪ್ರಾಣಿಗಳಲ್ಲೂ ಈ ರೀತಿಯ ವರ್ತನೆ ಕಂಡುಬರುವುದಿಲ್ಲ ಅಂತ ಕಾಣುತ್ತದೆ. ಇದನ್ನೆಲ್ಲಾ ಯೋಚಿಸುವಾಗ ನನಗೆ ಅನಿಸುವುದು, ನಿಜಕ್ಕೂ ನಾವು ಮುಂದುವರಿದ ಜನಾಂಗವಾ? ಪ್ರಾಣಿಗಳೂ ನಮ್ಮನ್ನು ನೋಡಿ ನಗುತ್ತವಾ? ನನಗೆ ಗೊತ್ತಿಲ್ಲ.