ತಮಿಳುನಾಡಿಗೆ 2.5 ಟಿಎಂಸಿ ಕಾವೇರಿ ನೀರು ಹರಿಸಲು ಸೂಚನೆ
ನವದೆಹಲಿ: ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ.
ಇತ್ತೀಚೆಗೆ ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ಕರ್ನಾಟಕದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸಮಿತಿಯು ತಮಿಳುನಾಡಿಗೆ ಸೂಚಿಸಿತ್ತು. ಆದರೆ, ಇದೀಗ ಮಂಗಳವಾರ ನಡೆದ ಸಭೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ 2.5 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ. ಫೆಬ್ರವರಿಯಿಂದ ಮೇವರೆಗೆ ಕರ್ನಾಟಕವು ಪ್ರತಿ ತಿಂಗಳು 2.50 ಟಿಎಂಸಿಯಂತೆ ಪರಿಸರ ಹರಿವನ್ನು ನಿರಂತರವಾಗಿ ಬಿಡುಗಡೆ ಮಾಡಬೇಕು ಎಂದು ಕಳೆದ ಫೆಬ್ರವರಿಯಲ್ಲಿಯೇ ತಮಿಳುನಾಡು ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ವಾದ ಮಂಡಿಸಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಕರ್ನಾಟಕವು ತಮಿಳುನಾಡಿಗೆ ನೀರು ಬಿಟ್ಟಿತ್ತು. ಆದರೆ, ಮೇ ಅಂತ್ಯದವರೆಗೂ ನೀರು ಬಿಡಬೇಕು ಎಂಬುದು ತಮಿಳುನಾಡಿನ ವಾದವಾಗಿತ್ತು. ಇದನ್ನು ಸಿಡಬ್ಲ್ಯೂಆರ್‌ಸಿ ನಿರಾಕರಿಸಿತ್ತು. ಆದರೆ, ಈಗ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.