For the best experience, open
https://m.samyuktakarnataka.in
on your mobile browser.

ತಮಿಳುನಾಡು ಜಾಹೀರಾತಲ್ಲಿ ಚೀನಾ ರಾಕೆಟ್‌ಗೆ ಆಕ್ಷೇಪ

11:26 PM Feb 28, 2024 IST | Samyukta Karnataka
ತಮಿಳುನಾಡು ಜಾಹೀರಾತಲ್ಲಿ ಚೀನಾ ರಾಕೆಟ್‌ಗೆ ಆಕ್ಷೇಪ

ತಿರುನೆಲ್ವೇಲಿ: ಇಸ್ರೋ ರಾಕೆಟ್‌ಗೆ ಡಿಎಂಕೆ ಸರ್ಕಾರ ಚೀನಾ ಸ್ಟಿಕರ್ ಅಂಟಿಸಿ ಜಾಹೀರಾತು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ತಿರುನೆಲ್ವೇಲಿಯಲ್ಲಿ ಅವರು ಬಿಜೆಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಭಾರತೀಯ ವಿಜ್ಞಾನಿಗಳನ್ನು ಅವಮಾನ ಮಾಡುತ್ತಿರುವ ಡಿಎಂಕೆ ಕೈಯಲ್ಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶ ಸಾಧಿಸಿರುವ ಪ್ರಗತಿಯನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಜನರು ನೀಡಿದ ತೆರಿಗೆಯನ್ನು ಬಳಸಿ ನೀಡಿರುವ ಜಾಹೀರಾತು ಭಾರತವನ್ನು ಪ್ರತಿಬಿಂಬಿಸುತ್ತಿಲ್ಲ. ಡಿಎಂಕೆಯನ್ನು ಶಿಕ್ಷಿಸಲು ಜನರಿಗೆ ಇದು ಸಕಾಲ ಎಂದರು.
ಡಿಎಂಕೆ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಜನರಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿದೆ. ಡಿಎಂಕೆ ಹಿಂದೂ ಧರ್ಮವನ್ನು ದ್ವೇಷಿಸುತ್ತದೆ. ಸಂಸತ್ತಿನಲ್ಲಿ ರಾಮ ಮಂದಿರದ ಕುರಿತಾದ ನಿರ್ಣಯ ತೆಗೆದುಕೊಳ್ಳುವ ವೇಳೆ, ಅದು ಸದನದಿಂದ ಹೊರಗೆ ಹೋಯಿತು. ಸನಾತನ ಧರ್ಮದ ಮೇಲಿನ ದ್ವೇಷವನ್ನು ಇದು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡು, ತಮಿಳುನಾಡಿನಲ್ಲಿ ಇಸ್ರೋದ ಎರಡನೇ ಲಾಂಚ್ ಪ್ಯಾಡ್ ಆರಂಭಿಸಲು ಘೋಷಣೆ ಮಾಡಿರುವುದರಿಂದ ಹತಾಶವಾಗಿರುವ ಡಿಎಂಕೆ ಇಂಥ ಕೃತ್ಯದಲ್ಲಿ ತೊಡಗಿದೆ. ಅದು ಚೀನಾಗೆ ಬದ್ಧವಾಗಿದ್ದು, ದೇಶದ ಸಾರ್ವಭೌಮತೆಯನ್ನು ತಿರಸ್ಕಾರ ಮಾಡುತ್ತಿರುವುದನ್ನು ಎತ್ತಿ ತೋರಿಸುತ್ತಿದೆ ಎಂದರು.