For the best experience, open
https://m.samyuktakarnataka.in
on your mobile browser.

ತಮಿಳ್ನಾಡಲ್ಲಿ ಪರಿವರ್ತನೆ ಯುಗ

11:43 PM Feb 27, 2024 IST | Samyukta Karnataka
ತಮಿಳ್ನಾಡಲ್ಲಿ ಪರಿವರ್ತನೆ ಯುಗ

ತಿರುಪ್ಪೂರ್: ತಮಿಳುನಾಡು ಐತಿಹಾಸಿಕ ಪರಿವರ್ತನೆಯ ಹೊಸ್ತಿಲಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ತಮಿಳುನಾಡಿನಾದ್ಯಂತ ಬಿಜೆಪಿ ಹಮ್ಮಿಕೊಂಡಿದ್ದ ಎನ್ ಮಾಣ್ ಎನ್ ಮಕ್ಕಳ್ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ, ಲೋಕಸಭಾ ಚುನಾವಣೆ ಪ್ರಚಾರ ಅಭಿಯಾನ ಆರಂಭಿಸಿ ಅವರು ಮಂಗಳವಾರ ಮಾತನಾಡುತ್ತಿದ್ದರು.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ದೊರೆತಿರುವ ಜನಬೆಂಬಲವನ್ನು ಶ್ಲಾಘಿಸಿದ ಅವರು, 'ದೇಶವೇ ಮೊದಲು' ಎನ್ನುವ ಪಕ್ಷದ ಸಿದ್ಧಾಂತಕ್ಕೆ ದೊರೆತಿರುವ ಮನ್ನಣೆ ಇದು ಎಂದು ಬಣ್ಣಿಸಿದರು. ಮೋದಿ ಗ್ಯಾರಂಟಿಗೆ ಜನರಿಂದ ಸಮ್ಮತಿ ದೊರೆತಿದೆ ಎಂದರು.
ಪ್ರತಿಪಕ್ಷಗಳು ರಚಿಸಿಕೊಂಡಿರುವ ಇಂಡಿಯಾ ಕೂಟಕ್ಕೆ ಮೋದಿ ದ್ವೇಷ ಮಾಡುವುದೊಂದೇ ಉದ್ದೇಶವಾಗಿದೆಯೇ ಹೊರತು, ಅಭಿವೃದ್ಧಿ ಅಲ್ಲ ಎಂದ ಅವರು, ತಮಿಳುನಾಡಿನಲ್ಲಿ ಡಿಎಂಕೆಗೆ ಅಧಿಕಾರ ಕಳೆದುಕೊಳ್ಳುವ ಭಯ ಇದೆ ಎಂದು ಅಣಕವಾಡಿದರು.
ಮುಂದಿನ ಅವಧಿಯಲ್ಲಿ ಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವ ಕುರಿತು ಬಿಜೆಪಿ ಮಾತನಾಡುತ್ತಿದೆ. ಆದರೆ ಇಂಡಿಯಾ ಕೂಟದ ನಾಯಕರು ಅಸಂಬದ್ಧವಾದ ಮಾತುಗಳನ್ನಾಡುತ್ತಿದ್ದಾರೆ. ಅಭಿವೃದ್ಧಿ, ಆರ್ಥಿಕತೆ, ಕೈಗಾರಿಕೆ, ಶಿಕ್ಷಣ, ಕೃಷಿ, ಕಾರ್ಮಿಕ, ಮೀನುಗಾರರ ಕುರಿತು ಅವರು ಆಡಿರುವ ಮಾತುಗಳನ್ನು ಯಾರಾದರೂ ಕೇಳಿದ್ದೀರಾ ಎಂದು ಪ್ರಶ್ನಿಸಿದರು. ಅವರಿಗೆ ಕುಟುಂಬ ರಾಜಕಾರಣವೇ ಮುಖ್ಯ. ಇದರಿಂದಾಗಿ ತಮಿಳುನಾಡಿನ ಪ್ರಗತಿಗೆ ಅಡ್ಡಿಯುಂಟಾಗುತ್ತಿದೆ ಎಂದರು.
ಈ ವರ್ಷ ತಮಿಳುನಾಡು ಹೆಚ್ಚು ಚರ್ಚೆಗೆ ಒಳಗಾಗಿದೆ. ಏಕೆಂದರೆ ದೇಶದ ಅಭಿವೃದ್ಧಿ ರಾಜಕೀಯದ ಹೊಸ ಕೇಂದ್ರ ತಮಿಳುನಾಡು ಆಗಲಿದೆ. ೨೦೨೪ರಲ್ಲಿ ತಮಿಳುನಾಡು ರಾಜಕೀಯ ಹೊಸ ಇತಿಹಾಸ ಸೃಷ್ಟಿಸಲಿದೆ ಎನ್ನುವುದಕ್ಕೆ ಬಿಜೆಪಿಯ ಯಶಸ್ವಿ ಪಾದಯಾತ್ರೆಯೇ ಸಾಕ್ಷಿ ಎಂದರು. ಡಿಎಂಕೆ ಸುಳ್ಳುಗಳನ್ನು ಹೇಳುವ ಮೂಲಕ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಡಿಎಂಕೆ ಮತ್ತು ಕಾಂಗ್ರೆಸ್ ದೀರ್ಘಕಾಲದಿಂದ ಮಿತ್ರಪಕ್ಷಗಳಾಗಿವೆ. ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ ಸಂಪುಟದಲ್ಲಿ ಡಿಎಂಕೆ ಪ್ರತಿನಿಧಿಗಳೂ ಇದ್ದರು. ಆದರೆ ಅವರು ತಮಿಳುನಾಡಿನ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ ಎಂದು ಟಿಕಿಸಿದರು. ಎಂಜಿಆರ್ ಕುಟುಂಬ ಬಲದಿಂದ ಮುಂದೆ ಬಂದವರಲ್ಲ, ತಮ್ಮ ಪ್ರತಿಭೆಯಿಂದಾಗಿ ಜನಮನ ಗೆದ್ದವರು. ಅವರ ನಂತರ ಜಯಲಲಿತಾ ಕೂಡ ಸಾರ್ವಜನಿಕ ಹಿತಾಸಕ್ತಿ ಮತ್ತು ಕಲ್ಯಾಣಕ್ಕೆ ಶ್ರಮಿಸಿದರು. ಡಿಎಂಕೆ ನಡೆಸುತ್ತಿರುವ ರಾಜಕಾರಣ, ಎಂಜಿಆರ್ ಅವರಿಗೆ ಅವಮಾನ ಮಾಡಿದಂತೆ ಎಂದು ವಿಶ್ಲೇಷಿಸಿದರು.