ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ತಲೆ ಶಿರೋಭಾರ

03:42 AM Aug 14, 2024 IST | Samyukta Karnataka

ವಿಶ್ವನ ಮನೆಗೆ ಬಂದಾಗ ಅಲ್ಲೊಂದು ಆಶ್ಚರ್ಯ ಕಾದಿತ್ತು. ಯಾರೋ ಒಬ್ಬ ವ್ಯಕ್ತಿ ತಲೆಯ ಮೇಲೆ ಹೆಲ್ಮೆಟ್ ಹಾಕಿಕೊಂಡು ಮಂಕಾಗಿ ಫಂಕಾಗಿ ಕುಳಿತಿದ್ದ. ಅದು ಫುಲ್ ಹೆಲ್ಮೆಟ್ ಆದ್ದರಿಂದ ಒಳಗಿದ್ದ ಮುಖದ ಚಹರೆ ತಿಳಿಯಲಿಲ್ಲ.
“ಎಲ್ಲಿ ನಿಮ್ಮೆಜಮಾನ್ರು?” ಎಂದು ವಿಶಾಲೂನ ಕೇಳಿದೆ.
“ಕೂತಿದೆಯಲ್ಲ ಇಲ್ಲೇ” ಎಂದು ಆತನ ತಲೆಯ ಮೇಲೆ ಮೊಟಕಿದಳು.
ಹೆಲ್ಮೆಟ್ ಧರಿಸಿದ್ದರಿಂದ ವಿಶ್ವನಿಗೆ ಏಟು ಬೀಳಲಿಲ್ಲ.
“ಮನೆಯಲ್ಲಿ ಕೂಡ ಈತ ಹೆಲ್ಮೆಟ್ ಯಾಕೆ ಹಾಕ್ಕೊಂಡಿದ್ದಾನೆ?” ಎಂದೆ.
“ನಾನೇ ಹಾಕ್ಸಿದ್ದು. ಅದು ಶಿಕ್ಷೆ!” ಎಂದಳು.
“ನೀವು ಲಟ್ಟಣಿಗೇಲಿ ಹೊಡೆಯೋಕೆ ಬಂದಾಗ ವಿಶ್ವ ತಾನೇ ಹಾಕ್ಕೊಂಡ್ನೇನೋ ಅಂತ ನನ್ಗೆ ಅನ್ನಿಸ್ತು” ಎಂದೆ. ಹೆಂಡತಿಯ ಆಯುಧಗಳಿಂದ ಗಂಡನ ತಲೆ ಉಳಿಯಲು ಶಿರಸ್ತಾçಣ ತ್ರಾಣ ನೀಡುತ್ತದೆ.
ವಿಶ್ವ ಹೆಲ್ಮೆಟ್ ಒಳಗಿಂದ ಗೊರಗೊರ ಸೌಂಡ್ ಮಾಡಿದಾಗ ಭಾಷೆ ತಿಳಿಯಲಿಲ್ಲ.
“ಇದರ ಹಿಂದಿನ ಕತೆ ಏನು?” ಎಂದಾಗ ವಿಶಾಲು ಗಂಡನ ಕಡೆ ನೋಡಿದಳು.
“ತೆಗೀರಿ ಹೆಲ್ಮೆಟ್ಟು, ನೀವೇ ಮಾತಾಡ್ರಿ” ಎಂದಳು.
ಹೆಲ್ಮೆಟ್ ಕಳಚಿದ ವಿಶ್ವ ದುಃಖದಿಂದ ಹೇಳಿದ.
“ಬೆಳಗಾಗೆದ್ದು ಇವಳಿಂದ ಐನೂರು ರೂಪಾಯಿ ನಷ್ಟ ನನಗೆ. ಒಂದು ಲೀಟರ್ ಎಕ್ಸ್ಟ್ರಾ ಹಾಲು ತರೋಕೆ ಕಳಿಸಿದ್ಲು. ಐನೂರು ರೂಪಾಯಿ ಫೈನ್ ಬಿತ್ತು ಗೆಳೆಯಾ” ಎಂದ.
ಎಕ್ಸ್ಟ್ರಾ ಹಾಲು ಯಾಕೆ ಎಂದು ನಾನು ಕೇಳಬಾರದಿತ್ತು. ಕೇಳಿದ್ದು ರಿವರ್ಸ್ ಗೇರಲ್ಲಿ ನನಗೇ ಅಪ್ಪಳಿಸಿತು.
“ಇವತ್ತು ಭಾನುವಾರ, ಯಾರಾದ್ರೂ ದಿಢೀರ್ ಗೆಸ್ಟ್ಗಳು ರ‍್ತಾರಲ್ಲ, ನಿಮ್ಮ ಹಾಗೆ! ಮನೆಗೆ ಬರೋ `ಟಾಮ್ ಡಿಕ್ ಅಂಡ್ ಹ್ಯಾರಿ’ಗಳಿಗೆಲ್ಲ ಕಾಫಿ ಮಾಡಿ ಕುಕ್ಕಲು ವರ್ತನೆ ಹಾಲು ಸಾಲೊಲ್ಲ” ಎಂದು ಎಕ್ಕಿದಳು.
“ಹಾಲು ತಗೊಂಡು ಬಂದ್ರೆ ಫೈನ್ ಹಾಕ್ತಾರಾ ವಿಶ್ವ?”
“ಬೇಡ ಅಂದ್ರೂ ಟೂ ವ್ಹೀಲರ್ ತಗೊಂಡ್ಹೋದ್ರು. ಹೆಲ್ಮೆಟ್ ಹಾಕ್ಕೊಂಡರ‍್ಲಿಲ್ಲ. ವಾಪಸ್ ಬರೋವಾಗ ಪೊಲೀಸ್ ಹಿಡಿದ್ರು, ತಲೆ ಖಾಲಿ ಇರೋದು ನೋಡಿ ಫೈನ್ ಜಡಿದ್ರು” ಎಂದಳು ವಿಶಾಲು.
“ಯಾಕೆ ವಿಶ್ವ, ಹೆಲ್ಮೆಟ್ ಹಾಕ್ಕೋಬಹುದಿತ್ತಲ್ಲ?” ಎಂದೆ.
“ಪಕ್ಕದ ರಸ್ತೇಲೇ ಇದೆ ಹಾಲಿನ ಬೂತು. ಇಷ್ಟು ಹತ್ತಿರಕ್ಕೆ ಯಾರು ಹಾಕ್ಕೋತಾರೆ ಹೆಲ್ಮೆಟ್ಟು?” ಎಂದು ವಾದಿಸಿದ.
“ದೂರದ ಪ್ರಶ್ನೆ ಅಲ್ಲ, ಅದು ನಿನ್ನ ಸೇಫ್ಟಿಗೋಸ್ಕರ ತಾನೇ?” ಎಂದು ಏನೋ ಸಮಜಾಯಿಷಿ ಹೇಳಲು ಹೋದೆ. ವಿಶ್ವನಿಗೆ ಸಿಟ್ಟು ಬಂತು.
“ಮೊನ್ನೆ ಪೇಪರ್ ನೋಡಿದ್ಯಾ? ಬಿಡದಿ ಫಂಕ್ಷನ್‌ಗೆ ರಾಜಕೀಯ ಪಕ್ಷದವರು ಬೈಕ್ ರ‍್ಯಾಲಿ ಮಾಡಿದ್ದು? ರಾಜಕಾರಣಿಗಳ ದಂಡೇ ಇತ್ತು. ಎಲ್ರೂ ಟೂ ವ್ಹೀಲರ್‌ಗಳಲ್ಲೇ ಬಂದಿದ್ರು. ಒಂದೊಂದು ಗಾಡಿಗೆ ಇಬ್ಬಿಬ್ರು. ಒಬ್ಬ ಮನುಷ್ಯನಾದ್ರೂ ತಲೆಗೆ ಹೆಲ್ಮೆಟ್ ಧರಿಸಿದ್ನಾ? ಮಂತ್ರಿಗಳೂ ಸಹ ಇದ್ರು. ಅರ‍್ದೂ ಖಾಲಿ ತಲೆ. ಹೆಲ್ಮೆಟ್ ರೂಲ್ಸ್ ಇರೋದು ಯರ‍್ಗೆ? ತೆಪ್ಪಗಿರೋ, ನಮಗೇನು ತಲೆ ಇಲ್ವಾ?” ಎಂದು ಕೂಗಾಡಿದ.
ವಿಶಾಲೂ ಅವನ ಮಾತು ತಡೆದಳು.
“ನಿಧಾನ.. ನಿಧಾನ.. ತುಂಬಾ ಆವೇಶಕ್ಕೆ ಒಳಗಾಗ್ಬೇಡಿ, ಬಿ.ಪಿ. ಜಾಸ್ತಿ ಆಗುತ್ತೆ”
“ಮತ್ತಿನ್ನೇನೇ? ಹಾಲಿಗೆ ೫೦ ರೂ. ಪೊಲೀಸ್‌ಗೆ ೫೦೦ ರೂ. ಕೊಟ್ರೆ ನನ್ ಕತೆ ಏನಾಗ್ಬೇಕು? ನೀನು ಮಾಡೋದು ಸೆವೆನ್ ಸ್ಟಾರ್ ಹೋಟೆಲ್ ಕಾಫೀನಾ?” ಎಂದು ಬಿಟ್ಟ.
ವಿಶಾಲೂಗೆ ಸಿಟ್ಟು ಹೆಚ್ಚಾಗಿ ಕಾಫಿ ಮಾಡಲು ಒಳಗಡೆ ಹೋದಳು. ವಿಶ್ವನ ಕಷ್ಟದ ಬಗ್ಗೆ ಕನಿಕರದಿಂದ ಕೇಳಿದೆ.
“ಯಾಕೆ ವಿಶ್ವ ಟೆಂಪರ್ ಕಳ್ಕೋತೀಯ?” ಎಂದೆ.
“ಇವಳಿಂದಾಗಿ ನನಗೆ ಫೈನ್ ಬಿತ್ತು”
“ಏನೋ ಗ್ರಹಚಾರ, ಸಿಕ್ಕಿಬಿದ್ದೆ. ಅಷ್ಟಕ್ಕೇ ಸಿಟ್ಟಾ?”
“ನನ್ನ ಸಿಟ್ಟು ಅದಕ್ಕಲ್ಲ, ಮೊನ್ನೆ ರಾಜಕೀಯ ಪಕ್ಷದ ಕಾರ್ಯಕರ್ತರು ಬಿಡದಿಗೆ ಜಾಥಾ ಮಾಡಿದ್ದನ್ನ ಟೀವೀಲಿ ನೋಡಿದೆ. ಸಾವಿರಾರು ಮಂದಿ ಗಾಡೀಲಿ ಹೋದ್ರಲ್ಲ ಒಬ್ರಾದ್ರೂ ಹೆಲ್ಮೆಟ್ಟು ಹಾಕಿದ್ರಾ? ಅವರಿಗೆ ಪೊಲೀಸ್ ಎಸ್‌ಕಾರ್ಟ್ ಬೇರೆ. ನಮ್ಮಂಥ ಜನಸಾಮಾನ್ಯರು ಮಾತ್ರ ಹೆಲ್ಮೆಟ್ ಹಾಕ್ಬೇಕಾ?” ಎಂದು ರಿಪೀಟಿಸಿದ.
“ಅವರು ಮಂತ್ರಿಗಳು ಮತ್ತು ಅವರ ಶಿಷ್ಯರು” ಎಂದೆ.
“ಆದರೇನು ಮಂತ್ರಿಗಳು ಆಕಾಶದಿಂದ ಉದುರಿ ಬಂದವರಾ? ನಮ್ಮನೆ ಬಾಗಿಲಿಗೆ ಬಂದು ಕೈ ಮುಗಿದು, ಕಾಲಿಗೆ ಬಿದ್ದು ಓಟು ತಗೊಂಡು ಗೆದ್ದವರಲ್ವಾ ಅವರು?” ಎಂದ.
“ರೀ, ತಗೊಳ್ಳಿ ಕಾಫಿ. ಕಾಫಿ ಕುಡಿದು ಸಮಾಧಾನವಾಗಿ ಮಾತಾಡಿ” ಎಂದಳು ವಿಶಾಲು. ವಿಶ್ವ ಕಾಫಿ ಕುಡಿಯುತ್ತಾ ಸಮಾಧಾನ ಮಾಡಿಕೊಂಡ.
“ಹ್ಯಾಗಿದೆ ಕಾಫಿ?” ವಿಶಾಲು ಕೇಳಿದಳು.
“ವೆರಿ ಗುಡ್, ಫ್ರೆಶ್ಶಾಗಿ ಡಿಕಾಕ್ಷನ್ನಾ” ಎಂದು ನಾನು ಉಬ್ಬಿಸಿದೆ.
“ಹೌದು, ಪಾಪ, ನಮ್ಮೆಜಮಾನ್ರಿಗೆ ಇವತ್ತು ಮೊದಲನೇ ಡೋಸ್ ಕಾಫಿ”
“ಅಯ್ಯೋ! ಏನಿದು, ಬೆಳಗ್ಗೆ ೯ ಗಂಟೆ ಆದ್ರೂ ಮೊದಲನೇ ಡೋಸ್ ಕಾಫಿ ಬಿದ್ದಿಲ್ವಾ?”
“ಪೊಲೀಸ್ ಕೈಗೆ ಸಿಕ್ಕಿಬಿದ್ದು ಫೈನ್ ಹಾಕಿಸ್ಕೊಂಡು ಈಗ ತಾನೇ ಬಂದ್ರಲ್ಲ, ಆ ಬಗ್ಗೆ ಜಗಳ ಶುರು ಆಗಿತ್ತು. ಕ್ಲೈಮ್ಯಾಕ್ಸ್ಗೆ ಹೋಗೋ ಮೊದಲು ನೀವು ಬಂದ್ರಿ” ಎಂದಳು.
“ನೋಡು ವಿಶ್ವಾ, ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ ಅನ್ನೋ ಗಾದೆ ನಿನಗೆ ಗೊತ್ತರ‍್ಬೇಕಲ್ಲ?”
“ಸರಿಯಾಗಿ ಹೇಳಿದ್ರಿ. ನಮ್ಮತ್ತೆಗೆ ಹೇಳಿ ಮಾಡ್ಸಿದ ಗಾದೆ ಅದು” ಎಂದು ವಿಶಾಲು ಹಳೇ ದಿನಗಳ ಫ್ಲ್ಯಾಷ್‌ಬ್ಯಾಕ್‌ಗೆ ಹೋದಳು.
“ನಾನೊಂದ್ಸಲ ಪಾತ್ರೆ ತೊಳೆಯೋವಾಗ ಗಾಜಿನ ಲೋಟ ಒಡೆದು ಹಾಕ್ದೆ. ನೂರು ರೂಪಾಯಿ ಹಾಳಾಯ್ತು ಅಂತ ಅತ್ತೆ ಕೂಗಾಡಿ ಬಿಟ್ರು. ಆದ್ರೆ ನಮ್ಮತ್ತೆ ಉಪ್ಪಿನಕಾಯಿ ಜಾಡೀನ ಬಿಸಿಲಲ್ಲಿ ಇಡೋಕೆ ಅಂತ ಟೆರೇಸ್‌ಗೆ ಹೋಗೋವಾಗ ಜಾಡೀನೂ ಕೆಡವಿದ್ರು, ತಾವೂ ಬಿದ್ರು”
“ಅಯ್ಯೋ ದೇವ್ರೇ! ಆಮೇಲೆ?”
“ಆಮೇಲೇನು? ಅವರ ಕಾಲಿಗೆ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ರಾಡ್ ಹಾಕ್ಸಿದ್ರು. ಆದ್ರೆ ಜಾಡಿ ಒಡೆದ ಬಗ್ಗೆ ಅತ್ತೆ ಎಂದೂ ಮಾತಾಡಿಲ್ಲ. ನಾನು ಒಡೆದ ಗಾಜಿನ ಲೋಟ ೧೦೦ ರೂಪಾಯಿ ಅಂತರ‍್ತಾರೆ”
“ಅತ್ತೆ ಅಂದ್ರೆ ಅಧಿಕಾರ. ನಾವು ರಾಜಕಾರಣಿಗೆ ಅಧಿಕಾರ ಕೊಟ್ಮೇಲೆ ಮುಗೀತು ವಿಶ್ವ. ಅರ‍್ನ ನಾವು ಪ್ರಶ್ನೆ ಮಾಡೋಕಾಗೊಲ್ಲ. ಅವರು ಮಾಡಿದ್ದೆಲ್ಲ ಸರಿ ಅನ್ನಬೇಕು. ಅವರು ಸಿಕ್ಕಿ ಬಿದ್ರೂ ಕೇಸ್ ಆಗೊಲ್ಲ. ಓವರ್ ಸ್ಪೀಡಲ್ಲಿ ಹೋಗಿ ಆ್ಯಕ್ಸಿಡೆಂಟ್ ಮಾಡಿದರೂ ಕೇಸ್ ಆಗೊಲ್ಲ. ಯಾರೋ ಆತ್ಮಹತ್ಯೆ ಮಾಡ್ಕೊಳ್ಳೋಕೆ ಕಾರಣ ಇವರೇ ಆಗಿದ್ರೂ ಅರೆಸ್ಟ್ ಆಗದೆ ತಲೆ ತಪ್ಪಿಸಿಕೊಂಡು ಬೇಲ್ ತಗೋತಾರೆ. ಲೀಡರ್‌ಗಳಿಗೆ ವಿಶೇಷವಾದ ಪ್ರಿವಿಲೆಜಸ್ ಇವೆ” ಎಂದಾಗ ವಿಶ್ವ ಮಿಕಿ ಮಿಕಿ ನೋಡಿದ.
“ಕಾನೂನು ಮಾಡೋ ರಾಜಕಾರಣಿಗಳು ಪ್ರಶ್ನಾತೀತರು. ಸುಮ್ನೆ ಕುಡೀರಿ ಕಾಫಿ” ಎಂದಳು ವಿಶಾಲು.
“ತಾನೂ ರಾಜಕಾರಣಿ ಆಗಿದ್ರೆ ಎಲ್ಲ ತಪ್ಪುಗಳಿಂದ ವಿನಾಯ್ತಿ ಸಿಕ್ತಿತ್ತು” ಎಂದು ವಿಶ್ವ ಪೇಚಾಡಿದ.

Next Article