ತವರುಮನೆಯ ಕರಳು ಬಳ್ಳಿ ಮತ್ತೆ ಬೆಸೆಯಿತು
ಅಕ್ಕ ತಂಗಿಯರು, ನನ್ನ ಪರಿಚಯದ ಹಳೆಯ ಕಕ್ಷಿದಾರನ ಜೊತೆಗೆ ಬಂದರು. ತಕ್ಕಮಟ್ಟಿಗೆ ಶಿಕ್ಷಣ ಪಡೆದ, ಬೇರೆ ಬೇರೆ ಜಿಲ್ಲಾ ಕೇಂದ್ರದಲ್ಲಿ, ಗಂಡ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಇವರೀರ್ವರನ್ನು ಪರಿಚಯಿಸಿ, ಕೋರ್ಟಿನಿಂದ ಬಂದ ಕಾಗದಪತ್ರಗಳನ್ನು ಮುಂದೆ ಇರಿಸಿ, ಪರಿಶೀಲಿಸಿ ಎಂದು ಹೇಳಿ ನನ್ನ ಕೆಲಸ ಮುಗಿಯಿತು ಅನ್ನುವ ಭಾವದಿಂದ ಹಿಂದೆ ಸರಿದು ಕುಳಿತನು.
ಹೆಚ್ಚಾಗಿ ಕೋರ್ಟ್‌ನಲ್ಲಿ ದಾಖಲಾಗುವ ದಾವೆಗಳು, ಅರ್ಜಿಗಳು ಇಂಗ್ಲಿಷ್ ಭಾಷೆಯಲ್ಲಿಯೆ ಇರುತ್ತವೆ. ಬ್ರಿಟಿಷರಿಂದ ಬಳುವಳಿಯಾಗಿ ಬಂದ ಕಾನೂನುಗಳು, ನಿಯಮಗಳು, ನಡವಳಿಕೆಗಳು, ನ್ಯಾಯವಾದಿಗಳು ಧರಿಸುವ ಧಿರಿಸುಗಳ ಮೇಲೆ ಬ್ರಿಟಿಷರ ಸಂಸ್ಕೃತಿಯ ನೆರಳು ಇದೆ. ತಪ್ಪಲಿ, ಒಪ್ಪಲಿ ಎಂತದೋ ಇಂಗ್ಲಿಷ್ ವಾಕ್ಯ, ಪದ ತುಂಬಿದ ಹಾಳೆಗಳು ಒಣ ಗಂಭೀರತೆಯಿಂದ ತುಂಬಿರುತ್ತದೆ. ಒಮ್ಮೊಮ್ಮೆ ಅನಿವಾರ್ಯ ಅನಿಸುತ್ತದೆ. ಕೆಲವೊಂದು ಕಾನೂನು ಇಂಗ್ಲಿಷ್ ಪದಗಳಿಗೆ ಸಮಾನಾಂತರ ಪರ್ಯಾಯ ಕನ್ನಡ ಪದವು ಸಿಗುವುದಿಲ್ಲ. ಅನಿವಾರ್ಯವಾಗಿ ಯಥಾವತ್ ಇಂಗ್ಲಿಷ್ ಪದದ ಆಶ್ರಯ ಪಡೆಯಬೇಕಾಗುತ್ತದೆ.
ಪ್ಲೇಯಿಂಟ್/ವಾದಪತ್ರ ಓದಿದೆ. ವಾದಿಯ ತಂದೆ ಸುಮಾರು ಎರಡು ವರ್ಷದ ಹಿಂದೆ, ಒಂದು ವರ್ಷದ ಹಿಂದೆ ತಾಯಿ ತೀರಿಕೊಂಡರು. ಮೃತನಿಗೆ ಇಬ್ಬರು ಹೆಣ್ಣು ಮಕ್ಕಳು ಅಂದರೆ ವಾದಿ ಮತ್ತು ನನ್ನ ಕಕ್ಷಿದಾರರ ತಾಯಿ ಮತ್ತು ಇಬ್ಬರು ಗಂಡುಮಕ್ಕಳು. ತಂದೆ ಮೃತನಾದ ನಂತರ ಇಬ್ಬರು ಗಂಡು ಮಕ್ಕಳು ಕೇವಲ ತಾವು ವಾರಸುದಾರರೆಂದು, ತಾಯಿ ಸಹೋದರಿಯರ ಇರುವಿಕೆಯನ್ನು ಮರೆಮಾಚಿ ತಮ್ಮ ಹೆಸರನ್ನು ಮಾತ್ರ ದಾವೆ ಆಸ್ತಿಯ ದಾಖಲಾತಿಯಲ್ಲಿ ದಾಖಲಿಸಿಕೊಂಡರು. ಈ ರೀತಿ ಹೆಸರು ದಾಖಲಿಸಿಕೊಂಡ ಪ್ರಕ್ರಿಯೆಯು ಕಾನೂನು ವಿರೋಧಿ ಇದೆ, ತನ್ನ ಮತ್ತು ಮೃತ ಸಹೋದರಿಯ ಮಕ್ಕಳ ಹಕ್ಕಿಗೆ ಬಂಧನ ಇಲ್ಲವೆಂದು, ತಮ್ಮ ಸಹೋದರರು ತಮ್ಮ ಹಕ್ಕನ್ನು ನಷ್ಟಗೊಳಿಸಲು ಸಹೋದರರು ಹೆಸರನ್ನು ದಾವೆ ಆಸ್ತಿಯ ದಾಖಲೆಗಳಲ್ಲಿ ದಾಖಲಿಸಿಕೊಂಡಿರುವರು ಎಂದು ಆರೋಪಿಸಿ, ತನ್ನ ೧/೪ ಹಿಸ್ಸೇಯನ್ನು ವಿಭಜಿಸಿ, ಪ್ರತ್ಯೇಕ ಸ್ವಾಧೀನಕ್ಕೆ ಕೊಡಿಸಲು ಡಿಕ್ರಿ ಜಡ್ಜ್ಮೆಂಟ್ ಆದೇಶ ಮಾಡಲು ಪ್ರಾರ್ಥಿಸಿದ್ದಾಳೆ. ವಾದಪತ್ರವನ್ನು ಸವಿಸ್ತಾರವಾಗಿ ತಿಳಿಹೇಳಿ, ನಿಮ್ಮ ನಿಲುವು ಏನೆಂದು, ಸಹೋದರಿಯರ ಪ್ರತಿಕ್ರಿಯೆಗಾಗಿ ಕಾದೆ. ಹಿರಿಯವಳು ಪ್ರಬುದ್ಧಳು ಮಾತು ಆರಂಭಿಸಿದಳು.
"ಸರ್ ನಿಜ ಹೇಳಬೇಕೆಂದರೆ, ಈ ಕೇಸಿನ ವಾದಿ ನಮ್ಮ ಚಿಕ್ಕಮ್ಮ, ಉಳಿದ ಪ್ರತಿವಾದಿ ಸೋದರಮಾವರು. ಇವರನ್ನು, ಅಜ್ಜ ಅಜ್ಜಿಯರನ್ನು ನಾವು ನೋಡಿಯೇ ಇಲ್ಲ. ನಮ್ಮ ತಾಯಿಯ ಊರು, ತವರುಮನೆ, ಆಸ್ತಿಯ ಮಾಹಿತಿ ಇಲ್ಲ. ನನಗೆ ತಿಳಿವಳಿಕೆ ಬಂದ ನಂತರ, ನಾನು ನನ್ನ ತಾಯಿಯನ್ನು ಕೇಳುತ್ತಿದ್ದೆ. ನಿನ್ನ ತವರುಮನೆ ಎಲ್ಲಿದೆ?. ತಂದೆ, ತಾಯಿ, ಸಹೋದರಿ, ಸಹೋದರ ಯಾರು? ಎಲ್ಲಿದ್ದಾರೆ? ಅವರು ಯಾಕೆ ನಿನ್ನನ್ನು ನೋಡಲು ಬರುವುದಿಲ್ಲ?, ಬೇರೆ ನನ್ನ ಗೆಳತಿಯರಿಗೆ ಇರುವಂತೆ ನನಗೆ, ಚಿಕ್ಕಮ್ಮ, ತಾತ, ಸೋದರಮಾವ ಏಕೆ ಇಲ್ಲ ಎನ್ನುವ ಪ್ರಶ್ನೆಗೆ ತಾಯಿ ಅನಿವಾರ್ಯವಾಗಿ ಒಮ್ಮೆ ಎಲ್ಲವನ್ನು ಬಿಚ್ಚಿಟ್ಟಳು. ಅವಳ ತಂದೆ ಊರಿನಲ್ಲಿ ಪ್ರತಿಷ್ಠಿತ, ಗಣ್ಯ ವ್ಯಕ್ತಿಯಾಗಿದ್ದರು. ತಮ್ಮ ಸ್ವಂತ ದುಡಿಮೆಯಿಂದ ಸಾಕಷ್ಟು ಶ್ರಮಪಟ್ಟು ಆಸ್ತಿ, ಅಂತಸ್ತು, ಪ್ರತಿಷ್ಠೆ ಹೊಂದಿದ್ದರು. ತಾಯಿ ಅನಕ್ಷರಸ್ಥಳಾದರೂ ಸುಸಂಸ್ಕೃತಳು. ಅವರಿಗೆ ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳು. ಅವಳೆ ದೊಡ್ಡವಳು. ಅವರನ್ನು ಮುದ್ದಿನಿಂದ, ಯಾವುದೇ ಕೊರತೆ ಆಗದಂತೆ ಬೆಳೆಸಿದ್ದರು. ತಾಯಿ ತೀರಿಕೊಂಡಳು. ಇನ್ನೂ ಮದುವೆಯಾಗುವ ವಯಸ್ಸು ಇದ್ದರೂ ಮಕ್ಕಳ ಭವಿಷ್ಯಕ್ಕಾಗಿ ತಂದೆ ಮತ್ತೊಂದು ಮದುವೆಯಾಗಲಿಲ್ಲ. ಮಕ್ಕಳು ತಾಯಿಯ ಶಿಸ್ತಿನ ಚೌಕಟ್ಟು ಇಲ್ಲದೆ ಹೇಗೇಗೋ ಬೆಳೆದರು. ವರ್ಷಗಳು ಉರುಳಿದವು. ಅದೇ ಊರಿನ ಹುಡುಗ ಇವಳಿಗೆ ಪರಿಚಯವಾದ. ಸುಂದರ ಲವಲವಿಕೆಯಿಂದ ಓಡಾಡುತ್ತಿದ್ದ. ಅವನು ಇವಳಿಗೆ ಮಾರುಹೋದನೋ, ಇವಳು ಅವನಿಗೊ ತಿಳಿಯಲಿಲ್ಲ, ಅಷ್ಟರಲ್ಲಿ ಪ್ರೀತಿ, ಪ್ರೇಮ ಅನ್ನುವ ಹೆಸರಿನಲ್ಲಿ ಆಕರ್ಷಣೆಗೆ ಒಳಗಾದರು. ಬಿಟ್ಟು ಬದುಕಲಾರೆವು ಅನ್ನುವ ಭಾವಗಳಿಗೆ ಸೆರೆಯಾದರು. ಗಲ್ಲಿ, ಗಲ್ಲಿಗಳಲ್ಲಿ, ಸಂದಿಗೊಂದಿಗಳಲ್ಲಿ ಇವರ ಪ್ರೀತಿ, ಪ್ರಣಯದ ಬಗ್ಗೆ ತರಹೇವಾರಿ ಕಥೆ, ಪಿಸುಮಾತುಗಳು ಹರಿದಾಡಲು ಪ್ರಾರಂಭಿಸಿದವು. ತಂದೆಯ ಕಿವಿ ಮುಟ್ಟಲು ಸಮಯ ತೆಗೆದುಕೊಂಡಿತು. ತಂದೆ ವ್ಯಘ್ರನಾಗಿ ಉರಿದು ಹೋದನು. ತಾಯಿ ಇಲ್ಲದ ಮಕ್ಕಳನ್ನು ತನ್ನ ವೈಯಕ್ತಿಕ ಸುಖ, ಸಂತೋಷಕ್ಕೆ ತಿಲಾಂಜಲಿ ನೀಡಿ ಬೆಳೆಸಿದ್ದು ವ್ಯರ್ಥವಾಯಿತು ಎಂದು ದುಃಖಪಟ್ಟನು. ಸಮಯ ಮೀರಿ ಹೋಗಿತ್ತು. ಅನ್ಯಜಾತಿಯ ಹುಡುಗನಿಗೆ ಮಾರು ಹೋಗಿದ್ದೆ ಸಮಸ್ಯೆ ಆಯಿತು. ಕೆಲವು ಗೆಳೆಯರು ಆಗಿದ್ದು ಆಗಿ ಹೋಗಿದೆ, ಹುಡುಗ, ಅವನ ಮನೆಯವರು ಒಳ್ಳೆಯವರು ಮದುವೆ ಮಾಡಿಬಿಡು ಎಂದು ತಿಳಿಹೇಳಿದರು. ಅಸಾಧ್ಯ ಎಂದು ನಿರಾಕರಿಸಿದ. ಅಷ್ಟರಲ್ಲಿ ಇಬ್ಬರು ಎಡವಟ್ಟು ಮಾ ಡಿಕೊಂಡಿದ್ದರು. ಗರ್ಭಪಾತ ಅಸಾಧ್ಯ ಆಗಿತ್ತು. ಮನೆಯವರಿಗೆ ಹೇಳದೆ ಕೇಳದೆ ಊರು ಬಿಟ್ಟರು. ಓಡಿಹೋದರು ಎಂದು ಊರ ಜನರ ಮಾತಿಗೆ ಆಹಾರವಾದರು. ಜನರು ಮರೆತರು. ಸಿಕ್ಕರೆ ಇಬ್ಬರನ್ನು ಕೊಂದುಬಿಡಲು ತಂದೆ ನಿರ್ಣಯಿಸಿದ್ದ. ಯಾರ ಕೈಗೆ ಸಿಗದಂತೆ ದೂರದ ನಗರದಲ್ಲಿ ಬದುಕು ಕಟ್ಟಿಕೊಂಡರು. ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದರು. ಮಗಳು ಮೋಸ ಮಾಡಿದಳೆಂದು ತಂದೆ, ತಂದೆಗೆ ಮೋಸ ಮಾಡಿದೆ ಎಂದು ಮಗಳು ಕೊರಗಿ ಇಹಲೋಕ ತ್ಯಜಿಸಿದರು. ಸರ್, ಇಷ್ಟು ನಮ್ಮ ತಾಯಿಯ ಬದುಕು. ನಮ್ಮ ತಂದೆ ಒಳ್ಳೆಯ ವರ ನೋಡಿ ಮದುವೆ ಮಾಡಿದ್ದಾರೆ. ಈಗ ಅವರೂ ಇಲ್ಲ, ತವರುಮನೆ ಎಂಬುದು ಇಲ್ಲ. ಈಗ ನಮ್ಮ ತಾಯಿ ಮನೆಯಲ್ಲಿ ಆಸ್ತಿಗಾಗಿ ವ್ಯಾಜ್ಯ ಬಂದಿದೆ. ಅನಿವಾರ್ಯವಾಗಿ ನಮ್ಮನ್ನು ಈ ದಾವೆಯಲ್ಲಿ ಅವಶ್ಯಕ ಪಾರ್ಟಿಯೆಂದು ಸೇರಿಸಿದ್ದಾರೆ. ನಮಗೇನು ಆಸ್ತಿ ಬೇಡ. ಈ ಸಂದರ್ಭದಿಂದಾದರೂ ತಾಯಿ ತವರುಮನೆ ಅನುಭೂತಿ ಆಗುತ್ತಿದ್ದೆ. ತಾಯಿ ತವರು ಕಳೆದುಕೊಂಡಿದ್ದಳು. ಅವಳು ತವರು ಮತ್ತೆ ಮನೆ, ಕರಳುಬಳ್ಳಿ ಸೇರಿದಳು ಅನಿಸಿದೆ." ಭಾವುಕಳಾಗಿ ಮಾತು ಮುಗಿಸಿದಳು.
ನ್ಯಾಯಾಲಯದಲ್ಲಿ ಸಹೋದರಿಯರ ಪರವಾಗಿ ವಕಾಲತ್ತು ಪತ್ರ ಸಲ್ಲಿಸಿದೆ. ಸಹೋದರಿಯರು ಕೋರ್ಟಿನಲ್ಲಿ ಬಂದು ನಿಂತರು. ಚಿಕ್ಕಮ್ಮ, ಸೋದರಮಾವಂದಿರು ಇವರ ಕಡೆ ದೃಷ್ಟಿ ಬೀರಲಿಲ್ಲ. ಅನಿವಾರ್ಯತೆಗೆ ಇವರನ್ನು ಕೋರ್ಟಿಗೆ ಎಳೆದಿದ್ದರು.
ಕೇಸು ಮುಂದುವರಿಯಿತು. ಪ್ರತಿವಾದಿ ಸಹೋದರಿಯರ ಪರವಾಗಿ ಕೈಫಿಯತ್/ತಕರಾರು ಸಲ್ಲಿಸಲು ಸಮಯ ಪಡೆದುಕೊಂಡೆನು. ಅಚಾನಕ್ಕಾಗಿ ಒಂದು ದಿನ ವಾದಿ ಚಿಕ್ಕಮ್ಮ ತಾನು ಪ್ರತಿವಾದಿಯರು ನ್ಯಾಯಾಲಯದ ಹೊರಗೆ ನ್ಯಾಯ ನಿರ್ಣಯಿಸಿಕೊಂಡಿದ್ದು ಕೇಸನ್ನು ಮುಂದುವರಿಸುವುದಿಲ್ಲ, ವಜಾಗೊಳಿಸಲು ಮೆಮೊ ದಾಖಲಿಸಿದಳು.
ನಮ್ಮ ಕಕ್ಷಿದಾರರನ್ನು ವಿಚಾರಿಸುವುದಾಗಿ ಸಮಯ ಪಡೆದೆನು. ಸಹೋದರಿಯರನ್ನು ಸಮಾಲೋಚಿಸಿದಾಗ, ವಾದಿ ತನ್ನ ಸಹೋದರರಿಂದ ಹಣ ಪಡೆದು ದಾವೆ ಹಿಂಪಡೆಯುತ್ತಿರುವುದಾಗಿ ತಿಳಿಯಿತು. ತಮ್ಮಷ್ಟಕ್ಕೆ ತಾವಿದ್ದ ಸಹೋದರಿಯರನ್ನು ಕೋರ್ಟಿಗೆ ಎಳೆದು ಚೇಷ್ಟೆ ಮಾಡಿದ್ದರು. ಸಹೋದರಿಯರು, ತಾಯಿಯ ಹಿಸ್ಸೆ ಪಡೆಯಲು ನಿರ್ಣಯಿಸಿದರು. ತಕ್ಷಣ ಸಹೋದರಿಯರ ಪರವಾಗಿ ಕೌಂಟರ್ ಕ್ಲೇಮ್/ಪ್ರತಿ ಹಕ್ಕು ಪ್ರತಿಪಾದಿಸಿ ಕೈಫಿಯತ್ ದಾಖಲಿಸಿ, ತಾಯಿಯ ೧/೪ ಹಿಸ್ಸೇಯನ್ನು ತಮಗೆ ಆದೇಶಿಸುವಂತೆ ಪ್ರಾರ್ಥಿಸಿದೆ. ವಾದಿ ದಾವೆ ಹಿಂಪಡೆಯಲು ಆಗಲಿಲ್ಲ. ವಾದಿ ಕೋರ್ಟಿಗೆ ಬರಲಾರದ್ದಕ್ಕೆ ದಾವೆ ವಜಾಗೊಂಡಿತು ಪ್ರತಿ ಹಕ್ಕು ಪ್ರತಿಪಾದನೆ ಬೇಡಿಕೆ ಮುಂದುವರಿಯಿತು. ಸಾಕ್ಷಿ ಹೇಳಿಕೆ ಮಾಡಿಸಿ, ವಾದ ಮಂಡಿಸಿದೆ. ಅಂತಿಮವಾಗಿ ನ್ಯಾಯಾಲಯ ತಾಯಿಯ ೧/೪ ಹಿಸ್ಸೇಯನ್ನು ಸಹೋದರಿಯರಿಗೆ ನೀಡಿ ಪ್ರತಿ ಹಕ್ಕು ಡಿಕ್ರಿಗೊಳಿಸಿ ಆದೇಶ ಮಾಡಿತು. ಸಹೋದರಿಯರು ತಮ್ಮ ತಾಯಿಗೆ, ತವರುಮನೆ ಕರಳುಬಳ್ಳಿ ಮತ್ತೆ ದೊರೆತಷ್ಟು ಸಂಭ್ರಮಿಸಿದರು. ಅವರ ಮೊಗದಲ್ಲಿಯ ಸಂತೃಪ್ತ ಭಾವ, ವೃತ್ತಿ ಸಫಲತೆಗೆ ಮತ್ತೊಂದು ಗರಿ ಆಯಿತು.
ಒಂದೇ ಹಕ್ಕಿಗಾಗಿ ಹಲವಾರು ಕೇಸುಗಳು ಸೃಷ್ಟಿ ಆಗದಂತೆ, ನ್ಯಾಯ ವ್ಯವಸ್ಥೆಯಲ್ಲಿ, ವಾದಿ ಮಾಡಿದ ದಾವೆಯಲ್ಲಿಯೇ, ಕೌಂಟರ್ ಕ್ಲೇಮ್/ ಪ್ರತಿ ಹಕ್ಕು ಸಾಧಿಸಿ ನ್ಯಾಯ ಪಡೆಯುವ ಅವಕಾಶ ಇದೆ.