ತಾಕತ್ತಿದ್ದರೆ ರೇಣುಕಾಚಾರ್ಯರನ್ನು ಉಚ್ಚಾಟಿಸಲಿ
ದಾವಣಗೆರೆ: ತಾಕತ್ತಿದ್ದರೆ ದೆಹಲಿಗೆ ತೆರಳಿ ಸದಸ್ಯತ್ವದಿಂದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ಉಚ್ಚಾಟನೆಗೊಳಿಸಲಿ ನೋಡೋಣ ಎಂದು ಹೊನ್ನಾಳಿ ಬಿಜೆಪಿಯ ಮುಖಂಡ ಶಾಂತರಾಜ್ ಪಾಟೀಲ್‌ಗೆ ರಾಜು ವೀರಣ್ಣ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ಕರೋನಾ ರೋಗಿಗಳಿಗೆ ರೇಣುಕಾಚಾರ್ಯ ಮಾಡಿರುವ ಸೇವೆಗೆ ಇಡೀ ದೇಶವೇ ಕೊಂಡಾಡಿದೆ ಮತ್ತು ವಿಪಕ್ಷದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಅದರಲ್ಲೂ ಹೊನ್ನಾಳಿ-ನ್ಯಾಮತಿ ತಾಲ್ಲೂಕಿನಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಶಾಂತರಾಜ್ ಪಾಟೀಲ್ ಮತ್ತವರ ತಂಡದವರಿಗೆ ರೇಣುಕಾಚಾರ್ಯ ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಶಾಂತರಾಜ್ ಪಾಟೀಲ್ ಅವರು ಸ್ಟಾಂಪ್ ಪೇಪರ್ ಮಾರಾಟ ಮಾಡುತ್ತಿದ್ದರು. ಅವರನ್ನು ರೇಣುಕಾಚಾರ್ಯ ಅವರೇ ಗುರುತಿಸಿ ಬೆಳೆಸಿದ್ದಾರೆ. ಇದು ಹೊನ್ನಾಳಿ ಜನತೆಗೆ ಗೊತ್ತಿರುವ ವಿಚಾರ. ಇವರಿಗೆ ಗ್ರಾಪಂ ಗೆಲ್ಲಿಸುವ ತಾಕತ್ತು ಕೂಡ ಇಲ್ಲ. ಇಂಥವರು ಹೊನ್ನಾಳಿ ಅಭ್ಯರ್ಥಿ ಬದಲಿಸಿ ಗೆಲ್ಲಿಸುವ ಮಾತನಾಡುತ್ತಾರೆ. ಶಾಂತರಾಜ್ ಪಾಟೀಲ್ ಅವರು ಯಾರದ್ದೋ ಮಾತು ಕೇಳಿಕೊಂಡು ಬಂದು ಈಗ ರೇಣುಕಾಚಾರ್ಯ ವಿರುದ್ಧ ಮಾತನಾಡುತ್ತಿದ್ದಾರೆ. ಇವರಿಗೆ ತಾಕತ್ತಿದ್ದರೆ ರೇಣುಕಾಚಾರ್ಯರನ್ನು ಉಚ್ಚಾಟಿಸಲಿ ಎಂದು ಸವಾಲು ಹಾಕಿದರು.
ಪ್ರವೀಣ್ ಜಾಧವ್, ಪಂಜು ಪೈಲ್ವಾನ್, ಸುಮಂತ್, ಪ್ರಶಾಂತ್, ಮಂಜುನಾಥ್, ಕಾಶಿ ಸುದ್ದಿಗೋಷ್ಠಿಯಲ್ಲಿದ್ದರು.