For the best experience, open
https://m.samyuktakarnataka.in
on your mobile browser.

ಅಂಕಿತಾ, ನವನೀತ್ ಓದಿದ ಶಾಲೆಗಳಿಗೆ ಒಂದೂವರೆ ಕೋಟಿ ರೂ. ಅನುದಾನ ಘೋಷಣೆ

09:57 PM May 14, 2024 IST | Samyukta Karnataka
ಅಂಕಿತಾ  ನವನೀತ್ ಓದಿದ ಶಾಲೆಗಳಿಗೆ ಒಂದೂವರೆ ಕೋಟಿ ರೂ  ಅನುದಾನ ಘೋಷಣೆ

ಬೆಂಗಳೂರು: SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಕುಮಾರಿ ಅಂಕಿತ ಹಾಗೂ ದ್ವಿತೀಯ ರ್‍ಯಾಂಕ್ ಪಡೆದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸನ್ಮಾನಿಸಿ ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಿ ಸಾಗಲಿ ಎಂದು ಮುಖ್ಯಮಂತ್ರಿಗಳು ಶುಭ ಹಾರೈಸಿದರು.‌
ಅಂಕಿತ ಮತ್ತು ನವನೀತ್ ಸಾಧನೆಗೆ ಮೆಚ್ವುಗೆ ವ್ಯಕ್ತಪಡಿಸಿದ ಸಿಎಂ, ಪೋಷಕರನ್ನೂ ಅಭಿನಂದಿಸಿದರು. ಮುಂದಿನ‌ ವಿಧ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಅಂಕಿತಾಗೆ 5 ಲಕ್ಷ ರೂ. ಹಾಗೂ ನವನೀತ್ ಗೆ 3 ಲಕ್ಷ ರೂ.ಗಳ ನೆರವನ್ನು ಸಿಎಂ ಘೋಷಿಸಿದರು.
ಅಂಕಿತಾ ಓದಿದ ಶಾಲೆಯ ಅಭಿವೃದ್ಧಿಗೆ ಒಂದು ಕೋಟಿ ರೂ. ಹಾಗೂ ನವನೀತ್ ವ್ಯಾಸಂಗ ಮಾಡಿದ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದರು.
ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಂದ ಸನ್ಮಾನ ಸ್ವೀಕರಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೋಷಕರು ಸರ್ಕಾರದ ನೆರವಿಗೆ ಧನ್ಯತೆ ಅರ್ಪಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆ ನನ್ನ ಕಲ್ಪನೆ. 1994ರಲ್ಲಿ ಉಪ ಮುಖ್ಯಮಂತ್ರಿ ಆಗಿದ್ದಾಗ ಈ ಶಾಲೆಗಲಿಗೆ ಚಾಲನೆ ನೀಡಲಾಯಿತು ಎಂದು ಸಿದ್ದರಾಮಯ್ಯ ಅವರು ಹೇಳಿದರು.
ನಿಮ್ಮ ಸಾಧನೆಯೇ ನನಗೆ ಪ್ರೇರಣೆ: ಕುಮಾರಿ ಅಂಕಿತ
ಮುಖ್ಯಮಂತ್ರಿಗಳಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಕುಮಾರಿ ಅಂಕಿತ, "ಸಾರ್ ನಿಮ್ಮ ಸಾಧನೆಗಳು, ನಿಮ್ಮ ಮಾತುಗಳು ನನ್ನ ಈ ಯಶಸ್ಸಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದವು" ಎಂದು ತಿಳಿಸಿದರು. ಮುಂದೆ ಐಎಎಸ್ ಅಧಿಕಾರಿ ಆಗಬೇಕೆಂಬ ಬಯಕೆಯನ್ನು ಅಂಕಿತಾ ವ್ಯಕ್ತಪಡಿಸಿದರು. ಪಿಯುಸಿ ದಾಖಲಾತಿ ಸೇರಿದಂತೆ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ಒದಗಿಸುವುದಾಗಿ ಸಿಎಂ ಭರವಸೆ ನೀಡಿದರು.