For the best experience, open
https://m.samyuktakarnataka.in
on your mobile browser.

ಅಡಕತ್ತರಿಯಲ್ಲಿ ನೀಟ್ ವಿದ್ಯಾರ್ಥಿಗಳು

03:55 AM Jun 07, 2024 IST | Samyukta Karnataka
ಅಡಕತ್ತರಿಯಲ್ಲಿ ನೀಟ್ ವಿದ್ಯಾರ್ಥಿಗಳು

ವಿಶೇಷ ವರದಿ
ಶಿವಮೊಗ್ಗ: ಪ್ರಸಕ್ತ ಶೈಕ್ಷಣಿಕ ವರ್ಷದ ಸಿಇಟಿ ಮತ್ತು ನೀಟ್ ಪರೀಕ್ಷೆಗಳಲ್ಲಿ ನಡೆದ ಎಡವಟ್ಟುಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರುವಂತಿವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೈಬಿಡಲಾಗಿದ್ದ ಪಠ್ಯಕ್ರಮದಿಂದ ಸಿಇಟಿಯಲ್ಲಿ ೫೦ ಪ್ರಶ್ನೆಗಳನ್ನು ಕೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿ ಸ್ನೇಹಿಯಾಗಬೇಕಿದ್ದ ಪ್ರಾಧಿಕಾರದ ಕೆಲವು ಏಕಪಕ್ಷೀಯ ನಿರ್ಧಾರಗಳ ಬಗ್ಗೆ ವಿದ್ಯಾರ್ಥಿಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಇದೀಗ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದರೂ ರ್ಯಾಕಿಂಗ್‌ನಲ್ಲಿ ಗಣನೀಯ ಹೆಚ್ಚಳವಾಗಿರುವುದು ವಿದ್ಯಾರ್ಥಿಗಳಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಹೆಚ್ಚಿನ ಶುಲ್ಕ ಪಾವತಿಸಿಯಾದರೂ ವೈದ್ಯಕೀಯ ಸೀಟು ಪಡೆಯಲು ಮುಂದಾಗುವಂತೆ ಮಾಡಿದೆ.
ಆದರೆ ನೀಟ್‌ನಲ್ಲಿ ಅತ್ಯುತ್ತಮ ಅಂಕ ಪಡೆದರೂ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಗುವುದು ಅಸಾಧ್ಯ ಎಂಬಂತ ಸ್ಥಿತಿ ಉದ್ಭವವಾಗಿದೆ. ಇದೀಗ ವಿದ್ಯಾರ್ಥಿಗಳು ಆಡಳಿತ ಮಂಡಳಿ ಮೂಲಕ ಸೀಟು ಪಡೆಯಲು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ಬಾರಿ ಆನ್‌ಲೈನ್‌ನಲ್ಲಿ ಕ್ಲೇಮ್ ಮಾಡದಿದ್ದರೆ ಈ ಅವಕಾಶವು ವಿದ್ಯಾರ್ಥಿಗಳ ಪಾಲಿಗೆ ಇಲ್ಲದಾಗಿದೆ.
ಈ ವರ್ಷ ಹೊಸ ಪ್ರಯೋಗ
ಇಷ್ಟು ವರ್ಷಗಳ ಕಾಲ ವಿದ್ಯಾರ್ಥಿಗಳು ಸಲ್ಲಿಸಿದ್ದ ದಾಖಲೆಗಳ ಭೌತಿಕ ಪರಿಶೀಲನೆ ನಡೆಸುತ್ತಿತ್ತು. ಆದರೆ ಪ್ರಸಕ್ತ ವರ್ಷ ಆನ್‌ಲೈನ್ ಪರಿಶೀಲನೆ ನಡೆಸಲು ಮುಂದಾಗಿದೆ. ಈ ಬಗ್ಗೆಯಂತೂ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿಯೇ ಇಲ್ಲ. ಅನೇಕ ವಿದ್ಯಾರ್ಥಿಗಳು ಕೈಬಿಟ್ಟು ಹೋಗಿರುವ ದಾಖಲೆಗಳನ್ನು ಭೌತಿಕ ಪರಿಶೀಲನೆ ಅಥವಾ ಕೌನ್ಸೆಲಿಂಗ್‌ಗೂ ಮುನ್ನ ಸಲ್ಲಿಸುವ ಅವಕಾಶವಿದೆ ಎಂಬ ಕಲ್ಪನೆಯಲ್ಲಿದ್ದಾರೆ. ಆದರೆ ಸಿಇಟಿಗೆ ನೋಂದಣಿ ಮಾಡಿಕೊಂಡು ದಾಖಲೆಗಳನ್ನು ಅಪ್‌ಲೋಡ್ ಮಾಡಿದವರು ಮಾತ್ರ ಕರ್ನಾಟಕ ನೀಟ್ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು ಎಂಬುದು ವಿದ್ಯಾರ್ಥಿಗಳ ಗಮನಕ್ಕೆ ಬಂದಿಲ್ಲ.
ಕೆಇಎ ಕಳೆದ ತಿಂಗಳು ದಾಖಲೆಗಳು, ಕ್ಲೆಮ್‌ಗಳ ಅಪ್‌ಡೇಟ್‌ಗೆ ಅಂತಿಮ ಅವಕಾಶ ಎಂಬ ಅಧಿಸೂಚನೆ ಹೊರಡಿಸಿ ಮೇ ೯ರಿಂದ ೧೫ರವರೆಗೆ ತಿದ್ದುಪಡಿಗೆ ಅವಕಾಶವನ್ನೇನೋ ನೀಡಿತ್ತು. ಆದರೆ ವಿದ್ಯಾರ್ಥಿಗಳಿಗೆ ಆ ಮಾಹಿತಿ ಸಮರ್ಪಕವಾಗಿ ತಲುಪಿಸುವಲ್ಲಿ ಎಡವಿದೆ. ರಾಜ್ಯದಲ್ಲಿ ಶಿವಮೊಗ್ಗ, ದಾವಣಗೆರೆ ಹಾಗೂ ಉತ್ತರ ಕರ್ನಾಟಕ ಭಾಗದ ೧೪ ಕ್ಷೇತ್ರಗಳಿಗೆ ೨ನೇ ಹಂತದ ಚುನಾವಣೆ ಮೇ ೭ರಂದು ನಡೆದಿತ್ತು. ಕಂದಾಯ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಮೇ ೮ರಂದು ಅನೇಕರು ಕಚೇರಿಗಳಿಗೆ ಬಂದಿರುವುದಿಲ್ಲ. ಇನ್ನು ಮೇ ೧೦ ಬಸವ ಜಯಂತಿ,
ಮೇ ೧೧ರಂದು ೨ನೇ ಶನಿವಾರ, ಮೇ ೧೨ ಭಾನುವಾರ ಮೂರು ದಿನಗಳ ಕಾಲ ಸರ್ಕಾರಿ ಕಚೇರಿಗಳಿಗೆ ರಜೆ ಇತ್ತು.
ಆನ್‌ಲೈನ್ ಪರಿಶೀಲನೆ ಬಗ್ಗೆ ಅಪಸ್ವರ
ದಾಖಲೆಗಳ ಭೌತಿಕ ಪರಿಶೀಲನೆ ವೇಳೆ ಅಕಸ್ಮಾತ್ ಯಾವುದೋ ತಿದ್ದುಪಡಿ, ಇತರೆ ಸಮಸ್ಯೆಗಳೇನಿದ್ದರೂ ಕೆಇಎ ಬೆಂಗಳೂರು ಕಚೇರಿಗೂ ಹೋಗಿ ವಿದ್ಯಾರ್ಥಿಗಳು ಸಿಇಟಿ, ನೀಟ್ ಕೌನ್ಸೆಲಿಂಗ್‌ಗೂ ಮುನ್ನ ಅಪಡೇಟ್ ಮಾಡಿಸುವ ಅವಕಾಶ ಹಿಂದಿನ ವರ್ಷಗಳಲ್ಲಿ ಇತ್ತು. ಆದರೆ ಈ ವರ್ಷ ಈ ಅವಕಾಶದ ಬಗ್ಗೆ ಕೆಇಎ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆನ್‌ಲೈನ್ ಪರಿಶೀಲನೆ ಸಾಧಕ ಬಾಧಕಗಳ ಅಧ್ಯಯನ ನಡೆಸದೆಯೇ ಕೆಇಎ ಈ ನಿರ್ಧಾರ ಕೈಗೊಂಡಿರುವ ಬಗ್ಗೆಯೂ ವಿದ್ಯಾರ್ಥಿ ವಲಯದಿಂದ ಆಕ್ಷೇಪಗಳು ವ್ಯಕ್ತವಾಗುತ್ತಿವೆ.