ಅಣ್ಣನ ಎಲೆಕ್ಷನ್ ವೆಚ್ಚಕ್ಕೆ ಸ್ಕೆಚ್
ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ಕರ್ನಾಟಕ ವಾಲ್ಮೀಕಿ ಮಹರ್ಷಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರು ನೇರ ಭಾಗಿಯಾಗಿದ್ದು, ತಮ್ಮ ಸಹೋದರನಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಸಿಕ್ಕರೆ ಚುನಾವಣಾ ವೆಚ್ಚಕ್ಕಾಗಿ ಹಣ ಸಂಗ್ರಹಿಸಲು ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ತಮ್ಮ ಸಹೋದರನಿಗೆ ಲೋಕಸಭಾ ಚುಣಾವಣೆಯ ಟಿಕೆಟ್ ಸಿಕ್ಕರೆ ಕನಿಷ್ಠ ೧೦೦ ಕೋಟಿ ರೂ.ಗಳನ್ನು ಚುನಾವಣೆಯಲ್ಲಿ ವೆಚ್ಚ ಮಾಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪ್ರಭಾವಿ ರಾಜಕಾರಣಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ನಿಗಮದ ಖಾತೆಯಲ್ಲಿದ್ದ ಹಣವನ್ನು ಹೈದರಾಬಾದ್‌ನ ವ್ಯಕ್ತಿಗಳ ಖಾತೆಗೆ ರತ್ನಾಕರ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಅಲ್ಲಿಂದ ಹಣ ತೆಗೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆದರೆ ದುರಾದೃಷ್ಟವಶಾತ್ ತಮ್ಮ ಸಹೋದರನಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಸಿಗದೇ ಹೋದುದರಿಂದ ತಾವು ತೆಗೆಸಿಕೊಂಡಿದ್ದ ಹಣವನ್ನು ಮತ್ತೆ ಖಾಸಗಿ ಖಾತೆಗಳ ಮೂಲಕ ಸರಕಾರಿ ಖಾತೆಗೆ ವಾಪಸ್ ಭರಿಸುವ ಪ್ರಯತ್ನ ಆರಂಭಿಸಿದ್ದರು.
ಆದರೆ ಆ ವೇಳೆಗಾಗಲೇ ಕೋಟ್ಯಂತರ ರೂಪಾಯಿ ಬಳಕೆ ಮಾಡಿಕೊಂಡಿದ್ದರಿಂದ ಹಣವನ್ನು ವಾಪಸ್ ಭರಿಸುವುದು ತಡವಾಯಿತು. ಈ ಮಧ್ಯೆ ಈ ವಿಚಾರ ಅಧಿಕಾರಿಗಳ ಮೂಲಕ ಸರಕಾರದ ಕಿವಿಗೆ ಬಿತ್ತು ಎನ್ನಲಾಗಿದೆ. ಆಗ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳು ಎಸ್.ಟಿ. ನಿಗಮದ ಹಣಕಾಸು ವ್ಯವಹಾರದ ಬಗೆಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದರು. ಇದರಿಂದ ನಿಗಮದ ಅಧಿಕಾರಿ ಗಳಲ್ಲೇ ಭಿನ್ನಾಭಿಪ್ರಾಯ ಉಂಟಾಗಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಮೇಲೆ ಒತ್ತಡ ಉಂಟಾಗಿತ್ತು. ಗಾಬರಿಗೊಂಡ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾದರು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿದ್ದ ನಿಗಮದ ಖಾತೆಯಿಂದ ಪ್ರಭಾವಿ ರಾಜಕಾರಣಿ ೨೫ ಕೋಟಿ ರೂ.ಗಳನ್ನು ಖಾಸಗಿ ಖಾತೆಗೆ ವರ್ಗಾವಣೆ ಮಾಡಲು ತಮ್ಮ ಆಪ್ತ ಸಿಬ್ಬಂದಿಯೊಬ್ಬನಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿಸಿದ್ದಲ್ಲದೇ ನಿಗಮದ ಹಿರಿಯ ಅಧಿಕಾರಿಗಳನ್ನು ಬೈಪಾಸ್ ಮಾಡುವಂತೆಯೂ ಕಿರುಕುಳ ನೀಡಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕಿಂತ ಗಂಭೀರ ಸ್ವರೂಪದ ಆರೋಪವೇನೆಂದರೆ, ಪ್ರಭಾವಿ ರಾಜಕಾರಣಿ ಎಸ್.ಟಿ.ನಿಗಮದ ಹಣದ ಹೊಂದಾಣಿಕೆ ಮಾಡಲು ನಕಲಿ ಫಲಾನುಭವಿಗಳ ಪಟ್ಟಿಯನ್ನೂ ತಯಾರಿಸಿದ್ದ ಎನ್ನಲಾಗುತ್ತಿದೆ.
ಮೊದಲನೇ ಬಾರಿ ಹಣ ವರ್ಗಾವಣೆಯಾದ ನಂತರ ಕೆಲದಿನಗಳ ಕಾಲ ಈ ವಿಷಯ ಯಾರ ಗಮನಕ್ಕೂ ಬಂದಿರಲಿಲ್ಲ. ಇದೇ ಧೈರ್ಯದ ಆಧಾರದಲ್ಲಿ ನಂತರವೂ ಕೋಟ್ಯಂತರ ರೂಪಾಯಿಗಳನ್ನು ಮೂರ್ನಾಲ್ಕು ಬಾರಿ ಖಾಸಗಿ ಖಾತೆಗೆ ಹಣ ವರ್ಗಾವಣೆ ಮಾಡಲು ನಿಗಮದ ಕೆಲವು ಅಧಿಕಾರಿಗಳು ಪ್ರಭಾವಿ ರಾಜಕಾರಣಿಗೆ ಸಹಾಯ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಮೂರನೇ ಮದುವೆ ಮತ್ತು ಐಷಾರಾಮಿ ಜೀವನ
ಪರಿಶಿಷ್ಟ ಪಂಗಡದ ಬಡ ಫಲಾನುಭವಿಗಳ ಕಲ್ಯಾಣಕ್ಕಾಗಿ ಬಳಕೆಯಾಗಬೇಕಾದ ಕೋಟ್ಯಂತರ ರೂಪಾಯಿ ಅನುದಾನದ ಹಣವು ಪ್ರಭಾವಿ ರಾಜಕಾರಣಿಯೊಬ್ಬರ ಮೂರನೇ ಮದುವೆ ಹಾಗೂ ಅವರ ಐಷಾರಾಮಿ ಜೀವನ ವೆಚ್ಚಕ್ಕೆ ಬಳಕೆಯಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಹೈದರಾಬಾದ್ ವ್ಯಕ್ತಿಗಳ ಮೂಲಕ ಹಣವನ್ನು ಪಡೆದುಕೊಂಡ ಪ್ರಭಾವಿ ರಾಜಕಾರಣಿ ಅದನ್ನು ಮೂರನೇ ಮದುವೆಗೆ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಆಪ್ತರು ಎಚ್ಚರಿಕೆ ನೀಡಿದರೂ ಸಹ ಪ್ರಭಾವಿ ರಾಜಕಾರಣಿ ಯಾರಿಗೂ ಸೊಪ್ಪು ಹಾಕದೇ ಸ್ವೇಚ್ಛಾಚಾರ ರೀತಿಯಲ್ಲಿ ವರ್ತಿಸಿದ್ದಾರೆ ಎನ್ನುತ್ತಿವೆ ನಿಗಮದ ಮೂಲಗಳು.
ಆರ್ಥಿಕ ವರ್ಷಾಂತ್ಯದ ದುರ್ಬಳಕೆ
ಪ್ರತಿವರ್ಷದ ಆರ್ಥಿಕ ವರ್ಷಾಂತ್ಯಕ್ಕೆ ಸರಕಾರಿ ಯೋಜನೆಗಳ ಹಣವು ಬಳಕೆ ಆಗದೇ ವಾಪಸ್ ಹೋದರೆ ಆಯಾ ಇಲಾಖೆ ಕೈಯಿಂದ ಅನುದಾನ ತಪ್ಪುತ್ತದೆ ಎಂಬ ನೆಪವೊಡ್ಡಿ ಅಧಿಕಾರಿಗಳೇ ಆಯಾ ಇಲಾಖೆಯ ಸಚಿವರಿಗೆ ಖಾಸಗಿ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಂತೆ ಸಲಹೆ ನೀಡುತ್ತಾರೆ ಎನ್ನಲಾಗಿದೆ. ಎಸ್.ಟಿ.ನಿಗಮದಲ್ಲೂ ಎಸ್.ಟಿ. ಫಲಾನುಭವಿಗಳ ಹಣ ವಾಪಸ್ ಹೋಗುತ್ತದೆ ಎಂಬ ನೆಪ ಹೇಳಿ ಸರಕಾರಿ ಹಣವನ್ನು ಖಾಸಗಿ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಇದೇ ಅವಕಾಶ ಬಳಸಿಕೊಂಡ ಪ್ರಭಾವಿ ರಾಜಕಾರಣಿ ಈ ಹಣವನ್ನು ತಮ್ಮ ಸಹೋದರನ ಚುನಾವಣೆ ವೆಚ್ಚಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದರು ಎನ್ನುತ್ತಿವೆ ನಿಗಮದ ಮೂಲಗಳು. ಈ ಎಲ್ಲ ವ್ಯವಹಾರಗಳ ಸತ್ಯಾಸತ್ಯತೆ ಸಿಐಡಿ ತನಿಖೆಯ ಮೂಲಕ ಹೊರಬೀಳಬೇಕಿದೆ.
ಹಣ ವರ್ಗಾವಣೆ ಇದೇ ಮೊದಲಲ್ಲ
ಎಸ್.ಟಿ.ಅಭಿವೃದ್ಧಿ ನಿಗಮದಲ್ಲಿ ಖಾಸಗಿ ಖಾತೆಗಳಿಗೆ ಸರಕಾರದ ಹಣ ವರ್ಗಾವಣೆ ಆಗಿರುವುದು ಇದೇ ಮೊದಲಲ್ಲ, ಈ ಹಿಂದಿನ ಸರಕಾರಗಳ ಅವಧಿಯಲ್ಲೂ ಇಂತಹ ಪ್ರಕರಣ ನಡೆದಿವೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಇಲಾಖೆಗೆ ಈ ಹಿಂದೆ ಸಚಿವರಾಗಿದ್ದವರು ಯಾರೂ ಕೂಡ ಸದ್ಯ ನಡೆದಿರುವ ೯೪.೭೩ ಕೋಟಿ ರೂ.ಗಳ ಅಕ್ರಮ ವರ್ಗಾವಣೆ ಬಗೆಗೆ ಮಾತನಾಡುತ್ತಿಲ್ಲ. ೨೦೦೬ರಿಂದ ೨೦೨೪ರ ಮಾರ್ಚ್ವರೆಗೆ ಸಮಗ್ರ ತನಿಖೆ ನಡೆಸಿದರೆ ನೂರಾರು ಕೋಟಿ ರೂ.ಗಳ ಅಕ್ರಮ ಹೊರಬರುತ್ತದೆ ಎನ್ನುತ್ತಿವೆ ಇಲಾಖೆಯ ಮೂಲಗಳು.