ಅನ್ನದಾತರ ಮೇಲೆ ಖಾಕಿ ದರ್ಪ
ಚಿತ್ರದುರ್ಗ: ಬರಗಾಲದಿಂದ ತತ್ತರಿಸಿರುವ ರೈತರು ಬದುಕು ನಡೆಸಲಾಗದೆ ಸಂಕಷ್ಟದಲ್ಲಿರುವ ವೇಳೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಅನ್ನದಾತರ ಮೇಲೆ ಹಲ್ಲೆ ನಡೆಸುವ ಮೂಲಕ ಕ್ರೂರತನ ಮೆರೆದಿದ್ದಾನೆ.
ಭರಮಸಾಗರ ಹೋಬಳಿಯ ಅಡವಿಗೊಲ್ಲರಹಳ್ಳಿ ಗ್ರಾಮದಲ್ಲಿ ವಿದ್ಯುತ್ ಮೇನ್ ಲೈನ್ ಎಳೆಯುವ ವಿಚಾರದಲ್ಲಿ ರೈತರ ಮೇಲೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಇಡೀ ರೈತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ರೈತ ರೆಹಮತ್ವುಲ್ಲಾ, ಸಹೋದರ ಬಾಬು ಹಾಗೂ ವೃದ್ಧೆ ಮೆಹಬೂಬಿ ಹಲ್ಲೆಗೊಳಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಬ್ಇನ್ಸ್ ಪೆಕ್ಟರ್ ರವಿ ನಾಯಕ್ ರೈತರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ರೈತರನ್ನು ಜಮೀನಲ್ಲಿ ದರ ದರನೇ ಎಳೆದೊಯ್ದು ಕ್ರೌರ್ಯ ಮೆರೆದಿರುವ ವಿಡೀಯೋ ಇದೀಗ ವೈರಲ್ ಆಗಿದೆ.
ಅಡವಿಗೊಲ್ಲರಹಳ್ಳಿ ಗ್ರಾಮದ ಸಮೀಪ ರೆನಿವ್ ಎಂಬ ಪವನ ವಿದ್ಯುತ್ ಉತ್ಪಾದನಾ ಕಂಪನಿಯಿಂದ ವಿದ್ಯುತ್ ಫ್ಯಾನ್ ಲೈನ್ ಎಳೆಯುತ್ತಿದ್ದು, ಇದೇ ಗ್ರಾಮದ ಸರ್ವೆ ೧೫/೫ ರಲ್ಲಿ ರೆಹಮತ್ ವುಲ್ಲಾ ಹಾಗೂ ಬಾಬು ಎಂಬುವವರಿಗೆ ಸೇರಿದ ಜಮೀನು ಇದೆ. ಈ ಜಮೀನಿನಲ್ಲಿ ರೆನಿವ್ ಕಂಪನಿಯು ಫ್ಯಾನ್ ಲೈನ್ ಸೋಮವಾರ ಸಂಜೆ ಎಳೆಯುತ್ತಿದ್ದಾಗ ರೆಹಮತ್ ವುಲ್ಲಾ ಹಾಗೂ ಬಾಬು ಅವರುಗಳು ವಿದ್ಯುತ್ ಲೈನ್ ಎಳೆಯಲು ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದಿದ್ದಿರಾ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ರೈತರು ಮತ್ತು ವಿದ್ಯುತ್ ಉತ್ಪಾದನಾ ಕಂಪನಿ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಆಗ ಸ್ಥಳಕ್ಕೆ ಆಗಮಿಸಿದ ಭರಮಸಾಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವಿ ನಾಯಕ್ ರೈತರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ರವಿ ನಾಯಕ್ ರೈತ ಎದೆಯ ಮೇಲಿನ ಶರ್ಟ್ ಹಿಡಿದು ಎಳೆದೊಯ್ದು ಕ್ರೌರ್ಯ ಮೆರೆದಿದ್ದು, ಕಾನ್ಸ್ಟೇಬಲ್ ಶ್ರೀನಿವಾಸ್ ಎಂಬವರಿಂದಲೂ ಹಲ್ಲೆ ನಡದಿದೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ. ರೆಹಮತ್ತುಲ್ಲಾ ತಾಯಿ ಮಾಬೂಬಿ(೭೦) ಮೇಲೆ ಮಹಿಳಾ ಪೇದೆಯಿಂದ ಹಲ್ಲೆ ಮಾಡಲಾಗಿದೆ ಎಂದಿರುವ ಗಾಯಾಳು ರೆಹಮತ್ತುಲ್ಲಾ ಹಾಗೂ ಬಾಬು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.