For the best experience, open
https://m.samyuktakarnataka.in
on your mobile browser.

ಎರಡು ಬಾರಿ ಪಿಯು ಫೇಲ್.. ಈಗ ಯುಪಿಎಸ್‌ಸಿ ಪಾಸ್!

02:13 AM Apr 17, 2024 IST | Samyukta Karnataka
ಎರಡು ಬಾರಿ ಪಿಯು ಫೇಲ್   ಈಗ ಯುಪಿಎಸ್‌ಸಿ ಪಾಸ್

ಬೆಂಗಳೂರು/ಬಳ್ಳಾರಿ: ದ್ವಿತೀಯ ಪಿಯುಸಿಯಲ್ಲಿ ಎರಡು ಬಾರಿ ಫೇಲ್ ಆಗಿದ್ದರೂ ಬಿಸಿಲು ನಾಡು, ಕಲ್ಯಾಣ ಕರ್ನಾಟಕ ಹೆಮ್ಮೆಯ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಕುರುಬರ್ ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿದ್ದಾನೆ.
೨೦೨೩ರ ಸೆಪ್ಟೆಂಬರ್ ೧೫ ರಿಂದ ೨೪ರ ನಡುವೆ ನಡೆದಿದ್ದ ನಾಗರೀಕ ಸೇವೆಗಳ ಅಂತಿಮ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಒಟ್ಟು ೧,೦೧೬ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅವರನ್ನು ಕೇಂದ್ರ ವಿವಿಧ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಲೋಕಸೇವಾ ಆಯೋಗ ತಿಳಿಸಿದೆ. ಇದರಲ್ಲಿ ನಮ್ಮ ಕರ್ನಾಟಕದ ಶಾಂತಪ್ಪ ಕುರುಬರ್ ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಇತರರಿಗೆ ಮಾದರಿ ಎನಿಸಿಕೊಂಡಿದ್ದಾರೆ.
ಗಣಿನಾಡು ಬಳ್ಳಾರಿ
ಬಳ್ಳಾರಿ ಮೂಲಕ ಶಾಂತಪ್ಪ ಅವರು ಪಿಯುಸಿಯಲ್ಲಿ ಎರಡು ಬಾರಿ ಫೇಲ್ ಆಗಿದ್ದವರು. ಆದರೂ ತಮ್ಮ ಗುರಿ, ಛಲ ಕೈಬಿಡದ ಶಾಂತಪ್ಪ ಪಿಯುಸಿ ತೇರ್ಗಡೆಯಾಗಿ ಇನ್ಸ್ಪೆಕ್ಟರ್ ಹುದ್ದೆಗೆ ಏರಿದ್ದರು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಶಾಂತಪ್ಪ ಯುಪಿಎಸ್‌ಸಿ ಪರೀಕ್ಷೆಯಲ್ಲೂ ಸಹ ಯಶಸ್ಸು ಪಡೆದಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ ಶಾಂತಪ್ಪ ಅವರು ೬೪೪ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿಕೊಂಡೇ ನಿರಂತರ ಪ್ರಯತ್ನದಿಂದ ಪಿಯುಸಿ ಪಾಸ್ ಮಾಡಿಕೊಂಡು ಬಳಿಕ ಪದವಿ ಮುಗಿಸಿ ಅದರ ಮೇಲೆ ೨೦೧೫ರಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದರು. ಸದ್ಯ ಇವರು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜ್ಞಾನವು ವ್ಯಕ್ತಿಯಲ್ಲಿ ವಿವೇಕವನ್ನು ಮೂಡಿಸುತ್ತದೆ. ಆದರೆ, ಅಂಥ ಜ್ಞಾನ ಪಡೆದರಷ್ಟೇ ಸಾಲದು. ಅದನ್ನು ವಿವೇಚನೆಯಿಂದ ಬಳಸಿಕೊಳ್ಳುವ ಕಲೆಯೂ ತಿಳಿದಿರಬೇಕು ಎಂಬಂತೆ ದೃಢ ನಿರ್ಧಾರ, ನಿರ್ದಿಷ್ಟ ಗುರಿ ತಲುಪಿದ್ದಾರೆ.
ಪುಟ್ಟ ಹಳ್ಳಿಯಲ್ಲಿ ಜನನ
ಬಳ್ಳಾರಿ ಜಿಲ್ಲೆ ಕುರಗೋಡು ತಾಲೂಕಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಶಾಂತಪ್ಪ, ಹುಟ್ಟಿದ ವರ್ಷದೊಳಗೆ ತಂದೆಯನ್ನು ಕಳೆದುಕೊಂಡರು. ಅಮ್ಮ ಇದ್ದ ಸ್ವಲ್ಪ ಹೊಲದಲ್ಲಿ ಕೆಲಸ ಮಾಡುವುದರ ಜೊತೆಗೆ ಕೂಲಿ ಮಾಡುತ್ತಿದ್ದರು. ಸರ್ಕಾರಿ ಶಾಲೆಗಳಲ್ಲಿ ಓದಿಕೊಂಡು ಬಂದ ಶಾಂತಪ್ಪ ಸರ್ಕಾರಿ ಸೇವೆಗೆ ಸೇರುವ ಗರಿ ಹೊಂದಿದ್ದರು. ಆದರೆ, ಪಿಯುಸಿಯಲ್ಲಿ ಎರಡು ಬಾರಿ ಅನುತ್ತೀರ್ಣರಾಗಿದ್ದರು. ಆದರೂ ಛಲ ಬಿಡಿದ ಶಾಂತಪ್ಪ ಸತತ ಪ್ರಯತ್ನ ಮಾಡಿ ಪದವಿ ಮಗಿಸಿಕೊಂಡು ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಿದ್ದರು. ಕೊನೆಗೆ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು. ಶಾಂತಪ್ಪ ಪೊಲೀಸ್ ಇಲಾಖೆಯಲ್ಲಿಯೇ ಇದ್ದು ಮಾಡುತ್ತಿರುವ ಸಮಾಜ ಸೇವೆಗೆ ಪೊಲೀಸ್ ಇಲಾಖೆಯಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯ ವಿಧಾನಸೌಧ ಭದ್ರತಾ ವಿಭಾಗದಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಿಎಸ್‌ಐ ಶಾಂತಪ್ಪ ಈವರೆಗೂ ಸುಮಾರು ಐದಾರು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಅವರಿಗೆ ಮೊದಲು ಸಿಕ್ಕಿದ್ದು ಕೆನರಾ ಬ್ಯಾಂಕ್‌ನಲ್ಲಿ ಕೆಲಸ. ಆದರೆ, ಬ್ಯಾಂಕ್ ಉದ್ಯೋಗ ಇಷ್ಟವಿಲ್ಲದಿದ್ದರಿಂದ ಆ ಕೆಲಸಕ್ಕೆ ಹೋಗಲಿಲ್ಲ. ಆ ನಂತರ ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೆ ಹೋಗಿ ಬಂದಿದ್ದಾರೆ. ಅದೇ ರೀತಿ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಎರಡು ಬಾರಿ ಸಂದರ್ಶನಕ್ಕೆ ಹೋಗಿ ಬಂದಿದ್ದರು. ಜನರ ಕಷ್ಟಕ್ಕೆ ನೇರವಾಗಿ ಸ್ಪಂದಿಸುವ ಸಲುವಾಗಿ ಪಿಎಸ್‌ಐ ಹುದ್ದೆ ಅಯ್ಕೆ ಮಾಡಿಕೊಂಡಿದ್ದಾರೆ.
ಅನೇಕ ಸಾಮಾಜಿಕ ಕಾರ್ಯ
ಇವರು ಕೇವಲ ಪೊಲೀಸ್ ಮಾತ್ರವಲ್ಲ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಬಡ, ನಿರ್ಗತಿಕ ಮಕ್ಕಳಿಗೆ ಶಿಕ್ಷಣ ಹೇಳಿಕೊಡುವುದು. ಬಡವರಿಗೆ ಸೂರು, ಉಚಿತ ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ. ಬಡತನದ ಹಿನ್ನೆಲೆಯಿಂದ ಬಂದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ತನ್ನ ಮಾನವೀಯ ಕೆಲಸಗಳಿಂದ ಬೆಂಗಳೂರಿನಲ್ಲಿ `ಸಾಮಾಜಿಕ ಕಳಕಳಿಯ ಹೀರೋ' ಆಗಿ ಜನ ಮನ್ನಣೆ ಗಳಿಸಿದ್ದರು.
ಕೋವಿಡ್ ಸಂದರ್ಭದಲ್ಲಿ ಬಡ ನಿರ್ಗತಿಕ ಮಕ್ಕಳಿಗೂ ಸಹ ಪಾಠ ಮಾಡಿದ್ದಾರೆ. ಗಣಿತ, ಸಾಮಾನ್ಯ ಜ್ಞಾನ ಮತ್ತು ಮೌಲ್ಯಾಧಾರಿತ ಶಿಕ್ಷಣ ಹೀಗೆ ಪ್ರಮುಖವಾಗಿ ಮೂರು ವಿಷಯಗಳನ್ನು ಹೇಳಿಕೊಂಡು ಬಂದಿದ್ದಾರೆ. ಸದ್ಯ ಇವರ ಬಳಿ ಸುಮಾರು ೫೦ ಮಕ್ಕಳು ಕಲಿಯುತ್ತಿದ್ದಾರೆ.