ಎಲ್ಲಿ ಹೋಯಿತು ನಿಮ್ಮ ಭ್ರಷ್ಟಾಚಾರ ತಡೆ ನಿಲುವು
ಕಲಬುರಗಿ: 'ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಹೇರ್ ಕಟ್ಟಿಂಗ್ ಮಾಡಿಸಿಕೊಳ್ಳಲು ಹಣದ ಸಮಸ್ಯೆ ಇದ್ದರೆ ಪ್ರತಿ ತಿಂಗಳು ನಾವೇ ಹಣ ಕೊಡುತ್ತೇವೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಓರ್ವ ಶಿಕ್ಷಣ ಸಚಿವನಾಗಿ ಎಲ್ಲರಿಗೂ ಮಾದರಿಯಾಗಿರಬೇಕು. ಈ ಮಾತನ್ನ ನಾನು ಹೇಳಿಲ್ಲ. ದಾವಣಗೆರೆಯಲ್ಲಿ ಶಿಕ್ಷಕರು ಮಧು ಬಂಗಾರಪ್ಪ ಹೆರ್‌ಸ್ಟೈಲ್ ಬಗ್ಗೆ ಮಾತಾಡಿಕೊಂಡಿದ್ದಾರೆ. ಶಿಕ್ಷಕರು ಹೇಳಿರೋ ಮಾತನ್ನ ನಾನು ಮಧು ಬಂಗಾರಪ್ಪಗೆ ಹೇಳಿದ್ದೇನೆ ಎಂದರು. ಮಧು ಬಂಗಾರಪ್ಪಗೆ ಹಣದ ಸಮಸ್ಯೆ ಇದ್ರೆ ನಮ್ಮ ಯುವ ಮೋರ್ಚಾದವರಿಗೆ ತಿಂಗಳಿಗೆ ಇಂತಿಷ್ಟು ಹಣ ಕಟ್ಟಿಂಗ್ ಸಲುವಾಗಿ ನೀಡಲು ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಗೆದ್ದರೆ ಅದಕ್ಕೆ EVM ನಲ್ಲಿನ ದೋಷ ಕಾರಣ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿಕೆಗೆ ವಿಜಯೇಂದ್ರ ತಿರುಗೇಟು ನೀಡಿದರು. ಚುನಾವಣೆ ಫಲಿತಾಂಶ ಬಂದ ಮೇಲೆ ಮತ್ತೆ ಈ ಹೇಳಿಕೆ ಸಿಎಂ, ಡಿಸಿಎಂ ಪುನರ್ವತನೆ ಮಾಡುತ್ತಾರೆ ಎಂದರು. ಗ್ಯಾರಂಟಿ ಯೋಜನೆಗಳಿಂದ ನಾವು ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನ ಪಡೆಯಲಿವೆ ಅಂದುಕೊಂಡಿದ್ದಾರೆ. ಆದರೆ, ನಾಲ್ಕೈದು ದಿನದಲ್ಲಿ ಕಾಂಗ್ರೆಸ್‌ಗೆ ನಿರಾಸೆಯಾಗೋದು ಖಚಿತ ಎಂದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂಪಾಯಿ ಹಗರಣ ನಡೆದಿದೆ. ಓರ್ವ ಇಂಜಿನಿಯರ್ ಸುಸೈಡ್ ಮಾಡಿಕೊಂಡಿದ್ದಾನೆ. ಎಲ್ಲಿ ಹೋಯಿತು ನಿಮ್ಮ ಭ್ರಷ್ಟಾಚಾರ ತಡೆ ನಿಲುವು ಎಂದು ಪ್ರಶ್ನಿಸಿದ ವಿಜಯೇಂದ್ರ ಅವರು, ಭ್ರಷ್ಟಾಚಾರದ ಪಿತಾಮಹ ಯಾರೆಂದ್ರೆ ಅದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು. ಡೆತ್‌ನೋಟ್‌ನಲ್ಲಿ ಕೆಲ ಉನ್ನತ ಅಧಿಕಾರಿಗಳ ಹೆಸರು ಹೇಳಲಾಗಿದೆ. ಈ ಘಟನೆ ಸಂಬಂಧಪಟ್ಟ ಸಚಿವರನ್ನು ಮಂತ್ರಿ ಮಂಡಲದಿಂದ ಕೈಬಿಡಬೇಕು ಮತ್ತು ಸಿಟಿಂಗ್ ಹೈಕೋರ್ಟ್ ಜಡ್ಜ್‌ರಿಂದ ಉನ್ನತ ಮಟ್ಟದ ತನಿಖೆ ನಡೆಸಲೇಬೇಕು. ಮಂತ್ರಿ ನಾಗೇಂದ್ರರನ್ನ ಕೈಬಿಡದಿದ್ದರೆ ರಾಜ್ಯದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು.ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಪಾಪದ ಕೂಸು ಎಂದರು.