ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಒಕ್ಕಲಿಗರಿಗೆ ಸಕ್ಕರೆ, ಲಿಂಗಾಯತರಿಗಿಲ್ಲ ಅಕ್ಕರೆ

04:00 AM Jun 10, 2024 IST | Samyukta Karnataka

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದಿಂದ ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾದ ೧೭ ಸಂಸದರ ಪೈಕಿ ಮೂವರು ಸಂಸದರಿಗೆ ಸಚಿವ ಸ್ಥಾನ ದೊರೆತಿದೆ. ನಿರೀಕ್ಷೆಯಂತೆ ಧಾರವಾಡ ಸಂಸದ, ಬ್ರಾಹ್ಮಣ ಸಮುದಾಯದ ಪ್ರಲ್ಹಾದ್ ಜೋಶಿ ಮತ್ತೊಮ್ಮೆ ಸಂಪುಟ ದರ್ಜೆಯ ಸಚಿವರಾದರೆ, ತುಮಕೂರು ಕ್ಷೇತ್ರದ ಲಿಂಗಾಯತ ಸಮುದಾಯದ ಸಂಸದ ವಿ.ಸೋಮಣ್ಣ ಅಚ್ಚರಿಯ ರೀತಿಯಲ್ಲಿ ಕೇಂದ್ರ ಸಂಪುಟದ ರಾಜ್ಯ ಸಚಿವರಾಗಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದೆ, ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸದಸ್ಯೆಯಾಗಿದ್ದಾರೆ.
ಈ ಮೂಲಕ ಬಿಜೆಪಿ ವರಿಷ್ಠರು ಹಲವು ಸಂದೇಶಗಳನ್ನು ರವಾನಿಸಿದ್ದು, ಬ್ರಾಹ್ಮಣ, ಲಿಂಗಾಯತ ಸಮುದಾಯಕ್ಕೆ ತಲಾ ಒಂದು ಹಾಗೂ ಒಕ್ಕಲಿಗ ಸಮುದಾಯಕ್ಕೆ ಎರಡು ಸ್ಥಾನಗಳನ್ನು ನೀಡಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಉತ್ತರ ಕರ್ನಾಟಕದ ಲಿಂಗಾಯತ ನಾಯಕರಿಗೆ ಸಂಪುಟದಲ್ಲಿ ಸ್ಥಾನ ನೀಡಿಲ್ಲ.
ಅನಂತ್‌ಕುಮಾರ್ ಅವರ ನಿಧನಾನಂತರ ಆ ಸ್ಥಾನವನ್ನು ಸಮರ್ಥವಾಗಿ ತುಂಬಿದ ಧಾರವಾಡ ಸಂಸದ ಪ್ರಲ್ಹಾದ್ ಜೋಶಿ ವರಿಷ್ಠರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂದೆಂದಿಗಿಂತ ಈ ಬಾರಿ ಸಾಕಷ್ಟು ವಿರೋಧ ಎದುರಿಸಿದರೂ ಕಡಿಮೆ ಅಂತರದಿಂದ ಜಯ ಗಳಿಸಿದಾಗ ಈ ಬಾರಿ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವುದು ಅನುಮಾನ ಎಂಬಂತಹ ಸ್ಥಿತಿ ಇತ್ತು. ಆದರೆ ಆರ್‌ಎಸ್‌ಎಸ್ ಬೆಂಬಲ, ಪಕ್ಷ ನಿಷ್ಠೆ, ಸಂಸದೀಯ ವ್ಯವಹಾರ ಮತ್ತು ಗಣಿ ಹಾಗೂ ಕಲ್ಲಿದ್ದಲು ಸಚಿವರಾಗಿ ಜೋಶಿ ಅನುಸರಿಸಿದ ದಕ್ಷತೆಯನ್ನು ಪರಿಗಣಿಸಿ ವರಿಷ್ಠರು ಮತ್ತೊಮ್ಮೆ ಮಣೆ ಹಾಕಿದ್ದಾರೆ.
ಒಕ್ಕಲಿಗ ಸಮುದಾಯದ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಕೈಹಿಡಿದ ಪರಿಣಾಮ ಎನ್‌ಡಿಎ ಭಾಗವಾದ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡಿದ್ದಾರೆ. ಹೀಗಾಗಿ ಈ ಬಾರಿ ಶೋಭಾ ಕರಂದ್ಲಾಜೆ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವ ಬಗೆಗೆ ರಾಜ್ಯ ಬಿಜೆಪಿಯಲ್ಲೇ ಕೆಲವರಿಗೆ ಅನುಮಾನ ಇತ್ತು. ಆದರೆ ಒಕ್ಕಲಿಗ ಸಮುದಾಯದ ಮತಗಳ ಕ್ರೋಢೀಕರಣದಿಂದ ಎನ್‌ಡಿಎ ಒಕ್ಕೂಟಕ್ಕೆ ರಾಜ್ಯದಲ್ಲಿ ದೊರೆತ ಬೆಂಬಲ ಮತ್ತು ಶೋಭಾ ಕರಂದ್ಲಾಜೆ ಅವರು ಕಳೆದ ಬಾರಿ ಮೋದಿ ಕ್ಯಾಬಿನೆಟ್‌ನಲ್ಲಿ ಕೆಲಸ ನಿರ್ವಹಿಸಿದ ರೀತಿ ಗಮನಿಸಿ, ವರಿಷ್ಠರು ಮತ್ತೊಮ್ಮೆ ಮಣೆ ಹಾಕಿದ್ದಾರೆ. ಅಲ್ಲದೇ ಈ ಬಾರಿ ಹಿಂದಿಗಿಂತ ಪ್ರಮುಖ ಖಾತೆ ಸಿಗುವ ಲಕ್ಷಣಗಳು ಗೋಚರಿಸಿವೆ.
ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರು ಸಂಪುಟಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಇಬ್ಬರೂ ಮಾತ್ರವಲ್ಲದೇ ಉತ್ತರ ಕರ್ನಾಟಕದ ಯಾವ ಲಿಂಗಾಯತರಿಗೂ ಸಂಪುಟದಲ್ಲಿ ಸ್ಥಾನ ನೀಡಿಲ್ಲ. ಕಳೆದ ಎರಡು ದಶಕಗಳಿಂದ ಬಿಜೆಪಿಗೆ ಉತ್ತರ ಕರ್ನಾಟಕದ ಲಿಂಗಾಯತರು ನೀಡುತ್ತಿದ್ದ ಬೆಂಬಲ ಈ ಬಾರಿ ಕೆಲಮಟ್ಟಿಗೆ ಕಡಿಮೆಯಾಗಿದೆ ಎಂಬುದನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಐದೂ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದೆ. ಲಿಂಗಾಯತ ಪ್ರಾಬಲ್ಯ ಇರುವ ಮುಂಬೈ ಕರ್ನಾಟಕದಲ್ಲಿ ಒಂದು ಹಾಗೂ ಮಧ್ಯ ಕರ್ನಾಟಕದಲ್ಲಿ ಒಂದು ಸ್ಥಾನ ಖೋತಾ ಆಗಿದೆ.
ಹಾಗೆ ನೋಡಿದರೆ ಲಿಂಗಾಯತ ಸಮುದಾಯದಿಂದ ಸಂಪುಟ ದರ್ಜೆ ಸಚಿವ ಸ್ಥಾನವನ್ನು ಬಿಜೆಪಿ ಮತ್ತು ಎನ್‌ಡಿಎ ಸರಕಾರದಲ್ಲಿ ಒಮ್ಮೆಯೂ ನೀಡಿಲ್ಲ. ೧೯೯೬ರಿಂದ ಈವರೆಗೆ ರಾಜ್ಯದಿಂದ ಆಯ್ಕೆಯಾದ ಬಿಜೆಪಿಯ ಲಿಂಗಾಯತ ಸಂಸದರಿಗೆ ಸಂಪುಟ ದರ್ಜೆ ಈವರೆಗೆ ಸಿಕ್ಕಿಲ್ಲ. ಬಸನಗೌಡ ಪಾಟೀಲ್ ಯತ್ನಾಳರಿಂದ ಹಿಡಿದು ಭಗವಂತ ಖೂಬಾವರೆಗೆ ಕೇಂದ್ರ ಸಂಪುಟದಲ್ಲಿ ರಾಜ್ಯ ಸಚಿವ ಹುದ್ದೆ ಮಾತ್ರ ಸಿಕ್ಕಿದೆ. ಈ ಬಾರಿಯೂ ಆ ಕೊರತೆ ನೀಗಿಸುವ ಬಗೆಗೆ ವರಿಷ್ಠರು ಗಮನಹರಿಸಿಲ್ಲ. ಈ ಮೂಲಕ ಲಿಂಗಾಯತ ಹಿಡಿತದಿಂದ ಪಕ್ಷವನ್ನು ಹೊರತಂದು ಮತ್ತಷ್ಟು ಪ್ರಬಲ ಸಮುದಾಯಗಳು ಪಕ್ಷದ ಆಧಾರವಾಗಿಸುವ ಪ್ರಯತ್ನವನ್ನು ವರಿಷ್ಠರು ಆರಂಭಿಸಿದಂತಿದೆ.

Next Article