For the best experience, open
https://m.samyuktakarnataka.in
on your mobile browser.

ಕನ್ನಡ ಚಟುವಟಿಕೆಗೆ ಸರ್ಕಾರ ಅಸಡ್ಡೆ ಸಲ್ಲದು

02:09 PM Mar 03, 2024 IST | Samyukta Karnataka
ಕನ್ನಡ ಚಟುವಟಿಕೆಗೆ ಸರ್ಕಾರ ಅಸಡ್ಡೆ ಸಲ್ಲದು

ಕನ್ನಡ ಹೋರಾಟಗಾರರಿಂದಲೇ ಕನ್ನಡ ಉಳಿವು, ಕನ್ನಡ ಫಲಕ ಶೇ 100 ಇರಲಿ

ಹುಬ್ಬಳ್ಳಿ : ಜಿಲ್ಲಾ, ತಾಲೂಕು ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸೇರಿದಂತೆ ಕನ್ನಡದ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ದೊರಕಿಸಬೇಕು. ಯಾವುದೇ ರೀತಿ ಅಸಡ್ಡೆ ಮಾಡಬಾರದು ಎಂದು ಹಿರಿಯ ಪತ್ರಕರ್ತ, ಸಾಹಿತಿ ಡಾ.ಸರಜೂ ಕಾಟ್ಕರ್ ಹಕ್ಕೊತ್ತಾಯ ಮಾಡಿದರು.
ಹುಬ್ಬಳ್ಳಿ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಜಿಲ್ಲೆಗೆ ಸಾಹಿತ್ಯ ಸಮ್ಮೇಳನ ನಡೆಸಲು ಕೇವಲ 5 ಲಕ್ಷ ಅನುದಾನ ನಿಗದಿ ಯಾತಕ್ಕೂ ಸಾಲದು. ಜಿಲ್ಲಾ ಕಸಾಪ ಸಮ್ಮೇಳನಕ್ಕೆ 5 ಲಕ್ಷ, ತಾಲೂಕು ಕಸಾಪ ಸಮ್ಮೇಳನಕ್ಕೆ 2 ಲಕ್ಷ ಒದಗಿಸಬೇಕು ಎಂದು ಆಗ್ರಹಿಸಿದರು.
ಅನುದಾನ ಇಲ್ಲದೇ ಇರುವುದರಿಂದ ರಾಜ್ಯದಲ್ಲಿ ಎಲ್ಲೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿಲ್ಲ. ಇದು ಅತ್ಯಂತ ಬೇಸರದ ಸಂಗತಿಯಾಗಿದೆ. ಕನ್ನಡಿಗರ ಹಣ ಕನ್ನಡ ನಾಡು ನುಡಿ ಕಾರ್ಯಕ್ಕೆ ಒದಗಿಸದೇ ಇದ್ದರೆ ಹೇಗೆ? ಎಂದು ಪ್ರಶ್ನಿಸಿದರು.
ಜಿಲ್ಲಾ ಸಾಹಿತ್ಯ ಘಟಕಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕು. ಮುಖ್ಯಮಂತ್ರಿಗಳಿಗೆ ಕನ್ನಡ ಸ್ಥಿತಿ ಏನು ಎಂಬುದು ಗೊತ್ತಿದೆ. ಖಂಡಿತ ಅನುದಾನ ದೊರಕಿಸುತ್ತಾರೆ ಎಂದು ಹೇಳಿದರು.

ಕನ್ನಡ ಹೋರಾಟಗಾರರಿಂದಲೇ ಕನ್ನಡ ಉಳಿವು : ಕನ್ನಡ ಉಳಿಸಿ ಬೆಳೆಸುವವರು ಬರಹಗಾರರಲ್ಲ. ಕನ್ನಡ ಅಭಿಮಾನಿಗಳು, ಹೋರಾಟಗಾರರು. ಬರಹಗಾರರು, ಕವಿಗಳು ಕೃತಿ ರಚನೆ ಮಾಡಬಹುದಷ್ಟೇ. ಆದರೆ ಭಾಷೆ ಉಳಿಸಿ, ಅಭಿಮಾನದಿಂದ ಬೆಳೆಸುವ ಕಾರ್ಯ ಹೋರಾಟಗಾರರೇ. ಹೀಗಾಗಿ ಕನ್ನಡ ಹೋರಾಟಗಾರರಿಂದಲೇ ಕನ್ನಡ ಉಳಿವು ಎಂದು ಪ್ರತಿಪಾದಿಸಿದರು.

ಕನ್ನಡ ಫಲಕ ಶೇ 100 ಇರಲಿ : ಬೆಂಗಳೂರಿನಲ್ಲಿ ಅಂಗಡಿ ಫಲಕಗಳು ಶೇ 60 ಕನ್ನಡ ಭಾಷೆಯಲ್ಲಿರಬೇಕು ಎಂಬ ಷರತ್ತು ಸಲ್ಲದು. ಅದು ಶೇ 100 ಆಗಲೇಬೇಕು. ಕನ್ನಡ ಭಾಷೆ ವಿಷಯದಲ್ಲಿ ಶೇಕಡಾ ಲೆಕ್ಕಾಚಾರ ಯಾಕೆ ? ಇಂತಹ ಧೋರಣೆ ಸರ್ಕಾರ ಬಿಡಬೇಕು ಎಂದು ಸಲಹೆ ನೀಡಿದರು.
ಮೇಯರ್ ವೀಣಾ ಬರದ್ವಾಡ, ಸಮ್ಮೇಳನಾದ್ಯಕ್ಷ ವೆಂಕಟೇಶ ಮರೇಗುದ್ದಿ, ಜಿಲ್ಲಾ ಕಸಾಪ ಅಧ್ಯಕ್ಣ ಲಿಂಗರಾಜ ಅಂಗಡಿ, ತಾಲೂಕು ಕಸಾಪ ಅಧ್ಯಕ್ಷ ವಿರೂಪಾಕ್ಣ ಕಟ್ಟಿಮನಿ, ಪ್ರೊ.ಕೆ.ಎಸ್ ಕೌಜಲಗಿ ಹಾಗೂ ಇತರರಿದ್ದರು.