For the best experience, open
https://m.samyuktakarnataka.in
on your mobile browser.

ಕಾಂಗ್ರೆಸ್‌ನ ಮೊದಲ ಪಟ್ಟಿ ಮುಂದಿನ ವಾರ

04:30 AM Mar 03, 2024 IST | Samyukta Karnataka
ಕಾಂಗ್ರೆಸ್‌ನ ಮೊದಲ ಪಟ್ಟಿ ಮುಂದಿನ ವಾರ

ನವದೆಹಲಿ: ಲೋಕಸಭಾ ಚುನಾ­ವಣೆಗಾಗಿ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಮುಂದಿನ ವಾರ ಅಂತಿಮಗೊಳ್ಳಲಿದ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿ ಸಭೆಗಳನ್ನು ಕಾಂಗ್ರೆಸ್ ಪಕ್ಷ ನಡೆಸಲಿದೆ. ಮೊದಲ ಪಟ್ಟಿಯ ಜೊತೆಗೆ ಚುನಾವಣಾ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
ಮುಂದಿನ ಕಾರ್ಯಕಾರಿಣಿ ಸಭೆಯಲ್ಲಿ ಪಟ್ಟಿ ಮತ್ತು ಚುನಾವಣಾ ಪ್ರಣಾಳಿಕೆ ಬಗ್ಗೆ ವಿವರಿಸಿ ಅನುಮತಿ ಪಡೆಯಲಾಗುವುದು. ಬಹುತೇಕ ರಾಜ್ಯಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪರಿಶೀಲನಾ ಈಗಾಗಲೇ ಅಂತಿಮಗೊಳಿಸಿದೆ.
ಈ ಪಟ್ಟಿಯ ಬಗ್ಗೆ ಚರ್ಚಿಸುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ, ಪಂಜಾಬ್, ಚಂಡೀಗಢ, ಉತ್ತರಾ­ಖಂಡ, ಹರ್ಯಾಣ ಮೊದಲಾದ ರಾಜ್ಯಗಳ ಸಮಿತಿಗಳೊಂದಿಗೆ ಅಂತಿಮ ಸಭೆ ನಡೆಸಿ ಪಟ್ಟಿಗೆ ಅಂತಿಮ ರೂಪ ನೀಡಲಾಗುವುದು. ಮೊದಲ ಪಟ್ಟಿಯಲ್ಲಿ ನೂರು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗು­ವುದು. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.