ಕಾಂಗ್ರೆಸ್ ಬುಡಮೇಲು, ಬಿಜೆಪಿ ದೇದೀಪ್ಯಮಾನ
ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ಕರ್ನಾಟಕ ಏಕೀಕರಣಕ್ಕೆ ಅರ್ಧ ಶತಮಾನ ಉರುಳಿದ ಸಂದರ್ಭದಲ್ಲಿ ಕರ್ನಾಟಕದ ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಲೋಕಸಭೆ ಚುನಾವಣೆಯೂ ಎದುರಾಗಿದೆ. ಕಳೆದ ೫೦ ವರ್ಷಗಳಲ್ಲಿ ೧೧ ಬಾರಿ ಲೋಕಸಭೆಗೂ, ೧೨ ಬಾರಿ ವಿಧಾನಸಭೆಗೂ ಚುನಾವಣೆಗಳು ನಡೆದಿವೆ. ಈ ಅವಧಿಯಲ್ಲಿ ಜನಸಂಘ ಬಿಜೆಪಿಯಾಗಿ ಪರಿವರ್ತನೆಗೊಂಡು ಕ್ರಮೇಣ ದೇದೀಪ್ಯಮಾನವಾಗಿ ಬೆಳಗುತ್ತ ಬಂದಿದ್ದರೆ, ಕಾಂಗ್ರೆಸ್ ಕ್ರಮೇಣ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತ ಸಾಗಿದೆ. ದೇಶದಲ್ಲಿ ಜನತಾ ಚಳವಳಿ ಉತ್ತುಂಗ ಕಾಲದಲ್ಲಿ ಕರ್ನಾಟಕವೇ ಮಹತ್ವದ ಪಾತ್ರ ವಹಿಸಿದರೂ ಇದೀಗ ರಾಜ್ಯದಲ್ಲಿ ಬಿಜೆಪಿ ಜತೆಗೆ ಅಧಿಕೃತವಾಗಿ ಸಖ್ಯ ಬೆಳೆಸಿದೆ.
ಕಳೆದ ೫೦ ವರ್ಷಗಳ ಅವಧಿಯಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಹೆಚ್ಚೂ ಕಡಿಮೆ ಒಂದು ವರ್ಷದ ಅವಧಿಯಲ್ಲಿ ಪ್ರತ್ಯೇಕವಾಗಿ ಚುನಾವಣೆಗಳು ನಡೆದಿವೆ. ಲೋಕಸಭೆ ಮತ್ತು ವಿಧಾನಸಭೆಗೆ ೨೦೦೪ ಹೊರತುಪಡಿಸಿ ಉಳಿದಂತೆ ಏಕಕಾಲಕ್ಕೆ ಚುನಾವಣೆ ನಡೆದಿಲ್ಲ.
ಪ್ರತಿಸಲ ಮೊದಲು ಲೋಕಸಭೆಗೂ ನಂತರದಲ್ಲಿ ವಿಧಾನಸಭೆಗೂ ಮತದಾನ ನಡೆದಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯ ನಂತರ ನಡೆದ ಐದು ಲೋಕಸಭಾ ಚುನಾವಣೆಗಳಲ್ಲಿ ನಿರಂತರವಾಗಿ ಕಾಂಗ್ರೆಸ್ ಏಕಚಕ್ರಾಧಿಪತಿಯಂತೆ ಗೆಲ್ಲುತ್ತ ಬಂದಿದೆ. ೧೯೭೭ರಿಂದ ೧೯೯೬ರವರೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ೨೮ ಸ್ಥಾನಗಳಲ್ಲಿ ಸರಾಸರಿ ೨೬ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುತ್ತ ಬಂದಿದೆ. ಆದರೆ ಇದೇ ಅವಧಿಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುಂಡಿದೆ. ಈ ವೇಳೆ ಜನತಾಪರಿವಾರದ ಜನತಾ ಪಕ್ಷ, ಜನತಾದಳ, ಸಂಯುಕ್ತ ಜನತಾದಳ ಪಕ್ಷಗಳು ಪರ್ಯಾಯ ಸರಕಾರ ರಚನೆ ಮಾಡಿವೆ. ಇದೇ ಅವಧಿಯಲ್ಲಿ ಜನಸಂಘವು ಭಾರತೀಯ ಜನತಾ ಪಾರ್ಟಿಯಾಗಿ ಪರಿವರ್ತನೆಗೊಂಡು ಕಾಂಗ್ರೆಸ್ಗೆ ಪ್ರತಿಯಾಗಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ.
ರಾಜ್ಯದ ಮತದಾರ ೯೦ರ ದಶಕದವರೆಗೆ ಕಾಂಗ್ರೆಸ್ ಪಕ್ಷದ ಮೇಲೆ ಹೊಂದಿದ್ದ ವಿಶ್ವಾಸ ಕ್ರಮೇಣ ಕುಗ್ಗುತ್ತ ಬಂದಿದೆ ಎಂಬುದು ಫಲಿತಾಂಶದ ಅಂಕಿ-ಅಂಶಗಳಿಂದ ವೇದ್ಯವಾಗುತ್ತದೆ. ವಿಶೇಷವಾಗಿ ಲೋಕಸಭೆಗೆ ಕಳೆದ ಎರಡು ದಶಕಗಳಲ್ಲಿ ನಡೆದಿರುವ ಚುನಾವಣೆಯಲ್ಲಿ ರಾಜ್ಯದ ೨೮ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಒಮ್ಮೆಯೂ ಎರಡಂಕಿ ಸ್ಥಾನಗಳಲ್ಲಿ ಜಯ ಗಳಿಸಿಲ್ಲ. ೧೯೯೬ರಲ್ಲಿ ಜನತಾದಳ ಅತಿ ಹೆಚ್ಚು ಸ್ಥಾನ ಗಳಿಸಿದ ನಂತರ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತ ಬಂದಿದೆ.
ರಾಜ್ಯದ ಮತದಾರನ ಲಾಜಿಕ್ ಎಷ್ಟೊಂದು ವಿಚಿತ್ರವಾಗಿದೆ ಎಂದರೆ, ೧೯೯೯ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತ ಗಳಿಸಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಲೋಕಸಭೆಯಲ್ಲಿ ಕೇಸರಿ ಪಕ್ಷದ ಪ್ರಭಾವ ಹೆಚ್ಚುತ್ತ ಸಾಗಿತು. ೨೦೦೪ ಹಾಗೂ ೨೦೦೯ರಲ್ಲಿ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಸ್ತಿತ್ವಕ್ಕೆ ಬಂದರೂ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಕ್ರಮವಾಗಿ ೮ ಹಾಗೂ ೬ ಸ್ಥಾನಗಳನ್ನು ಮಾತ್ರ ಗಳಿಸುವಲ್ಲಿ ಶಕ್ಯವಾಗಿದೆ.
ಕೇಂದ್ರದಲ್ಲಿ ಬಿಜೆಪಿ ಸರಕಾರ ನಡೆಸಲು ಹೆಚ್ಚು ಯೋಗ್ಯ ಎಂಬ ಮನಸ್ಥಿತಿ ರಾಜ್ಯದ ಮತದಾರ ೨೦೦೪ರಿಂದಲೂ ತೀರ್ಪು ನೀಡುತ್ತ ಬಂದಿದ್ದಾನೆ. ಗಮನಾರ್ಹ ಸಂಗತಿ ಎಂದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಗೆಗೆ ತೋರುವ ವಿಶ್ವಾಸವನ್ನು ರಾಜ್ಯದ ಮತದಾರ ಈವರೆಗೂ ವಿಧಾನಸಭೆ ಚುನಾವಣೆಯಲ್ಲಿ ವ್ಯಕ್ತಪಡಿಸಿಲ್ಲ. ಅಂದರೆ, ೨೨೪ ಸದಸ್ಯ ಬಲ ಹೊಂದಿರುವ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಈತನಕ ಒಮ್ಮೆಯೂ ೧೧೩ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ೨೦೦೮ರಲ್ಲಿ ನಡೆದ ಚುನಾವಣೆಯಲ್ಲಿ ಗಳಿಸಿದ ೧೧೦ ಸ್ಥಾನಗಳೇ ಈವರೆಗಿನ ಅತಿ ಹೆಚ್ಚು ಸಾಧನೆ. ಆದರೆ ವಾಮಮಾರ್ಗದಿಂದ ಅಂದರೆ, ಆಪರೇಶನ್ ಕಮಲ, ಬಾಹ್ಯಬೆಂಬಲದ ಸಹಾಯದಿಂದ ಸರಕಾರ ರಚನೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ೨೦೦೮ರಿಂದ ೨೦೧೩ರ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳು ಹಾಗೂ ೨೦೧೯ರಿಂದ ೨೦೨೩ರವರೆಗೆ ಇಬ್ಬರು ಮುಖ್ಯಮಂತ್ರಿಗಳ ಸಹಿತ ಬಿಜೆಪಿ ಸರಕಾರ ನಡೆಸಿದೆ.
ಮತ್ತೊಂದೆಡೆ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಸದಸ್ಯ ಬಲ ಕುಗ್ಗುತ್ತ ಬಂದಿದ್ದರೂ ರಾಜ್ಯದಲ್ಲಿ ಮಾತ್ರ ಪ್ರಚಂಡ ಬಹುಮತದ ಸರಕಾರ ರಚನೆ ಮಾಡಿದೆ. ೧೯೯೯, ೨೦೧೩, ೨೦೨೩ರಲ್ಲಿ ಸ್ವಂತ ಬಲದ ಮೇಲೆ ಸರಕಾರ ರಚಿಸಿದ್ದು, ೨೦೦೪ ಮತ್ತು ೨೦೧೮ರಲ್ಲಿ ಜೆಡಿಎಸ್ ಸಖ್ಯದೊಂದಿಗೆ ಸಮ್ಮಿಶ್ರ ಸರಕಾರ ನಡೆಸಿದೆ. ಕಳೆದ ೫೦ ವರ್ಷಗಳ ಅವಧಿಯಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಒಂದು ಅವಧಿಯ ವಿರಾಮದ ನಂತರ ಮತ್ತೊಂದು ಅವಧಿಗೆ ರಾಜ್ಯದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಸತತ ಹಿನ್ನಡೆ ಅನುಭವಿಸುತ್ತಲೇ ಬಂದಿದೆ.
ತುರ್ತು ಪರಿಸ್ಥಿತಿಯ ನಂತರ ದೇಶದಲ್ಲಿ ಉಚ್ಛಾಯ ಸ್ಥಿತಿ ತಲುಪಿದ ಜನತಾ ಚಳವಳಿಯು ರಾಜ್ಯದಲ್ಲಿ ಕೂಡ ಪರ್ಯಾಯ ರಾಜಕೀಯ ಶಕ್ತಿಯನ್ನೇ ಉಂಟು ಮಾಡಿತು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಪಯಾರ್ಯವಾಗಿ ವಿಧಾನಸಭೆಯಲ್ಲಿ ಗೆಲ್ಲುವ ಮೂಲಕ ಸರಕಾರ ರಚನೆ ಮಾಡಿತಾದರೂ ಲೋಕಸಭೆ ಚುನಾವಣೆಯಲ್ಲಿ ಮಾತ್ರ ೧೯೯೬ ಹೊರತುಪಡಿಸಿ (೧೬ ಸ್ಥಾನ) ಗಳಿಸಿದ್ದನ್ನು ಬಿಟ್ಟರೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿಯೇ ಇದೇ ಮೊದಲ ಬಾರಿಗೆ ಚುನಾವಣೆ ಪೂರ್ಣ ಎನ್ಡಿಎ ಮೈತ್ರಿಕೂಟದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ೨ರಿಂದ ೩ ಸ್ಥಾನಗಳಿಗೆ ಸೀಮಿತವಾಗಿದೆ.
ಹೀಗೆ ರಾಜ್ಯದ ಮತದಾರ ತನ್ನ ವಿಧೇಯತೆಯನ್ನು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಬದಲಾಯಿಸುತ್ತ ಬಂದಿದ್ದು, ಯಾವುದೇ ಒಂದು ರಾಜಕೀಯ ಪಕ್ಷದ ಮೇಲೆ ತನ್ನ ವಿಶ್ವಾಸವನ್ನು ತೋರದೇ ಕಾಲಕಾಲಕ್ಕೆ ಸೂಕ್ತ ಬದಲಾವಣೆ ಹಾಗೂ ರಾಜಕೀಯ ಪಾಠಗಳನ್ನು ಕಲಿಸುತ್ತಲೇ ಬಂದಿದ್ದಾನೆ.