ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ನೃತ್ಯಾಲಯ ತಂಡದ ವಿಶೇಷ ಭರತ ನಾಟ್ಯ
ಮೈಸೂರು: ಭಾರತೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟವು ಪ್ರಸಿದ್ಧ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಹಮ್ಮಿಕೊಂಡಿರುವ ವಾರಾಂತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ನೃತ್ಯಾಲಯ ಟ್ರಸ್ಟ್ ಮೈಸೂರು ತಂಡದವರು ಶನಿವಾರ (ಏ. 27ರಂದು) ವಿಶೇಷ ನೃತ್ಯ ಪ್ರದರ್ಶನ ಮಾಡಲು ಆಯ್ಕೆಯಾಗಿದ್ದಾರೆ.
ಕುಕ್ಕೆ ಸನ್ನಿಧಿಯಲ್ಲಿರುವ ಧರ್ಮ ಸಮ್ಮೇಳನ ಮಂಟಪದಲ್ಲಿ ಸಂಜೆ 5ಕ್ಕೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ನೃತ್ಯಾಲಯ ಟ್ರಸ್ಟ್‌ನ ನಿರ್ದೇಶಕಿ ಮತ್ತು ಭರತನಾಟ್ಯ ರಂಗದ ಹಿರಿಯ ವಿದುಷಿ ಡಾ. ತುಳಸಿ ರಾಮಚಂದ್ರ ನೇತೃತ್ವದ ಹಿರಿಯ ವಿದ್ಯಾರ್ಥಿಗಳ ತಂಡ
ನರ್ತನ ಸಮರ್ಪಣೆ ಮಾಡಲಿರುವುದು ವಿಶೇಷ. ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟ ಹಮ್ಮಿಕೊಂಡಿರುವ ವಾರಾಂತ್ಯ ಸಾಂಸ್ಕೃತಿಕ ಸರಣಿಯಲ್ಲಿ ಇದು 104 ನೇ ಕಾರ್ಯಕ್ರಮವಾಗಿದ್ದು, ಮೈಸೂರಿನ ಕಲಾವಿದರಿಗೆ ದೊರೆತ ವಿಶೇಷ ಮನ್ನಣೆಯಾಗಿದೆ.
ಮಾಧುರ್ಯ ಮಾರ್ಗ ಶೈಲಿ: 13-14ನೇ ಶತಮಾನದಲ್ಲಿ ಪ್ರಖ್ಯಾತಿ ಪಡೆದಿದ್ದ ‘ಮಾಧುರ್ಯ ಮಾರ್ಗ’ ಶೈಲಿಯಲ್ಲಿ ಸ್ವರ ಮಂಥನ, ಗೌಂಡಲಿ ಪ್ರಕಾರಗಳಲ್ಲಿ ‘ ತುಳಸೀಪ್ರಿಯ’ ಅಂಕಿತದ ನನ್ನ ರಚನೆಯ ಕೃತಿಗಳನ್ನೇ ಆಧರಿಸಿ, ವಿಶೇಷ ನೃತ್ಯ ಸಂಯೋಜಿಸಿದ್ದೇನೆ ಎಂದು ಡಾ. ತುಳಸೀ ರಾಮಚಂದ್ರ ತಿಳಿಸಿದ್ದಾರೆ. 13 ಹಿರಿಯ ವಿದ್ಯಾರ್ಥಿಗಳ ತಂಡದೊಂದಿಗೆ ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಿದ್ದೇನೆ. ಇದರೊಂದಿಗೆ ಬಿ.ಆರ್. ಛಾಯಾ ಗಾಯನದ ‘ಕುಕ್ಕೆ ಸುಬ್ರಹ್ಮಣ್ಯನ ನೋಡಿ ಶಿರಬಾಗಿ’ ಮತ್ತು ಡಾ. ರಾಜ್ ಕುಮಾರ್ ಕಂಠಸಿರಿಯ ‘ಕನ್ನಡ ನಾಡಿನ ಪುಣ್ಯ’ ಹಾಡುಗಳಿಗೂ ನಮ್ಮ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ರಂಜಿಸಲಿದ್ದಾರೆ ಎಂದು ಡಾ. ತುಳಸೀ ರಾಮಚಂದ್ರ ಹೇಳಿದ್ದಾರೆ.