For the best experience, open
https://m.samyuktakarnataka.in
on your mobile browser.

ಕೂಲಿ ಮಾಡಿದ ಹಣದಿಂದ ವಿದ್ಯಾರ್ಥಿಗಳಿಗೆ ಸೈಕಲ್

04:00 AM Mar 03, 2024 IST | Samyukta Karnataka
ಕೂಲಿ ಮಾಡಿದ ಹಣದಿಂದ ವಿದ್ಯಾರ್ಥಿಗಳಿಗೆ ಸೈಕಲ್

ಸೂಗುರೇಶ ಗುಡಿ
ಅರಕೇರಾ(ರಾಯಚೂರು): ದುಶ್ಚಟಗಳಿಂದ ಹಾಳಾಗುತ್ತಿರುವ ಯುವಜನತೆಯ ಮಧ್ಯದಲ್ಲೊಬ್ಬ ಸರಕಾರದಿಂದಾಗದ ಕೆಲಸವನ್ನು ತಾನೊಬ್ಬನೇ ಮಾಡಿ ಜಿಲ್ಲೆಗೆ ಮಾದರಿಯಾಗಿದ್ದಾನೆ. ಆತನ ಹೆಸರು ಆಂಜನೇಯ ಮಲ್ಕಂದಿನ್ನಿ.
ರಾಯಚೂರು ಜಿಲ್ಲೆಯ ಅರಕೇರಾ ತಾಲ್ಲೂಕಿನ ಮಲ್ಕಂದಿನ್ನಿ ಈತನ ಹುಟ್ಟೂರು. ಇಲ್ಲಿನ ಮಕ್ಕಳು ವಿದ್ಯಾಭ್ಯಾಸ ಮಾಡಲು ಪಡುವ ಕಷ್ಟವನ್ನರಿತು ಅವರಿಗೆ ತಾನು ಸಹಾಯ ಮಾಡಬೇಕೆನ್ನುವ ಹಂಬಲದಿಂದ ಸ್ವತಃ ಕೂಲಿ ಮಾಡಿ ಬಂದ ಹಣದಿಂದ ೬೦ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ೧೧ ಜನ ವಿದ್ಯಾರ್ಥಿಗಳಿಗೆ ಸೈಕಲ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಮಲ್ಕಂದಿನ್ನಿ ಊರಿನಿಂದ ಹೇಮನೂರು ಸರಕಾರಿ ಪ್ರೌಢಶಾಲೆಗೆ ದಿನಾಲು ೧೧ ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಆಂಜನೇಯ, ಇವರು ಪ್ರತಿನಿತ್ಯ ಶಾಲೆಗೆ ಹೋಗಬೇಕು, ಅನಾನುಕೂಲ ಎಂದು ಹೊರಗುಳಿಯಬಾರದು ಎಂಬ ಸದುದ್ದೇಶ ಮತ್ತು ಕಾಳಜಿಯಿಂದ ತಾನು ಕೂಲಿ ಕಾರ್ಮಿಕನಾಗಿದ್ದರೂ, ಕೂಡಿಟ್ಟ ೬೦ ಸಾವಿರ ರೂಪಾಯಿಗಳಿಂದ ೧೧ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸೈಕಲ್‌ಗಳನ್ನು ಕೊಡಿಸಿದ್ದಾನೆ.
ಆಂಜನೇಯನ ಉತ್ತಮ ಕಾರ್ಯಕ್ಕೆ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಸುಖದೇವ, ಕ್ಷೇತ್ರ ಸಮನ್ವಯಧಿಕಾರಿ ಶಿವರಾಜ ಪೂಜಾರಿ, ಮುಖ್ಯಗುರು ಬಸವರಾಜ, ಗ್ರಾಮದ ಮುಖಂಡರಾದ ವೆಂಕಟೇಶ ಶಾಖೆ, ಸೂಗಪ್ಪಗೌಡ ಅವರು ಅಭಿನಂದಿಸಿದ್ದಾರೆ.
ಪ್ರತಿನಿತ್ಯ ಕಷ್ಟಪಟ್ಟು ಶಾಲೆಗೆ ಹೋಗುತ್ತಿದ್ದ ಮಕ್ಕಳು ಈಗ ಸಂತೋಷದಿಂದ ಶಾಲೆಗೆ ಹೋಗುವಂತಾಗಿದೆ. ಇಂತಹ ಮಕ್ಕಳು ರಾಜ್ಯದಲ್ಲಿ ಲಕ್ಷಾಂತರ ಇದ್ದು, ಸರಕಾರ ರೂಪಿಸಿದ ಸೈಕಲ್ ವಿತರಣೆಯ ಯೋಜನೆ ನಿಲ್ಲಿಸಿರುವದು ತುಂಬಾ ದುರದೃಷ್ಟಕರ. ಮಕ್ಕಳಿಗೆ ಮೊದಲಿನಂತೆ ಸೈಕಲ್‌ಗಳನ್ನು ನೀಡುವ ಯೋಜನೆಯನ್ನು ತಕ್ಷಣವೇ ಮುಂದುವರಿಸಬೇಕು ಎಂದು ಆಂಜನೇಯ ಸರಕಾರಕ್ಕೆ ಮನವಿ ಮಾಡಿದ್ದಾರೆ.