ಕೆಎಂಎಫ್ ಗದ್ದುಗೆ ಏರಲು ಅಖಾಡ ಸಿದ್ಧ
ರವೀಶ ಪವಾರ
ಧಾರವಾಡ: ಇದೇ ಮೊದಲ ಬಾರಿಗೆ ಹಾವೇರಿ ಜಿಲ್ಲೆಯಿಂದ ಬೇರ್ಪಟ್ಟ ಧಾರವಾಡ ಕೆಎಂಎಫ್ ಆಡಳಿತ ಮಂಡಳಿಗೆ ಚುನಾವಣೆ ಘೋಷಣೆಯಾಗಿದ್ದು, ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರದ ಗದ್ದುಗೆ ನಿಗದಿಗೆ ಅಖಾಡ ಸಿದ್ಧವಾಗಿದೆ.
ಇಷ್ಟು ವರ್ಷಗಳವರೆಗೆ ೧೨ ಸ್ಥಾನಕ್ಕೆ ಚುನಾವಣೆ ನಡೆಸಲಾಗುತ್ತಿತ್ತು. ಆದರೆ, ಧಾರವಾಡ ಕೆಎಂಎಫ್‌ನಿಂದ ಹಾವೇರಿ ಜಿಲ್ಲೆ ಬೇರ್ಪಟ್ಟ ಬಳಿಕ ಇದೇ ಮೊದಲ ಬಾರಿಗೆ ೯ ಸ್ಥಾನಕ್ಕೆ (ಮೊದಲು ಹಾವೇರಿ ೩ ಸ್ಥಾನ ಸೇರಿ ೧೨ ಇತ್ತು) ಚುನಾವಣೆ ನಡೆಸಲಾಗುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದೆ.
ಕಳೆದ ಎರಡು ಅವಧಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ತೆಕ್ಕೆಯಲ್ಲಿದ್ದ ಧಾರವಾಡ ಹಾಲು ಉತ್ಪಾದಕರ ಒಕ್ಕೂಟವನ್ನು ಸದ್ಯ ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಳ್ಳಲು ಎಲ್ಲ ರೀತಿಯ ಕಾರ್ಯತಂತ್ರ ರೂಪಿಸಿದೆ. ಆದರೆ, ಇತ್ತ ಅಧಿಕಾರ ಬಿಟ್ಟುಕೊಡದೇ ತಮ್ಮದೇ ಬೆಂಬಲಿತ ಸದಸ್ಯರು ಅಧಿಕಾರದ ಗದ್ದುಗೆಯಲ್ಲಿ ಇರಬೇಕು ಎನ್ನುವುದಕ್ಕೆ ಬಿಜೆಪಿಯೂ ಪ್ರತಿಯಾಗಿ ಚಾಣಾಕ್ಷತನದ ಹೆಜ್ಜೆ ಹಾಕುತ್ತಿದೆ.
೯ ಸ್ಥಾನಕ್ಕೆ ಚುನಾವಣೆ…
ಧಾರವಾಡ ಜಿಲ್ಲೆಗೆ ೩, ಗದಗ ಜಿಲ್ಲೆಗೆ ೩ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ೩ರಂತೆ ಸ್ಥಾನಗಳ ಹಂಚಿಕೆ ಇದ್ದು, ಆಯಾ ತಾಲೂಕಾ ವ್ಯಾಪ್ತಿಯಲ್ಲಿ ಈಗಾಗಲೇ ತಮ್ಮ ಮುಖಂಡರ ಕದ ತಟ್ಟಲು ಆಕಾಂಕ್ಷಿಗಳು ಮುಂದಾಗಿದ್ದಾರೆ.
ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಧಾರವಾಡ, ಅಳ್ನಾವರ, ನವಲಗುಂದ ಮತ್ತು ಅಣ್ಣಿಗೇರಿ ಸೇರಿ ೧, ಕಲಘಟಗಿ ತಾಲೂಕಿಗೆ ೧ ಮತ್ತು ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಸೇರಿ ೧ ಸ್ಥಾನ ಮೀಸಲಿದೆ.
ಗದಗ ಜಿಲ್ಲೆಯಲ್ಲಿ ರೋಣ-ಗಜೇಂದ್ರಗಡಕ್ಕೆ ೧, ಗದಗ ಮತ್ತು ನರಗುಂದ ತಾಲೂಕಿಗೆ ೧ ಹಾಗೂ ಮುಂಡರಗಿ, ಶಿರಹಟ್ಟಿ ತಾಲೂಕಿಗೆ ಸೇರಿ ೧ ಸ್ಥಾನ ನಿಗದಿಪಡಿಸಲಾಗಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿಯೂ ಶಿರಸಿ ತಾಲೂಕಿಗೆ ೧, ಸಿದ್ದಾಪೂರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ಸೇರಿ ೧, ಯಲ್ಲಾಪುರ, ದಾಂಡೇಲಿ, ಹಳಿಯಾಳ, ಮುಂಡಗೋ, ಅಂಕೋಲಾ, ಜೋಯಿಡಾ ಮತ್ತು ಕಾರವಾರ ಜಿಲ್ಲೆ ಸೇರಿ ೧ ಸ್ಥಾನವನ್ನು ಕಾಯ್ದಿರಿಸಲಾಗಿದೆ.
ಬಿಜೆಪಿ ಮೇಲುಗೈ ಇತ್ತು…
ಹಾವೇರಿ ಜಿಲ್ಲೆ ಧಾರವಾಡ ವ್ಯಾಪ್ತಿಯಲ್ಲಿ ಇದ್ದಾಗ ೧೨ ಜನ ಸದಸ್ಯರಲ್ಲಿ ೮ ಜನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಆಯ್ಕೆಯಾಗಿದ್ದರಿಂದ ಸರಳವಾಗಿಯೇ ಬಿಜೆಪಿ ತೆಕ್ಕೆಯಲ್ಲಿ ಕೆಎಂಎಫ್ ಇತ್ತು. ಈಗ ೯ ಜನ ಆಡಳಿತ ಮಂಡಳಿಯ ಸದಸ್ಯರ ಪೈಕಿ ೬ ಜನ ಬಿಜೆಪಿ ಬೆಂಬಲಿತರಿದ್ದು, ಮತ್ತೊಂದು ಬಾರಿ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಸಿದ್ಧರಾಗಿದ್ದಾರೆ.
ಅಲ್ಲದೇ ಸತತ ನಾಲ್ಕು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಬಿಜೆಪಿ ಬೆಂಬಲಿತ ಶಂಕರ ಮುಗದ ಅವರು ಕಳೆದ ಎರಡು ಅವಧಿಗೆ ಕೆಎಂಎಫ್ ಅಧ್ಯಕ್ಷರಾಗಿ ಯಶಸ್ವಿಯಾಗಿಯೇ ಕಾರ್ಯ ನಿರ್ವಹಿಸಿದ್ದಾರೆ. ಇದಕ್ಕೂ ಪೂರ್ವದಲ್ಲಿ ಕಾಂಗ್ರೆಸ್ ತೆಕ್ಕೆಯಲ್ಲಿ ಕೆಎಂಎಫ್ ಇತ್ತು ಎನ್ನುವುದೂ ಅಲ್ಲಗಳೆಯುವಂತಿಲ್ಲ.
ಸ್ಪರ್ಧೆಗೆ ಆಕಾಂಕ್ಷಿಗಳ ಪಟ್ಟಿ ಶುರು
ಈಗಷ್ಟೇ ಚುನಾವಣೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲಿಯೇ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಅಲ್ಲದೇ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದು ಈ ಹಿಂದೆ ಅವಿರೋಧವಾಗಿಯೇ ಆಯ್ಕೆಯಾಗುತ್ತಿದ್ದ ನಿರ್ದೇಶಕರ ಸ್ಥಾನಕ್ಕೆ ಪ್ರಸ್ತುತ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿ ಕೇಳಿಬರುತ್ತಿವೆ.