ಕೇಂದ್ರದ ಅನುದಾನ ಪಡೆಯಲು ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟ
ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದ ಕುರಿತು ವಾಸ್ತವದ ಅಂಶದ ಮೇಲೆ ನಾವು ಚರ್ಚೆ ಮಾಡಿದರೆ ಹೆಚ್ಚು ಅನುಕೂಲ ಇದೆ. ರಾಜಕೀಯ ಬೆರೆಸಿ ಮಾತನಾಡಿದರೆ ರಾಜ್ಯಕ್ಕೆ ನಷ್ಟವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲೆ ಮಾಜಿ ಮುಖ್ಯಮಂತ್ರಿ ಬಸವರಾಜ ಮಧ್ಯ ಪ್ರವೇಶಿಸಿ ಮಾತನಾಡಿ, 15ನೇ ಹಣಕಾಸು ಆಯೋಗ ಈಗಾಗಲೇ ವರದಿ ಕೊಟ್ಟು ಜಾರಿಯಲ್ಲಿದೆ. ನಾವು ಕಾಂಪ್ಲೆಕ್ಸ್ ಪರಿಸ್ಥಿತಿಯಲ್ಲಿ ಇದ್ದೇವೆ. ಈಗ ಎಲ್ಲವೂ ಮುಗಿದು ಹೋಗಿದೆ. ಆಯೋಗದ ಅವಧಿ 2026ರ ವರೆಗೆ ಇದೆ. ಈ ಸಂದರ್ಭದಲ್ಲಿ ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವುದು ರಾಜಕೀಯವಲ್ಲದೇ ಮತ್ತೇನು. ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದ್ದರೆ ಅದನ್ನು ಎಲ್ಲರೂ ಕೂಡಿಯೇ ಕೇಳೋಣ. ಅದರ ಬದಲು ನಮಗೆ 1.87 ಲಕ್ಷ ಕೋಟಿ ಬರುತ್ತಿತ್ತು ಎಂದು ಶೆಕ್ ಮಹಮೊದ್ ಲೆಕ್ಕ ಮಾತನಾಡಿದರೆ ಯಾವುದೇ ಪ್ರಯೋಜನ ಇಲ್ಲ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5,300 ಕೋಟಿ ರೂ. ಅನುದಾನ ಘೋಷಣೆ ಮಾಡಿತ್ತು. ಅದನ್ನು ಹೇಗೆ ಪಡೆಯಬೇಕು ಎನ್ನುವ ಬಗ್ಗೆ ಚರ್ಚೆ ಮಾಡೋಣ. 16ನೇ ಹಣಕಾಸು ಆಯೋಗ ಬರುತ್ತಿದೆ. ಅದರಲ್ಲಿ ನಮಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ರಾಜ್ಯಕ್ಕೆ ಅನುದಾನ ತರುವ ನಿಟ್ಟಿನಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ನಮಗೂ ಅಷ್ಟೇ ಜವಾಬ್ದಾರಿ ಇದೆ. ಇಬ್ಬರೂ ಸೇರಿ ರಾಜ್ಯಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡೋಣ ಎಂದರು.