ಕೇಂದ್ರ ವಿರುದ್ಧ ಇಂದು ದೆಹಲಿಯಲ್ಲಿ ಪ್ರತಿಭಟನೆ
ಬೆಂಗಳೂರು: ಕಳೆದ ೫ ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ೧.೮೭ ಲಕ್ಷ ಕೋಟಿ ರೂ. ನಷ್ಟು ಅನುದಾನ ಬಿಡುಗಡೆಯಾಗದೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರ ಬುಧವಾರ(ಫೆ.೭) ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಸಿಎಂ, ಡಿಸಿಎಂ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಸರ್ಕಾರದ ಮಂತ್ರಿಗಳು, ಶಾಸಕರು, ಸಂಸದರು, ಪರಿಷತ್ ಸದಸ್ಯರ ಸಹಿತ ೧೬೬ಕ್ಕೂ ಅಧಿಕ ಮಂದಿ ಭಾಗಿಯಾಗಲಿದ್ದಾರೆ.
ಈ ಸಾಲಿನ ಕೇಂದ್ರ ಬಜೆಟ್ ಸೇರಿದಂತೆ ಸತತವಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಹೀಗೇ ಮುಂದುವರಿದರೆ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಷ್ಟçದ ಬೇಡಿಕೆ ಇಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದಿದ್ದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ರಾಜ್ಯದ ಇಡೀ ಕಾಂಗ್ರೆಸ್ ಸರ್ಕಾರ ನನ್ನ ತೆರಿಗೆ ನನ್ನ ಹಕ್ಕು' ಎಂಬ ಅಭಿಯಾನದೊಂದಿಗೆ ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದೆ. ಎಲ್ಲಿ ಪ್ರತಿಭಟನೆ, ಯರ‍್ಯಾರು ಭಾಗಿ: ಜಂತರ್‌ಮಂತರ್‌ನಲ್ಲಿ ಬೆಳಗ್ಗೆ ೧೧ ಗಂಟೆಗೆ ಕರ್ನಾಟಕ ಸರ್ಕಾರ ಪ್ರತಿಭಟನೆ ಹಮ್ಮಿಕೊಂಡಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ರಾಜ್ಯಸಭೆ ಸದಸ್ಯರೂ ಆಗಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಉಳಿದಂತೆ ಸಂಪುಟದ ಎಲ್ಲ ೩೨ ಸಚಿವರು ಸೇರಿದಂತೆ ವಿಧಾನಸಭೆಯ ೧೩೬ ಹಾಗೂ ವಿಧಾನಪರಿಷತ್‌ನ ೩೦, ಸಂಸದರು ಭಾಗಿಯಾಗಲಿದ್ದಾರೆ. ಅಲ್ಲದೆ ಕೆಲವು ಕಾಂಗ್ರೆಸ್ ಮುಖಂಡರೂ ಈಗಾಗಲೇ ದೆಹಲಿ ತಲುಪಿದ್ದಾರೆ. ಚೊಚ್ಚಲ ಐತಿಹಾಸಿಕ ಹೋರಾಟ: ರಾಜ್ಯವೊಂದಕ್ಕೆ ಕೇಂದ್ರದ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಇಡೀ ರಾಜ್ಯ ಸರ್ಕಾರವೇ ದೆಹಲಿಗೆ ತೆರಳಿ ಪ್ರತಿಭಟನೆ ವ್ಯಕ್ತಪಡಿಸುತ್ತಿರುವ ಮೊದಲ ಪ್ರಕರಣ ಇದಾಗಿದೆ. ಈವರೆಗೆ ರಾಜಕೀಯ ಸ್ಥಿತ್ಯಂತರದ ಸಂದರ್ಭಗಳಲ್ಲಿ ರಾಷ್ಟçಪತಿ ಭವನದಲ್ಲಿ ಶಾಸಕರ ತಲೆಎಣಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಎರಡು ರಾಜ್ಯಗಳ ಬೆಂಬಲ ಲಭ್ಯ: ಈ ಪ್ರತಿಭಟನೆಗೆ ಕೇರಳ, ತಮಿಳುನಾಡು ಸರ್ಕಾರಗಳೂ ಕೈ ಜೋಡಿಸಲು ನಿರ್ಧರಿಸಿವೆ. ಫೆ. ೮ರಂದು ದೆಹಲಿಯ ಕೇರಳ ಹೌಸ್‌ನಿಂದ ಜಂತರ್ ಮಂತರ್‌ವರೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಅವರ ಸಂಪುಟದ ಸದಸ್ಯರು ಜಾಥಾ ಕೈಗೊಂಡ ಬಳಿಕ ಧರಣಿ ನಡೆಸಲಿದ್ದಾರೆ. ಇತ್ತ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಕೇರಳ ಸರ್ಕಾರ ನಡೆಸಲಿರುವ ಧರಣಿಯಲ್ಲಿ ತಾವು ಹಾಗೂ ತಮ್ಮ ಸಂಪುಟದ ಸಚಿವರು ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ತೆರಿಗೆ ಮರುಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳ ಬಗ್ಗೆ ತೋರುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಿ ಎರಡೂ ರಾಜ್ಯಗಳು ಜಂಟಿಯಾಗಿ ಪ್ರತಿಭಟಿಸಲಿವೆ ಎಂದು
ಎಕ್ಸ್' ಜಾಲತಾಣದಲ್ಲಿ ಹೇಳಿದ್ದಾರೆ.