ಕ್ಯಾಬಿನೆಟ್‌ನಲ್ಲಿ ರಾಜ್ಯದ ಯಾರಿಗೆ ಸ್ಥಾನ?
ರಮೇಶ ಅಳವಂಡಿ
ಹುಬ್ಬಳ್ಳಿ: ಎನ್‌ಡಿಎ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭಾನುವಾರ (ಜೂನ್ ೯) ನಡೆಯುತ್ತಿದ್ದು, ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರು ಯಾರು? ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಬಿಜೆಪಿ ೧೭ ಸ್ಥಾನ ಗೆದ್ದಿದ್ದರೆ, ಮೈತ್ರಿ ಪಕ್ಷ ಜೆಡಿಎಸ್ ೨ ಸ್ಥಾನ ಗಳಿಸಿದೆ. ಜೆಡಿಎಸ್‌ನಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮೋದಿಯವರ ಟೀಂ ಸೇರುವ ಸಿದ್ಧತೆ ಇದ್ದು, ಅವರು ಕೃಷಿ ಖಾತೆ ಅಪೇಕ್ಷಿತರಾಗಿದ್ದಾರೆ.
ಇತ್ತ ಬಿಜೆಪಿಯಿಂದ ಆಯ್ಕೆಯಾದವರಲ್ಲಿ ಈಗಾಗಲೇ ಮೋದಿ ಕ್ಯಾಬಿನೆಟ್‌ನಲ್ಲಿ ಕಲ್ಲಿದ್ದಲು, ಗಣಿ, ಸಂಸದೀಯ ಖಾತೆ ಸಚಿವರಾಗಿ ಮೋದಿ ವಿಶ್ವಾಸ ಗಳಿಸಿರುವ ಧಾರವಾಡ ಕ್ಷೇತ್ರದ ಸಂಸದ ಪ್ರಲ್ಹಾದ ಜೋಶಿ ಅವರಿಗೆ ಸಚಿವ ಸ್ಥಾನ ಈ ಬಾರಿಯೂ ಲಭಿಸುವ ಸಾಧ್ಯತೆ ಇದೆ.
ಮತ್ತೊಂದೆಡೆ ಇವರ ಹೆಸರು ಸ್ಪೀಕರ್ ಸ್ಥಾನಕ್ಕೆ ಕೇಳಿ ಬಂದಿದೆ. ಸತತ ಎರಡು ದಶಕಗಳ ಸಂಸದೀಯ ಪಟುವಾಗಿ, ಸಂಸದೀಯ ಸಚಿವರಾಗಿ ಸಂಸತ್ ನಿಭಾಯಿಸಿದ ಅನುಭವ ಇರುವ ಹಿನ್ನೆಲೆಯಲ್ಲಿ ಸ್ಪೀಕರ್ ಸ್ಥಾನಕ್ಕೂ ಅವರ ಹೆಸರು ಓಡಾಡುತ್ತಿದೆ.
ಮಾಜಿ ಮುಖ್ಯಮಂತ್ರಿಗಳು ಹಾಗೂ ಇದೇ ಪ್ರಥಮ ಬಾರಿಗೆ ಸಂಸದರಾದ ಜಗದೀಶ ಶೆಟ್ಟರ ಹಾಗೂ ಬಸವರಾಜ ಬೊಮ್ಮಾಯಿ ಲಿಂಗಾಯತ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ.
ಶೆಟ್ಟರ ಅವರನ್ನು ಪಕ್ಷಕ್ಕೆ ಪುನಃ ಕರೆತಂದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಶೆಟ್ಟರ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ದೊರಕಿಸಿಕೊಡಲು ಪ್ರಯತ್ನ ನಡೆಸಿದ್ದಾರೆ. ಬೊಮ್ಮಾಯಿ ಅವರ ಪರವಾಗಿ ಪ್ರಲ್ಹಾದ ಜೋಶಿ ಹಾಗೂ ಅಮಿತ್ ಶಾ ಅವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದಿದೆ.
ಬೊಮ್ಮಾಯಿ ಅವರು ತಮ್ಮ ಪುತ್ರನನ್ನು ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಕಣಕ್ಕಿಳಿಸುತ್ತಿರುವುದರಿಂದ ಅವರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಕಡಿಮೆ ಎಂದು ಉನ್ನತ ಮೂಲಗಳು ತಿಳಿಸಿವೆ.
ತಮ್ಮ ಪುತ್ರ ಹಾಗೂ ಶಿವಮೊಗ್ಗದ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಈ ಬಾರಿ ಮೋದಿ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ಲಭಿಸಲೇ ಬೇಕು ಎಂಬ ಜಿದ್ದಿನಿಂದ ಪಕ್ಷದ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ತಂತ್ರ ರೂಪಿಸಿದ್ದಾರೆನ್ನಲಾಗಿದೆ.
ಆದರೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಇರುವುದು, ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪ ಅವರೇ ಇರುವುದರಿಂದ ಸಚಿವ ಸ್ಥಾನ ಸಿಗುವುದು ಅಷ್ಟು ಸಲೀಸಲ್ಲ ಎನ್ನಲಾಗಿದೆ.
ಒಂದು ವೇಳೆ ರಾಜ್ಯ ಸಚಿವ ಸ್ಥಾನವನ್ನು ಕರ್ನಾಟಕದವರಿಗೆ ಕೊಟ್ಟರೆ ಡಾ. ಸಿ.ಎನ್ ಮಂಜುನಾಥ್ (ಇವರ ಪರ ಎಚ್.ಡಿ ಕುಮಾರಸ್ವಾಮಿ ಅವರೂ ಮನವಿ ಮಾಡಿದ್ದಾರೆ), ಹಿಂದುಳಿದ ವರ್ಗದವರ ಕೋಟಾದಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಪಿ.ಸಿ ಮೋಹನ್, ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸಿಗಲಿದೆ. ಹಿರಿಯ ಸಂಸದರು ಎಂಬ ಕಾರಣಕ್ಕೆ ಶಿವಮೊಗ್ಗದ ಬಿ.ವೈ ರಾಘವೇಂದ್ರ ಹಾಗೂ ಬಾಗಲಕೋಟೆ ಸಂಸದ ಪಿ.ಸಿ ಗದ್ದಿಗೌಡರ ಅವರಿಗೂ ಲಭಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಳೆದ ಬಾರಿ ಚಿತ್ರದುರ್ಗದಿಂದ ಆಯ್ಕೆಯಾದ ನಾರಾಯಣಸ್ವಾಮಿ ಅವರಿಗೆ ಮೋದಿ ಕ್ಯಾಬಿನೆಟ್‌ನಲ್ಲಿ ರಾಜ್ಯ ಸಚಿವ ಸ್ಥಾನ ಲಭಿಸಿತ್ತು. ಈ ಬಾರಿಯೂ ಅದೇ ಕ್ಷೇತ್ರದಿಂದ ಆಯ್ಕೆಯಾ ಮಾಜಿ ಉಪಮುಖ್ಯಮಂತ್ರಿ ಹಾಗೂ ಇದೇ ಪ್ರಥಮ ಬಾರಿಗೆ ಸಂಸದರಾದ ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ಜಾಕ್‌ಪಾಟ್ ಹೊಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವಿಜಯಪುರ ಹಿರಿಯ ಸಂಸದ ರಮೇಶ ಜಿಗಜಿಣಗಿ ಅವರೂ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರೂ, ವಯಸ್ಸು ಹಾಗೂ ಈಗಾಗಲೇ ಒಂದು ಬಾರಿ ಸಚಿವರಾಗಿ ಮೋದಿ ಕ್ಯಾಬಿನೆಟ್‌ನಲ್ಲಿ ಕಾರ್ಯನಿರ್ವಹಿಸಿರುವುದರಿಂದ ಕಾರಜೋಳ ಅವರಿಗೇ ಸಚಿವ ಸ್ಥಾನ ಸಿಗುತ್ತದೆ ಎಂದು ತಿಳಿದಿದೆ.
ಬಿಜೆಪಿಗೆ ಕಿತ್ತೂರು ಕರ್ನಾಟಕದಲ್ಲಿ ಯಾವ ರೀತಿ ಬೆಂಬಲ, ಸ್ಥಾನ ಲಭಿಸಿದೆಯೊ, ಹಳೇ ಮೈಸೂರು ಭಾಗದಲ್ಲಿಯೂ ಅಷ್ಟೇ ಬೆಂಬಲ ಲಭಿಸಿದೆ. ಹೀಗಾಗಿ, ಯಾವ ಭಾಗದವರು ಕೇಂದ್ರ ಸಚಿವರಾಗಿ ಹೊರಹೊಮ್ಮಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಯಾರೆಲ್ಲ ರೇಸ್‌ನಲ್ಲಿ
ಪ್ರಲ್ಹಾದ ಜೋಶಿ (ಸ್ಪೀಕರ್ ಸ್ಥಾನಕ್ಕೂ ಕೇಳಿಬರುತ್ತಿದೆ)
ಎಚ್.ಡಿ ಕುಮಾರಸ್ವಾಮಿ (ಕೃಷಿ ಖಾತೆ ಅಪೇಕ್ಷಿತರು)
ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ (ಲಿಂಗಾಯತ ಕೋಟಾ)
ಗೋವಿಂದ ಕಾರಜೋಳ