For the best experience, open
https://m.samyuktakarnataka.in
on your mobile browser.

ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್

12:04 AM Mar 14, 2024 IST | Samyukta Karnataka
ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್

ಬೆಂಗಳೂರು: ಕಂದಾಯ ಇಲಾಖೆ ಸಾರ್ವಜನಿಕರಿಂದ ಎಲ್ಲಾ ಹಂತದಲ್ಲೂ ಅತಿಹೆಚ್ಚು ಅವಲಂಬನೆ ಹೊಂದಿದ ಇಲಾಖೆಯಾಗಿದ್ದು, ನೌಕರರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಯೋಜನಾ ನೀಲಿನಕ್ಷೆ ಹೊಂದಿರಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕಿವಿಮಾತು ಹೇಳಿದರು. ಬುಧವಾರ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಕಂದಾಯ ಆಯುಕ್ತಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ ೧,೦೦೦ ಪರವಾನಗಿ ಭೂಮಾಪಕರುಗಳಿಗೆ ಪರವಾನಗಿ ಪ್ರಮಾಣ ಪತ್ರ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರತಿಯೊಂದು ಮನೆಗೂ ಸಂಪರ್ಕವಿರುವ ಏಕೈಕ ಇಲಾಖೆ ಕಂದಾಯ ಇಲಾಖೆ. ಜಾತಿ-ಆದಾಯ ಪ್ರಮಾಣ ಪತ್ರದಿಂದ ಜಮೀನು ದಾಖಲೆ, ಮಾರಾಟ- ಖರೀದಿವರೆಗೆ ನೇರ ಅಥವಾ ಪರೋಕ್ಷವಾಗಿ ಜನ ಸಾಮಾನ್ಯರು ಕಂದಾಯ ಇಲಾಖೆಯನ್ನು ಅವಲಂಭಿಸಿರುತ್ತಾರೆ. ಎಷ್ಟೇ ಕೆಲಸದ ಒತ್ತಡ ಇದ್ದರೂ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಯೋಜನಾ ನೀಲಿನಕ್ಷೆ ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ೧೮೯೦ರಲ್ಲಿ ಬ್ರಿಟಿಷರ ಕಾಲದಲ್ಲಿ ಕೊನೆಯ ಬಾರಿ ಸರ್ವೇ ಕೆಲಸ ಆಗಿತ್ತು. ಆದರೆ ತದನಂತರ ಸರ್ವೇ ಕೆಲಸ ಆಗಿಲ್ಲ. ಇದೀಗ ರಾಜ್ಯಾದ್ಯಂತ ಮರು-ಸರ್ವೇ ಕೆಲಸ ಆರಂಭಿಸಿದ್ದೇವೆ. ಈಗಾಗಲೇ ೨೧ ತಾಲೂಕುಗಳಲ್ಲಿ ಮರು-ಸರ್ವೇ ಕೆಲಸ ಚಾಲ್ತಿಯಲ್ಲಿದೆ. ಸರ್ವೇ ಕೆಲಸ ಸಂಪೂರ್ಣವಾಗಿ ಮುಗಿದು ಮಾಹಿತಿಗಳು ಡಿಜಿಟಲೀಕರಣಗೊಳ್ಳದೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಆದರೆ, ಅದಕ್ಕೆ ಮಾನವ ಸಂಪನ್ಮೂಲದ ಅಗತ್ಯವೂ ಇದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಿ ಚರ್ಚಿಸಿದಾಗ ಕೂಡಲೇ ಅವರು ೧೦೦೦ ಜನ ಪರವಾನಗಿ ಭೂಮಾಪಕರ ನೇಮಕಾತಿಗೆ ಒಪ್ಪಿಗೆ ಸೂಚಿಸಿದರು. ಇದಲ್ಲದೆ, ೩೬೪ ಸರ್ಕಾರಿ ಭೂ ಮಾಪಕರು ಹಾಗೂ ೨೭ ಜನ ಎಡಿಎಲ್‌ಆರ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ಮುಗಿದು ಎಲ್ಲಾ ಭೂ ಮಾಪಕರೂ ಕಾರ್ಯೋನ್ಮುಖರಾಗಲಿದ್ದಾರೆ ಎಂದರು.
ಕಂದಾಯ ಇಲಾಖೆಯ ಕೆಲ ಹಂತದ ಕಂದಾಯ ನಿರೀಕ್ಷಕರು-ಗ್ರಾಮ ಲೆಕ್ಕಿಗರೂ ಸಹ ಇ-ಆಫೀಸ್ ಬಳಕೆ ಮಾಡಬೇಕು. ಆಗ ಮಾತ್ರ ಜನರಿಗೆ ಕಾಗದ ರಹಿತ ಪಾರದರ್ಶಕ ಸೇವೆ ನೀಡಲು ಸಾಧ್ಯ. ಇಲಾಖೆಯ ಕೆಲಸದಲ್ಲಿ ಪಾರದರ್ಶಕತೆ ಇರಬೇಕು ಎಂಬ ನಿಟ್ಟಿನಲ್ಲಿ ಇಂದು ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳಿಗೂ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಕಡತ ವಿಲೇವಾರಿ ಆನ್‌ಲೈನ್‌ನಲ್ಲಿ ಸಾಧ್ಯವಾದಷ್ಟು ವೇಗಗೊಳಿಸಬೇಕು. ಜನಪರ ಆಡಳಿತ ನಮ್ಮೆಲ್ಲರ ಧ್ಯೇಯವಾಗಬೇಕು ಎಂದು ತಿಳಿಸಿದರು.
ಶಾಸಕ ರಿಜ್ವಾನ್ ಅರ್ಷದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್‌ಕುಮಾರ್, ಸರ್ವೇ ಇಲಾಖೆಯ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.